ಸೋಮಣ್ಣ ಸಂಘಟನಾ ಚಾತುರ್ಯಕ್ಕೆ ಬಿಜೆಪಿ ಉಡುಗೊರೆ: ಅನ್ಯಾಯ ಸರಿಪಡಿಸಿದ ಹೈಕಮಾಂಡ್‌

Published : Jun 10, 2024, 08:15 AM IST
ಸೋಮಣ್ಣ ಸಂಘಟನಾ ಚಾತುರ್ಯಕ್ಕೆ ಬಿಜೆಪಿ ಉಡುಗೊರೆ: ಅನ್ಯಾಯ ಸರಿಪಡಿಸಿದ ಹೈಕಮಾಂಡ್‌

ಸಾರಾಂಶ

ರಾಜ್ಯದ ಮಾಜಿ ಸಚಿವ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವಿ.ಸೋಮಣ್ಣ ಅವರ ಒಂದು ವರ್ಷದ ರಾಜಕೀಯ ವನವಾಸ ಅಂತ್ಯಗೊಂಡಿದ್ದು, ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಬೆನ್ನಲ್ಲೇ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ. 

ವಿಜಯ್ ಮಲಗಿಹಾಳ

ಬೆಂಗಳೂರು (ಜೂ.10): ರಾಜ್ಯದ ಮಾಜಿ ಸಚಿವ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವಿ.ಸೋಮಣ್ಣ ಅವರ ಒಂದು ವರ್ಷದ ರಾಜಕೀಯ ವನವಾಸ ಅಂತ್ಯಗೊಂಡಿದ್ದು, ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಬೆನ್ನಲ್ಲೇ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ. ಕೆಲವು ತಿಂಗಳುಗಳ ಹಿಂದೆ ಬಿಜೆಪಿಯಲ್ಲಿ ತಮಗೆ ಭವಿಷ್ಯ ವಿಲ್ಲ ಎಂದು ಬೇಸರಗೊಂಡು ಇನ್ನೇನು ಪಕ್ಷ ತೊರೆಯಬೇಕಾಗಬಹುದೇನೋ ಎಂಬಷ್ಟರ ಮಟ್ಟಿಗೆ ಚಿಂತನೆ ನಡೆಸಿದ್ದ ಸೋಮಣ್ಣ ಅವರಿಗೆ ಈಗ ಬಿಜೆಪಿಯಲ್ಲೇ ಅದೃಷ್ಟ ದೇವತೆ ಮನೆ ಬಾಗಿಲಿಗೆ ಬಂದಂತಾಗಿದೆ. ಈ ಬಾರಿ ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆ ಬಲವಾಗಿ ನಡೆದಿತ್ತು. 

ಅಲ್ಲದೆ, ಹಿರಿಯ ಸಂಸದರಾಗಿ ಅದೇ ಸಮುದಾಯದಿಂದ ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್, ಶಿವಮೊಗ್ಗದ ಬಿ.ವೈ.ರಾಘವೇಂದ್ರ ಅವರೂ ಇದ್ದರು. ಆದರೆ, ಅವರೆಲ್ಲರನ್ನೂ ಬಿಟ್ಟು ತುಮ ಕೂರಿನಿಂದ ಮೊದಲಬಾರಿಗೆ ಸಂಸದರಾಗಿ ಚುನಾಯಿತರಾದ ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ಹೈಕಮಾಂಡ್‌ ಅಚ್ಚರಿ ಮೂಡಿಸಿದೆ. ಈ ಮೂಲಕ ಸೋಮಣ್ಣ ಅವರ ಸಂಘಟನಾ ಸಾಮರ್ಥಕ್ಕೆ ಮನ್ನಣೆ ನೀಡಿದೆ. ಜತೆಗೆ ಕೇವಲ ಒಂದು ಸಮುದಾಯ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾಗಿ ಪ್ರಭಾವ ಹೊಂದಿದ್ದರೆ ಸಾಲದು. ರಾಜ್ಯವ್ಯಾಪಿ ಪ್ರಭಾವ ಹೊಂದಿರಬೇಕು. ಹಿಡಿದ ಕೆಲಸವನ್ನು ಮಾಡಿ ಮುಗಿಸುವಂಥ ಚಾಕಚಕ್ಯತೆ ಇರಬೇಕು ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದಂತಿದೆ. 

ಸಂವಿಧಾನ ಬದಲಿಸ ಹೊರಟಿದ್ದವರು ಈಗ ಕಣ್ಣಿಗೆ ಒತ್ತಿಕೊಳಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ

ಮೇಲಾಗಿ ಸೋಮಣ್ಣ ಅವರಿಗೆ ಅನ್ಯಾಯವಾಗಿದೆ ಎಂಬ ಮಾತು ಕೂಡ ಸಾರ್ವತ್ರಿಕವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರು ತಾವು ಪ್ರತಿನಿಧಿ ಸುತ್ತಿದ್ದ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಬಿಟ್ಟುಕೊಟ್ಟು ಪಕ್ಷದ ವರಿಷ್ಠರ ಅಣತಿಯಂತೆ ಚಾಮ ರಾಜ ನಗರ ಮತ್ತು ವರುಣ ಕ್ಷೇತ್ರಗಳಿಂದ ಸ್ಪರ್ಧೆಗಿಳಿದರು. ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಕಷ್ಟ ಎಂಬುದು ಗೊತ್ತಿದ್ದರೂ ಪಕ್ಷದ ನಾಯಕರ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿದರು. ಆದರೆ, ಎರಡರಲ್ಲೂ ಸೋಲುಂಟಾಯಿತು. ಇದಕ್ಕೆ ಸ್ವಪಕ್ಷೀಯರ ಕುಮ್ಮಕ್ಕೂ ಕಾರಣವಾಗಿತ್ತು. ಸೋಲಿನಿಂದ ಕಂಗೆಟ್ಟ ಸೋಮಣ್ಣ ಅವರು ತಮ್ಮ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಆರೋಪಿಸಿ ಪಕ್ಷದ ವರಿಷ್ಠರಿಗೂ ದೂರು ನೀಡಿದರು. 

ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ಅದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆಯನ್ನೂ ವರಿಷ್ಠರ ಬಳಿ ಇಟ್ಟರು. ಆದರೆ, ವರಿಷ್ಠರು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಆ ಹುದ್ದೆಗೆ ನೇಮಿಸಿತು. ಇದರಿಂದ ಮತ್ತಷ್ಟು ಬೇಸರಗೊಂಡ ಸೋಮಣ್ಣ ರಾಜ್ಯ ಸಭಾ ಚುನಾವಣೆಯಲ್ಲಿ ತಮಗೆ ಅವಕಾಶ ನೀಡುವಂತೆ ಬೇಡಿಕೆ ಇಟ್ಟರು. ಅದು ಕೂಡ ಕಾರ್ಯಗತ ವಾಗಲಿಲ್ಲ. ಆಗಲೇ ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆಯತ್ತ ಬೆರಳು ತೋರಿತು. ತುಮಕೂರು ಕ್ಷೇತ್ರ ಹಾಲಿ ಸಂಸದರಾಗಿದ್ದ ಜಿ.ಎಸ್. ಬಸವರಾಜು ಅವರು ವಯೋ ಕಾರಣದಿಂದ ರಾಜಕೀಯ ನಿವೃತ್ತಿಯಾಗುವ ಇಂಗಿತ ವ್ಯಕ್ತಪಡಿಸಿದ್ದರಿಂದ ಆ ಸ್ಥಾನಕ್ಕೆ ಸೋಮಣ್ಣ ಅವರನ್ನು ಕಣಕ್ಕಿಳಿಸಲು ವರಿಷ್ಠರು ನಿರ್ಧರಿಸಿದರು. 

ಮೋದಿ ಪ್ರಮಾಣವಚನ: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಂಭ್ರಮ

ಅದಕ್ಕೂ ಮೊದಲು ವರಿಷ್ಠರ ನಿರ್ದೇಶನದಂತೆ ಸೋಮಣ್ಣ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮುನಿಸು ಅಂತ್ಯಗೊಳಿಸಿದರು. ಚಿರಪರಿಚಿತವಾಗಿದ್ದರೂ ತುಮಕೂರು ಕ್ಷೇತ್ರ ಪ್ರವೇಶ ಅಷ್ಟು ಸುಲಭವಾಗಿರಲಿಲ್ಲ. ಸ್ಥಳೀಯ ಮುಖಂಡರು, ಅದ ರಲ್ಲೂ ಮಾಜಿಸಚಿವ ಜೆ.ಸಿ.ಮಾಧುಸ್ವಾಮಿಮೊದಲಾದವರು ತೀವ್ರವಾಗಿ ವಿರೋಧಿಸಿದರು. ಅದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ ಸೋಮಣ್ಣ ಅಂತಿಮವಾಗಿ ಗೆಲುವು ಸಾಧಿಸಿ ದರು. ಇದೀಗ ಪ್ರಧಾನಿನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಕೊನೆಗೂ ಸೋಮಣ್ಣ ಅವರ ಸಂಘಟನಾ ಶಕ್ತಿ, ಕಾರ್ಯವೈಖರಿಯನ್ನು ಗುರುತಿಸಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ