ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Published : Dec 11, 2025, 06:59 AM IST
Siddaramaiah

ಸಾರಾಂಶ

ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಜನಪರವಾದ, ಬಡವರ ಬದುಕಿಗೆ ಭದ್ರತೆ ನೀಡುವ ಸಾಕಷ್ಟು ಯೋಜನೆ ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರು (ಡಿ.11): ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಜನಪರವಾದ, ಬಡವರ ಬದುಕಿಗೆ ಭದ್ರತೆ ನೀಡುವ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಮೀಸಲಾತಿ ತಂದಿದ್ದೂ ಕಾಂಗ್ರೆಸ್ಸೇ. ಅಂಥ ಒಂದೇ ಒಂದು ಯೋಜನೆಯನ್ನೂ ಬಿಜೆಪಿಯ ಬುರುಡೆ ಗ್ಯಾಂಗ್‌ ಜನರಿಗೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬ್ಯಾಂಕ್ವೆಲ್‌ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನರಿಗೆ ಉತ್ತಮ ಸೇವೆ, ಸೌಕರ್ಯ ಒದಗಿಸಿದ 238 ಗ್ರಾಪಂಗಳಿಗೆ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ವಿತರಿಸಿ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ಉಳುವವನೇ ಭೂಮಿ ಒಡೆಯ ಯೋಜನೆ ಜಾರಿಗೊಳಿಸಿ ಕೆಲವೇ ಜಮೀನುದಾರರ ಕೈಯಲ್ಲಿದ್ದ ಕೃಷಿ ಭೂಮಿಯನ್ನು ಎಲ್ಲ ಜನರಿಗೂ ಸಿಗುವಂತೆ ಮಾಡಲಾಯಿತು. ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೆ ತಂದರು. ಹಿಂದುಳಿದ ವರ್ಗ, ದಲಿತರಿಗೆ ಸಿಗುತ್ತಿರುವ ಮೀಸಲಾತಿಯೂ ಕಾಂಗ್ರೆಸ್‌ ಕೊಡುಗೆಯೇ. ಇದನ್ನು ಜನ ಅರ್ಥಮಾಡಿಕೊಳ್ಳಬೇಕು. ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ರಾಮಾಜೋಯಿಸ್ ಮೀಸಲಾತಿ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಆಗ ಮಿಸ್ಟರ್‌ ಯಡಿಯೂರಪ್ಪ ಸೇರಿ ಬಿಜೆಪಿಯ ಯಾವ ನಾಯಕರೂ ಮಾತನಾಡಲಿಲ್ಲ. ಆದರೆ, ಸುಪ್ರೀಂಕೋರ್ಟ್ ಮೀಸಲಾತಿ ಪರವಾಗಿ ನಿಂತು ಆ ಅರ್ಜಿ ತಿರಸ್ಕರಿಸಿತು ಎಂದರು.

ಇನ್ನು, ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆಯಂಥ ಅನೇಕ ಕಾರ್ಯಕ್ರಮಗಳಿಂದ ಬಡವರು ಹಸಿವಿನಿಂದ ಬಳಲುವುದು ತಪ್ಪಿತು. ಎಲ್ಲರಿಗೂ ಶಿಕ್ಷಣ ದೊರೆಯುವಂತಾಯಿತು. ರಾಜ್ಯದಲ್ಲೂ ನಮ್ಮ ಹಿಂದಿನ ಸರ್ಕಾರದಲ್ಲಿ ಅನೇಕ ಭಾಗ್ಯಗಳು ನೀಡಿದ್ದೆವು. ಈಗ ಪಂಚ ಗ್ಯಾರಂಟಿಗಳನ್ನು ರೂಪಿಸಿದ್ದು, ಅವು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿನ ಭದ್ರತೆ ನೀಡಿವೆ. ಕಲ್ಯಾಣ ಕರ್ನಾಟಕ‌ ಭಾಗದಲ್ಲಿ 8,860 ಕಿ.ಮೀ. ಕಲ್ಯಾಣ ಪಥಕ್ಕೆ ಚಾಲನೆ ನೀಡಿದ್ದು ನಮ್ಮ ಸರ್ಕಾರ. ಈ ರೀತಿಯ ಒಂದೂ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಬಿಜೆಪಿ ಬುರುಡೆ ಗ್ಯಾಂಗ್‌ ಬರೀ ಬುರುಡೆ ಬಿಟ್ಟುಕೊಂಡು ತಿರುಗಾಡುತ್ತಿದೆ. ಇಂತಹ ಬುರುಡೆ ಗ್ಯಾಂಗ್‌ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತರುತ್ತಾರಂತೆ ಎಂದು ವ್ಯಂಗ್ಯವಾಡಿದರು.

ಕೇಂದ್ರದಿಂದ 13,000 ಕೋಟಿ ಜೆಜೆಎಂ ಹಣ ಬಾಕಿ: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಹೆಸರಿಗೆ ಮಾತ್ರ ಪ್ರಧಾನಿ ಅವರ ಹೆಸರಿನಲ್ಲಿದೆ. ಇದರಲ್ಲಿ ರಾಜ್ಯದ ಪಾಲೇ ಹೆಚ್ಚು. ಕೇಂದ್ರದಿಂದ ಇನ್ನೂ 13 ಸಾವಿರ ಕೋಟಿ ಹಣ ರಾಜ್ಯಕ್ಕೆ ವಾಪಸ್ ಬರಬೇಕಿದೆ. ಕೇಂದ್ರ ಮಾಡುವ ಅನ್ಯಾಯವನ್ನು ರೈತರು ಮತ್ತು ರಾಜ್ಯದ ಜನತೆ ವಿರೋಧಿಸಬೇಕು. ಕಬ್ಬಿನ ದರ ನಿಗದಿಯಲ್ಲೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರಿಂದ ರೈತರಿಗೆ ಅನ್ಯಾಯವಾಯಿತು. ಆದರೂ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸ್ಪಂದಿಸಿ ಪರಿಹಾರ ನೀಡಿತು ಸಿಎಂ ಹೇಳಿದರು.

ಇತರೆ ಪಂಚಾಯಿತಿಗಳಿಗೆ ಪ್ರೇರಣೆಯಾಗಲಿ: ಸರ್ಕಾರದ ಕಾರ್ಯಕ್ರಮಗಳು, ಸೇವೆ, ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ 238 ಗ್ರಾಪಂಗಳು ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡಿವೆ. ಇದು ರಾಜ್ಯದ ಇತರೆ ಗ್ರಾಪಂಗಳಿಗೂ ಪ್ರೇರಣೆ ಆಗಿ ಎಲ್ಲರೂ ಇದೇ ರೀತಿ ಕಾರ್ಯನಿರ್ವಹಿಸಬೇಕು. ಗಾಂಧೀಜಿ ಅವರು ದೇಶದ ಆತ್ಮ ನಮ್ಮ ಹಳ್ಳಿಗಳಲ್ಲಿದೆ. ಗ್ರಾಮಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗಲಿದೆ ಎಂದು ಹೇಳುತ್ತಿದ್ದರು. ನೆಹರೂ ಅವರು ಪ್ರತಿ ಹಳ್ಳಿಯಲ್ಲೂ ಒಂದು ಶಾಲೆ, ಸಹಕಾರ ಸಂಘ, ಗ್ರಾಪಂ ಇರಬೇಕೆಂದು ಹೇಳಿದ್ದರು. ಹಾಗಾಗಿ ಗ್ರಾಪಂಗಳು ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಇತರರು ಇದ್ದರು.

2000 ಕೋಟಿ ರು. ಆದಾಯ ನಿರೀಕ್ಷೆ

ಇಂದು ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಸರ್ಕಾರ ಜಾರಿಗೊಳಿಸಿರುವ ಇ-ಸ್ವತ್ತು ತಂತ್ರಾಂಶದಿಂದ ಗ್ರಾಪಂ ತೆರಿಗೆ ಆದಾಯ ಸದ್ಯ 1,778 ಕೋಟಿ ರು.ಗೆ ಏರಿಕೆಯಾಗುವ ಅಂದಾಜಿದೆ. ತಂತ್ರಾಂಶ ಪರಿಣಾಮಕಾರಿ ಜಾರಿಯಾದರೆ, ಆದಾಯದ ಪ್ರಮಾಣ 2000 ಕೋಟಿ ರು.ಗಳಿಗೂ ಹೆಚ್ಚುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ತಿಳಿಸಿದರು. ನಾನೂ ತಾಲೂಕು ಬೋರ್ಡ್ ಸದಸ್ಯನಾಗಿ ಈಗ ಮುಖ್ಯಮಂತ್ರಿವರೆಗೂ ಬೆಳೆದಿದ್ದೇನೆ. ಹೀಗಾಗಿ ಗ್ರಾಪಂಗಳು ಹಾಗೂ ಸ್ಥಳೀಯ ಸಂಸ್ಥೆಗಳು ಹೆಚ್ಚೆಚ್ಚು ಶಕ್ತಿಯುತವಾಗಬೇಕು ಎನ್ನುವುದು ನನ್ನ ಗುರಿಯೂ ಆಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಗ್ರಾಮ ಕರ್ನಾಟಕ ಅಭಿವೃದ್ಧಿ ಕಾಣುತ್ತದೆ ಎನ್ನುವ ಭರವಸೆ ನನಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ