
ವಿಧಾನಸಭೆ (ಡಿ.15): ರಾಜ್ಯದಲ್ಲಿ ವೃತ್ತಿಪರ ವಕೀಲರಿಗೆ ರಕ್ಷಣೆ ನೀಡುವ ಸಲುವಾಗಿ ಕರ್ತವ್ಯ ನಿರ್ವಹಣೆಯಲ್ಲಿರುವ ವಕೀಲರಿಗೆ ಅಡ್ಡಿಪಡಿಸುವ ಉದ್ದೇಶದಿಂದ ಕಿರುಕುಳ, ಬೆದರಿಕೆ ಅಥವಾ ಹಲ್ಲೆ ನಡೆಸುವವರಿಗೆ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ಹಾಗೂ ಒಂದು ಲಕ್ಷ ರು.ವರೆಗೆ ದಂಡ ವಿಧಿಸುವ 2023ನೇ ಸಾಲಿನ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ’ಕ್ಕೆ ವಿಧಾನಸಭೆ ಅಂಗೀಕಾರ ದೊರೆತಿದೆ. ಈ ವಿಧೇಯಕದ ಪ್ರಕಾರ ಪೊಲೀಸರು ಯಾವೊಬ್ಬ ವಕೀಲರನ್ನು ಬಂಧಿಸಿದರೂ 24 ಗಂಟೆ ಒಳಗಾಗಿ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕು.
ವೃತ್ತಿನಿರತ ವಕೀಲರಿಗೆ ಕಕ್ಷಿದಾರ ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಯಾರೊಬ್ಬರಾದರೂ ಬೆದರಿಕೆ, ಕೆಲಸಕ್ಕೆ ಅಡ್ಡಿ, ಕಿರುಕುಳ, ಹಲ್ಲೆ ನಡೆಸಿದರೆ ಕಾಯಿದೆ ಅಡಿ ಶಿಕ್ಷೆ ವಿಧಿಸಬಹುದು. ಇನ್ನುದೇಶ- ವಿದೇಶದಲ್ಲಿ ಮುಕ್ತವಾಗಿ ಪ್ರಯಾಣಿಸಲು ಹಾಗೂ ಕಕ್ಷಿದಾರರೊಂದಿಗೆ ಸಮಾಲೋಚಿಸಲು ವಕೀಲರಿಗೆ ಅವಕಾಶ ಕಲ್ಪಿಸಲಾಗಿದೆ.ವಿಧೇಯಕ ಮಂಡಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್, ವಕೀಲರ ವಿರುದ್ಧದ ದಾಳಿಗಳನ್ನು ತಡೆಯಲು ಕಾಯಿದೆ ರೂಪಿಸುವಂತೆ ಹಲವು ವರ್ಷಗಳಿಂದ ವಕೀಲರು ಒತ್ತಡ ಹೇರುತ್ತಿದ್ದರು.
ರಾಜ್ಯವೇ ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ನೀರು ಹರಿಸಿದ್ದು ಎಷ್ಟು ಸರಿ: ಡಿಕೆಶಿ
ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ರಾಜ್ಯಾದ್ಯಂತ ಈ ಬಗ್ಗೆ ಕೂಗು ಹೆಚ್ಚಾಗಿದ್ದರಿಂದ ನಮ್ಮ ಸರ್ಕಾರ ವಿಧೇಯಕ ಮಂಡಿಸುತ್ತಿದ್ದು, ವಕೀಲರಿಂದ ಈ ವಿಧೇಯಕ ದುರುಪಯೋಗ ಆಗದಂತೆ ಅಗತ್ಯ ಎಚ್ಚರಿಕೆಗಳನ್ನು ವಹಿಸಲಾಗಿದೆ ಎಂದರು.ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಕಾಂಗ್ರೆಸ್ ಸದಸ್ಯ ಎ.ಎಸ್. ಪೊನ್ನಣ್ಣ, ರಾಜ್ಯದಲ್ಲಿ ೧.೨೫ ಲಕ್ಷ ಮಂದಿ ವಕೀಲಿಕೆ ವೃತ್ತಿಯಲ್ಲಿದ್ದಾರೆ. ಕಳೆದ ಅಧಿವೇಶನದಲ್ಲಿ ವಿಧೇಯಕ ಮಾಡುವಂತೆ ಒತ್ತಾಯ ಮಾಡಿದ್ದರೂ ಹಿಂದಿನ ಸರ್ಕಾರ ಮಾಡಿರಲಿಲ್ಲ. ಈ ಬಾರಿ ವಿಧೇಯಕ ಮಂಡಿಸಿದ್ದು, ಯಾವುದೇ ವಕೀಲರನ್ನು ಪೊಲೀಸರು ಬಂಧಿಸಿದರೆ 24 ಗಂಟೆಗಳ ಒಳಗಾಗಿ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕು ಎಂದು ಇದೆ. ಜತೆಗೆ ವಕೀಲರ ಪರಿಷತ್‌ಗೂ ಮಾಹಿತಿ ಒದಗಿಸಬೇಕು ಎಂದು ಮಾಡಬೇಕು.
ರಾಜಸ್ತಾನದಲ್ಲಿರುವ ಕಾಯಿದೆಯಲ್ಲಿ 7 ವರ್ಷಗಳವರೆಗೆ ಶಿಕ್ಷೆಯಿದ್ದು, ಅವಕಾಶವಿದ್ದರೆ ಪ್ರಸ್ತುತ ವಿಧೇಯಕದಲ್ಲಿ ತಿಳಿಸಿರುವ 6 ತಿಂಗಳಿಂದ 3 ವರ್ಷಗಳವರೆಗೆ ಎಂಬ ನಿಯಮ ತಿದ್ದುಪಡಿ ಮಾಡಬೇಕು ಎಂದು ಸಲಹೆ ನೀಡಿದರು.ಬಳಿಕ ಎಚ್.ಕೆ. ಪಾಟೀಲ್ ಮಾತನಾಡಿ, ವಿಧೇಯಕದಲ್ಲಿ ವಕೀಲರನ್ನು ಬಂಧಿಸಿದರೆ ಪೊಲೀಸರು 24 ಗಂಟೆಗಳ ಒಳಗಾಗಿ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕು ಎಂದು ವಿಧೇಯಕದಲ್ಲಿದೆ. ಜತೆಗೆ ಕರ್ನಾಟಕ ವಕೀಲರ ಪರಿಷತ್ತಿಗೂ ಮಾಹಿತಿ ನೀಡುವಂತೆ ಪರಿಷ್ಕರಿಸಲಾಗುವುದು
ಎಂದರು.
ಕಾಂಗ್ರೆಸ್ ಔತಣ ಕೂಟಕ್ಕೆ ಬಿಜೆಪಿಗರು ಗಂಭೀರ ವಿಚಾರ: ಬಿ.ವೈ.ವಿಜಯೇಂದ್ರ
ವಿಧೇಯಕದ ಉದ್ದೇಶವೇನು?: ವಕೀಲರು ತಮ್ಮ ವೃತ್ತೀಯ ಕರ್ತವ್ಯಗಳಲ್ಲಿ ತೊಡಗಿದ್ದಾಗ ಹಸ್ತಕ್ಷೇಪ ಮಾಡುವ ಉದ್ದೇಶದಿಂದ ಕಿರುಕುಳ ಅಥವಾ ತೊಂದರೆ ನೀಡುವುದರಿಂದ ವಕೀಲರಿಗೆ ರಕ್ಷಣೆ ನೀಡುವುದು. ವೃತ್ತಿಪರ ಹಾಗೂ ನೈತಿಕತೆಗೆ ಅನುಸಾರವಾಗಿ ನ್ಯಾಯ ಒದಗಿಸುವ ಪ್ರಕ್ರಿಯೆಯಲ್ಲಿ ವಕೀಲರಿಗೆ ಯಾವುದೇ ನಿರ್ಬಂಧ ಅಥವಾ ಭಯದ ವಾತಾವರಣ ಉಂಟಾಗದಂತೆ ಸರ್ಕಾರದಿಂದ ರಕ್ಷಣೆ ನೀಡುವುದು. ಬೆದರಿಕೆ ಇರುವ ವಕೀಲರಿಗೆ ಪ್ರಾಧಿಕಾರಿಗಳು ಭದ್ರತೆ ಒದಗಿಸುವುದು ಹಾಗೂ ಹಿಂಸೆಗೆ ಆಸ್ಪದವಿಲ್ಲದೆ ರಕ್ಷಣೆ ಕೊಡುವುದು ಕಾಯಿದೆಯ ಮುಖ್ಯ ಉದ್ದೇಶ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.