ಉತ್ತರ ಕರ್ನಾಟಕಕ್ಕೆ ಕೊಟ್ಟ ಭರವಸೆ ಈಡೇರಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌.ಅಶೋಕ್‌

Published : Dec 11, 2025, 07:38 AM IST
R Ashok

ಸಾರಾಂಶ

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ನೀಡಿರುವ ಭರವಸೆ ಹಾಗೂ ಯಾವ, ಯಾವ ಭರವಸೆಗಳನ್ನು ಈಡೇರಿಸಲಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ವಿಧಾನಸಭೆ (ಡಿ.11): ಉತ್ತರ ಕರ್ನಾಟಕದ ಜನ ಸಮಸ್ಯೆಗಳಿಂದ ರಕ್ತಕಣ್ಣೀರು ಹಾಕುತ್ತಿದ್ದಾರೆ. ಆದರೆ, ಸರ್ಕಾರ ಹುಸಿ ಭರವಸೆಗಳ ಮೂಲಕ ಮೊಸಳೆ ಕಣ್ಣೀರು ಸುರಿಸುತ್ತಿದೆ. ಹೀಗಾಗಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ನೀಡಿರುವ ಭರವಸೆ ಹಾಗೂ ಯಾವ, ಯಾವ ಭರವಸೆಗಳನ್ನು ಈಡೇರಿಸಲಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ. ಉ-ಕದ ಸಮಸ್ಯೆಗಳ ಬಗ್ಗೆ ಮಾತನಾಡಿದ ಅಶೋಕ್‌, ಪ್ರತಿ ವರ್ಷ ಬೆಳಗಾವಿಯ ಅಧಿವೇಶನದಲ್ಲಿ ಉ-ಕ ಚರ್ಚೆ ಆದ ಬಳಿಕ ಮುಖ್ಯಮಂತ್ರಿಗಳು ಸಾಲು-ಸಾಲು ಘೋಷಣೆ ಮಾಡುತ್ತಾರೆ.

ಆದರೆ, ಆ ಯಾವ ಭರವಸೆಗಳೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ, ಯಾವ, ಯಾವ ಭರವಸೆಗಳನ್ನು ಈಡೇರಿಸಲಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಈ ಭಾಗಕ್ಕೆ ಅನ್ಯಾಯ ಮಾಡಿದರೆ ಜನರ ಶಾಪ ತಟ್ಟುತ್ತದೆ ಎಂದರು. ಈ ಭಾಗದ ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿ ರಚಿಸಿ ವರದಿ ಪಡೆಯುವುದಾಗಿ ಸರ್ಕಾರ ಹೇಳಿತ್ತು. ಆದರೆ, ಕಬ್ಬು, ಮುಸುಕಿನ ಜೋಳ ಸೇರಿದಂತೆ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಿಲ್ಲ. ರೈತರ ಹೋರಾಟಕ್ಕೆ ಸ್ಪಂದಿಸಿಲ್ಲ. ಈ ಭಾಗದಲ್ಲಿ ಹಲವು ಇಲಾಖೆಗಳಲ್ಲಿನ ಶೇ.10-20ರಷ್ಟು ಅನುದಾನವೂ ಖರ್ಚಾಗಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ನೀಡಿರುವ ಭರವಸೆ ಹಾಗೂ ಈಡೇರಿಕೆ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಅಶೋಕ್‌ ಆಗ್ರಹಿಸಿದರು.

ಪ್ರವಾಹ, ಬರ ಸಂದರ್ಭಗಳಲ್ಲಿ ಸಕಾಲದಲ್ಲಿ ಪರಿಹಾರ ನೀಡುವುದಿಲ್ಲ. ಪ್ರವಾಹದ ಸಂದರ್ಭದಲ್ಲಿ ಜನರು ಗಂಜಿ ಕೇಂದ್ರದಲ್ಲಿರುತ್ತಾರೆ. ಹೀಗಾಗಿ, ಬಿಜೆಪಿ ಅವಧಿಯಲ್ಲಿ ಒಂದೆರಡು ತಿಂಗಳಲ್ಲೇ ಪರಿಹಾರ ನೀಡಿದ್ದೇವೆ. ಆದರೆ, ಕಾಂಗ್ರೆಸ್‌ ಸರ್ಕಾರ 7-8 ತಿಂಗಳಾದರೂ ಪರಿಹಾರ ನೀಡುತ್ತಿಲ್ಲ. ನೆರೆ ಸಮಯದಲ್ಲಿ ಸಿದ್ದರಾಮಯ್ಯನವರು ವೈಮಾನಿಕ ಸಮೀಕ್ಷೆ ನಡೆಸುತ್ತಾರೆ. ಆದರೆ, ಪರಿಹಾರ ನೀಡುವಾಗ ಕೇಂದ್ರಕ್ಕಾಗಿ ಕಾಯುತ್ತಾರೆ. ಕೇಂದ್ರಕ್ಕಾಗಿ ಕಾಯದೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿಲ್ಲ. ಹೀಗಾಗಿ, ರೈತರಿಗೆ ಬೆಳೆ ಬೆಳೆಯಲಾಗದೆ ಸಮಸ್ಯೆಯಾಗಿದೆ. ಬೆಳೆಗೆ ನೀರು ಬಿಡದೆ ಆಗಿರುವ ನಷ್ಟಕ್ಕೆ ಪ್ರತಿ ಎಕರೆಗೆ 25,000 ರೂ.ಪರಿಹಾರ ನೀಡಬೇಕು ಎಂದು ಅಶೋಕ್‌ ಒತ್ತಾಯಿಸಿದರು.

ಕೃಷ್ಣಾ ಮೇಲ್ದಂಡೆ-3 ಯೋಜನೆಗೆ ಶೇ.20ರಷ್ಟು ಯೋಜನಾ ವೆಚ್ಚ ಕಡಿತ

ಕೃಷ್ಣಾ ಮೇಲ್ದಂಡೆ-3ನೇ ಹಂತದ ಯೋಜನೆಯ ಅನುಷ್ಠಾನಕ್ಕೆ ಗ್ಯಾರಂಟಿ ಯೋಜನೆ ಕಡಿತಗೊಳಿಸಬೇಕು ಅಥವಾ ಇಲಾಖೆಗಳಿಗೆ ನೀಡಿರುವ ಅನುದಾನದಲ್ಲಿ ಶೇ.20ರಷ್ಟು ಕಡಿತಗೊಳಿಸಬೇಕು ಎಂದು ಆರ್ಥಿಕ ಇಲಾಖೆ ವರದಿ ನೀಡಿದೆ. ಈ ಬಗ್ಗೆ ಸಿದ್ದರಾಮಯ್ಯನವರು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಆರ್‌. ಅಶೋಕ್‌ ಒತ್ತಾಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಜನಪ್ರಿಯತೆ ಸಹಿಸಲು ಸಂಕಷ್ಟ: ಬಿ.ವೈ.ವಿಜಯೇಂದ್ರ
ಖಾಲಿ ಇರುವ ವೈದ್ಯ, ಸಿಬ್ಬಂದಿ ಹುದ್ದೆ ತಿಂಗಳಲ್ಲಿ ಭರ್ತಿ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ