ಮುಸ್ಲಿಂಗೆ ತಾಯಿ ಬಲಿ ಆದ್ರೂ ಮತಕ್ಕೆ ಖರ್ಗೆ ಮೌನ: ಯುಪಿ ಸಿಎಂ ಯೋಗಿ ಆದಿತ್ಯನಾಥ್

By Kannadaprabha News  |  First Published Nov 13, 2024, 8:04 AM IST

ಕಳೆದ 3 ದಿನಗಳಿಂದ ನಾನು ಖರ್ಗೆ ಹೇಳಿಕೆ ಕೇಳುತ್ತಿದ್ದೇನೆ. ನಾನು ಯೋಗಿ ಮತ್ತು ನನಗೆ ರಾಷ್ಟ್ರ ಮೊದಲು, ಆದರೆ ಖರ್ಗೆ ಅವರಿಗೆ ತುಷ್ಟೀಕರಣ ರಾಜಕೀಯ ಮೊದಲು ಎಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  


ಅಮರಾವತಿ(ಮಹಾರಾಷ್ಟ್ರ)(ನ.13):  ಯೋಗಿ ಆದಿತ್ಯನಾಥ್ ಒಬ್ಬ ಕಾವಿ ವೇಷದಲ್ಲಿರುವ ತೋಳ. ಅವರು ಕಾವಿ ಬಿಟ್ಟು ರಾಜಕಾರಣಿಗಳಂತೆ ಖಾದಿ ಧರಿಸುವುದು ಉತ್ತಮ' ಎಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಖುದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.

ಖರ್ಗೆ ಅವರ ಮನೆಯನ್ನು ರಜಾಕಾರರು ಸುಟ್ಟುಹಾಕಿದ್ದರು. ಆದರೆ ಮುಸ್ಲಿಂ ಮತದಾರರ ತುಷ್ಟಿಕರಣಕ್ಕಾಗಿ ಅವರು ಇಂದು ಈ ಬಗ್ಗೆ ಚಕಾರ ಎತ್ತುತ್ತಿಲ್ಲ' ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಕಿಡಿಕಾರಿದ್ದಾರೆ. 
ಮಂಗಳವಾರ ಮಹಾರಾಷ್ಟ್ರ ಬಿಜೆಪಿ ಚುನಾವಣಾ ಸಭೆಯಲ್ಲಿ ಯೋಗಿ ಅವರು ಮಾತನಾಡಿದರು. 'ಕಳೆದ 3 ದಿನಗಳಿಂದ ನಾನು ಖರ್ಗೆ ಹೇಳಿಕೆ ಕೇಳುತ್ತಿದ್ದೇನೆ. ನಾನು ಯೋಗಿ ಮತ್ತು ನನಗೆ ರಾಷ್ಟ್ರ ಮೊದಲು, ಆದರೆ ಖರ್ಗೆ ಅವರಿಗೆ ತುಷ್ಟೀಕರಣ ರಾಜಕೀಯ ಮೊದಲು' ಎಂದರು. 

Latest Videos

ತಮ್ಮ ಮಾತಿಗೆ ಖರ್ಗೆ ಹಿನ್ನೆಲೆಯ ಉದಾಹರಣೆ ನೀಡಿದ ಅವರು, 'ಖರ್ಗೆಯವರ ಹುಟ್ಟೂರಾದ ವಾರ್ವಟ್ಟಿ (ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಗ್ರಾಮ) ಹಿಂದೆ ಹೈದರಾಬಾದ್‌ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ, ಬ್ರಿಟಿಷ್ ಸಾಮ್ರಾಜ್ಯವು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ಅನ್ನು ಪ್ರೋತ್ಸಾಹಿಸಿತು ಮತ್ತು ಇದಕ್ಕೆ ಕಾಂಗ್ರೆಸ್ ನಾಯಕತ್ವವು ಶರಣಾಯಿತು. ಆಗ ಸ್ವಾತಂತ್ರ್ಯ ಘೋಷಣೆ ಆದರೆ ತನ್ನ ಅಧಿಕಾರ ಹೋಗಿ ಬಿಡುತ್ತದೆ ಎಂದು ಭಯಪಟ್ಟ ಹೈದರಾಬಾದ್‌ ನಿಜಾಮ ವ್ಯಾಪಕ ಹಿಂಸಾಚಾರಕ್ಕೆ ಆದೇಶಿಸಿದ. ಈ ವೇಳೆ ಖರ್ಗೆ ಅವರ ಗ್ರಾಮವೂ ಹಿಂಸೆ ಅನುಭವಿಸಿತು. ರಜಾಕಾರರು (ನಿಜಾಮನ ಬಂಟರು) ಗ್ರಾಮವನ್ನೇ ಸುಟ್ಟುಹಾಕಿದರು. ಖರ್ಗೆ ಅವರ ತಾಯಿ, ತಂಗಿ ಹಾಗೂ ಕುಟುಂಬವನ್ನೂ ಸುಟ್ಟು ಹಾಕಲಾಯಿತು' ಎಂದು ಸ್ಮರಿಸಿದರು. “ಆದರೆ ಖರ್ಗೆಜೀ ಇಂದು ಈ ಸತ್ಯ ಒಪ್ಪಿಕೊಳ್ಳಲ್ಲ, ಏಕೆಂದರೆ ಅವರು ಅದನ್ನು ಹೇಳಿದರೆ ಮುಸ್ಲಿಂ ಮತ ತಮ್ಮಿಂದ ದೂರ ಆಗುತ್ತವೆ ಎಂದು ಅವರಿಗೆ ತಿಳಿದಿದೆ. ಅವರು ಮತಕ್ಕಾಗಿ ತಮ್ಮ ಕುಟುಂಬದ ತ್ಯಾಗವನ್ನು ಮರೆತಿದ್ದಾರೆ' ಎಂದರು.

ಖರ್ಗೆ ಹೇಳಿದ್ದೇನು? 

ಕಾವಿ ವಸ್ತ್ರ ಧರಿಸಿ ಸಾಧುಗಳ ವೇಷದಲ್ಲಿ ಇರುವ ಕೆಲ ವ್ಯಕ್ತಿಗಳು ರಾಜಕೀಯದಲ್ಲಿದ್ದಾರೆ. ಕೆಲವರು ಮುಖ್ಯ ಮಂತ್ರಿಗಳೂ ಆಗಿದ್ದಾರೆ. ಅವರು ಕೇಸರಿ ವಸ್ತ್ರ ತೊಡುತ್ತಾರೆ ಮತ್ತು ಅವರ ತಲೆಯಲ್ಲಿ ಕೂದಲೂ ಇಲ್ಲ. ನಾನು ಬಿಜೆಪಿಯವರಿಗೆ ಒಂದು ವಿಷಯ ಹೇಳಲು ಬಯಸು ತೇನೆ. ನೀವು ಒಂದೋ ಬಿಳಿಯ ವಸ್ತ್ರ ತೊಡಿ ಅಥವಾ ಸನ್ಯಾಸಿಯಾಗಿದ್ದರೆ ಕೇಸರಿ ವಸ್ತ್ರ ತೊಡಿ. ಆದರೆ ರಾಜಕೀಯದಿಂದ ದೂರವಿರಿ. ಯೋಗಿ ಆದಿತ್ಯನಾಥ್ ಒಬ್ಬ ಕಾವಿ ವೇಷದಲ್ಲಿರುವ ತೋಳ. ಅವರು ಖಾದಿ ಧರಿಸುವುದು ಉತ್ತಮ.

click me!