
ಬೆಂಗಳೂರು (ಆ.30): ‘ಏನ್ರೀ.. ಏಕವಚನದಲ್ಲಿ ಮಾತನಾಡುತ್ತೀರಿ.. ನಾನು ನಿಮ್ಮ ಮನೆ ಜೀತಕ್ಕೆ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಬಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಒಂದು ಲಕ್ಷ ಮನೆಗಳನ್ನು ಕಾಂಗ್ರೆಸ್ ಸರ್ಕಾರ ಮಂಜೂರಾತಿ ಮಾಡಿದ್ದು, ಸೋಮಣ್ಣ ಬಂದು ಹಾಳು ಮಾಡಿದ್ದಾನೆ ಎಂದು ಏಕವಚನ ಪದ ಪ್ರಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ವಾಸ್ತವಾಂಶ ತಿಳಿಯದೆ ಮಾತನಾಡಿದ್ದಾರೆ.
ಅವರ ಮಾತುಗಳು ಬಹಳಷ್ಟು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೃಷ್ಣಪ್ಪ ಮತ್ತು ಅವರ ಪುತ್ರ ಪ್ರಿಯಕೃಷ್ಣ ಅವರ ಪೂರ್ವಾಪರ ಏನು ಎನ್ನುವುದು ಎಲ್ಲರಿಗೂ ಗೊತ್ತು. ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ 10 ಸಾವಿರ ಕೋಟಿ ರು. ಮೌಲ್ಯದ 800 ಎಕರೆ ಜಾಗವನ್ನು ಕಬಳಿಸಿದ ಮಾಜಿ ವಸತಿ ಸಚಿವರ ವಿರುದ್ಧ ಕಳೆದ ವಿಧಾನಸಭಾ ಅಧಿವೇಶನದಲ್ಲಿ ವಿಶೇಷ ಕಾರ್ಯಪಡೆ ರಚನೆಗೆ ಆದೇಶವಾಗಿದೆ. ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಜಮೀನು ತಮ್ಮ ಹೆಸರಿಗೆ ಬರೆಸಿಕೊಂಡು ಅದನ್ನು ಹಂಚುವ ಕೆಲಸ ಮಾಡಿದರು. ಇವರ ಕಾಲದಲ್ಲಿ ಆದ ಹಗರಣ ಅದು. ನಾನು ಯಾವುದು ರದ್ದು ಮಾಡಿದ್ದೇನೆ ತೋರಿಸಲಿ ಎಂದು ಕಿಡಿಕಾರಿದರು.
ಮಾರ್ಚ್‌ನೊಳಗೆ 16 ಲಕ್ಷ ಮನೆ ಹಸ್ತಾಂತರ: ಸಚಿವ ಸೋಮಣ್ಣ
ಚರ್ಚೆಗೆ ಸವಾಲ್: ಸಿದ್ದರಾಮಯ್ಯ 15 ಲಕ್ಷ ಮನೆ ಕಟ್ಟಿದೆ ಎಂದಿದ್ದರು. ಆದರೆ ಅವರು ನಿರ್ಮಾಣ ಮಾಡಿದ್ದು ಕೇವಲ 7 ಲಕ್ಷ ಮನೆ ಮಾತ್ರ. ಕೊನೆಯದಾಗಿ 2 ಕೋಟಿ ರು. ಬಿಟ್ಟು 18 ಲಕ್ಷ ಮನೆ ಕಟ್ಟಲು ಸ್ಯಾಂಕ್ಷನ್ ಮಾಡಿ ಹೋಗಿದ್ದೀರಾ. ಏನೂ ಮಾಡಲಿಲ್ಲ ಎಂದು ಆರೋಪ ಮಾಡುತ್ತಾರೆ. ಯಾವ ಮಾನದಂಡವನ್ನು ಇಟ್ಟುಕೊಂಡು ನೀವು ಆರೋಪ ಮಾಡುತ್ತೀರಾ? ನೀವೇ ದಿನಾಂಕ ನಿಗದಿ ಮಾಡಿ, ಸಾರ್ವಜನಿಕವಾಗಿ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ ಎಂದು ಸಚಿವರು ಬಹಿರಂಗವಾಗೇ ಸವಾಲು ಹಾಕಿದರು.
ಕ್ಷಮೆ ಅಲ್ಲ, ನೇಣಿಗೆ ಏರಲು ಸಿದ್ಧ: ಕನಕ ಭವನ ಕಟ್ಟಿಸಿ, ಅದರ ಹಣದಲ್ಲಿಯೇ ಮನೆ ಕಟ್ಟಿಸಿಕೊಂಡ ಎಂದು ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಗೊತ್ತು. ನನ್ನ ಕ್ಷೇತ್ರದಲ್ಲಿಯೇ ಅವರ ಬಂಗಲೆ ಇದೆ. ಅದರ ಬಗ್ಗೆ ನಾನು ಮಾತನಾಡಲ್ಲ. ಯಾವ್ಯಾವ ರಸ್ತೆಯಲ್ಲಿ ಆಸ್ತಿ ಇದೆ ಎಂದು ನಾನೂ ಹೇಳಲಾ ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ.
3 ತಿಂಗಳೊಳಗೆ ಗ್ರಂಥಾಲಯ ಸಜ್ಜುಗೊಳಿಸಲು ಸೂಚನೆ: ಸಚಿವ ವಿ.ಸೋಮಣ್ಣ
ನೀವು ಸೋತಿಲ್ಲವೇ? ಅದೃಷ್ಟಯಾವಾಗಲೂ ಇರಲ್ಲ, ನಿಮಗೂ ಅದೃಷ್ಟಕೈ ಕೊಡುತ್ತೆ. ನೀವು ಎಷ್ಟು ಪರ್ಸೆಂಟ್ ಪಡೆದಿದ್ದೀರಿ ನಮಗೂ ಗೊತ್ತಿದೆ. 600 ಚಿಲ್ಲರೆ ಎಕರೆಗೆ ರೀಡೂ ಮಾಡಿದ್ದರಲ್ಲ, ನಿಮಗೆ ಎಷ್ಟು ಸಿಕ್ಕಿದೆ? ನಾಳೆ ಬೆಳಗ್ಗೆ ಸಾರ್ವಜನಿಕರ ಮುಂದೆ ಕ್ಷಮೆ ಅಲ್ಲ, ನೇಣಿಗೇರಲು ಸಿದ್ಧ. ನೀವು, ನಾವೂ ಇಬ್ಬರೂ ಒಂದೇ ಬಾರಿ ರಾಜಕೀಯಕ್ಕೆ ಪ್ರವೇಶ ಕೊಟ್ಟವರೇ, ಬಾಯಿ ಬಿಟ್ಟರೆ ಸೋಮಣ್ಣ ಎಂದು ಆರೋಪ ಮಾಡುತ್ತೀರಿ. ನೀವು ಒಂದು ಸಮೂಹ ನಾಯಕರಾಗಿದ್ದೀರಿ. ಇನ್ನು ಮುಂದಾದರೂ ಸರಿಯಾಗಿ ಮಾತನಾಡಿ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.