ರಾಜ್ಯ ವಿಧಾನಮಂಡಲ ಇತಿಹಾಸ ಕಂಡುಕೇಳರಿಯದಂಥ ಹೈಡ್ರಾಮಾ

Kannadaprabha News   | Kannada Prabha
Published : Jan 23, 2026, 06:07 AM IST
Governor

ಸಾರಾಂಶ

ನಿರೀಕ್ಷೆಯಂತೆ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಸಂಪೂರ್ಣವಾಗಿ ಓದಲು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಗುರುವಾರ ನಿರಾಕರಿಸಿದ್ದು, ಬದಲಿಗೆ ಮೊದಲ ಪ್ಯಾರಾ ಹಾಗೂ ಕೊನೆಯ ಪ್ಯಾರಾ ಮಾತ್ರ ಓದಿ ಕೇವಲ 64 ಸೆಕೆಂಡುಗಳಲ್ಲಿ ಭಾಷಣ ಮುಗಿಸಿದರು.

ವಿಧಾನಮಂಡಲ : ನಿರೀಕ್ಷೆಯಂತೆ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಸಂಪೂರ್ಣವಾಗಿ ಓದಲು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಗುರುವಾರ ನಿರಾಕರಿಸಿದ್ದು, ಬದಲಿಗೆ ಮೊದಲ ಪ್ಯಾರಾ ಹಾಗೂ ಕೊನೆಯ ಪ್ಯಾರಾ ಮಾತ್ರ ಓದಿ ಕೇವಲ 64 ಸೆಕೆಂಡುಗಳಲ್ಲಿ ಭಾಷಣ ಮುಗಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕರು ಭಾಷಣ ಓದಲೇ ಬೇಕು ಎಂಬ ಹಕ್ಕೊತ್ತಾಯ ಮಾಡಿದರೂ, ಅದನ್ನು ಲೆಕ್ಕಿಸದೆ ಸದನದಿಂದ ಹೊರ ಹೊರಟ ರಾಜ್ಯಪಾಲರಿಗೆ ಅಡ್ಡಗಟ್ಟುವ ಪ್ರಯತ್ನ ಹಾಗೂ ಧಿಕ್ಕಾರ ಘೋಷಣೆ ಕೂಗುವ ಮೂಲಕ ಭಾರೀ ಹೈಡ್ರಾಮಾ ಸೃಷ್ಟಿಸಿದರು.

ಅಷ್ಟೇ ಅಲ್ಲದೆ, ಪರಿಷತ್‌ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರು ರಾಜ್ಯಪಾಲರಿಗೆ ತಡೆಯೊಡ್ಡುವ ಪ್ರಯತ್ನದ ವೇಳೆ ಅ‍ವರ ಜುಬ್ಬಾ ಹರಿದ ಪ್ರಸಂಗವೂ ನಡೆದರೆ, ಕಾಂಗ್ರೆಸ್‌ ಶಾಸಕರ ಧೋರಣೆ ಖಂಡಿಸಿ ಬಿಜೆಪಿ ಶಾಸಕರು ರಾಜ್ಯಪಾಲರ ರಕ್ಷಣೆಗೆ ಮುಂದಾದರು. ಇದ್ಯಾವುದಕ್ಕೂ ಆಸ್ಪದ ನೀಡದ ಮಾರ್ಷಲ್‌ಗಳು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರನ್ನು ಬದಿಗೆ ಸರಿಸಿ ರಾಜ್ಯಪಾಲರು ಸುರಕ್ಷಿತವಾಗಿ ಸದನದಿಂದ ತೆರಳುವಂತೆ ನೋಡಿಕೊಂಡರು.

ಚುಟುಕು ಭಾಷಣ ಓದಿದ ರಾಜ್ಯಪಾಲರ ಧೋರಣೆಗೆ ಕಾಂಗ್ರೆಸ್‌ ತೀವ್ರ ವಿರೋಧಿಸಿ, ಈ ನಡೆ ಸಂವಿಧಾನ ಹಾಗೂ ಕಾನೂನು ಬದ್ದವೇ ಎಂದು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಹಾಗೂ ನಿಯಮಗಳ ಉಲ್ಲಂಘನೆಯಾಗಿದ್ದರೆ ‘ಗೋ ಬ್ಯಾಕ್‌ ರಾಜ್ಯಪಾಲ’ ಅಭಿಯಾನಕ್ಕೆ ಮುಂದಾಗುವ ಚಿಂತನೆ ನಡೆಸಿದ್ದರೆ, ಬಿಜೆಪಿ ನಾಯಕತ್ವವು ರಾಜ್ಯಪಾಲರ ಘನತೆಗೆ ಧಕ್ಕೆ ತಂದ ಕಾಂಗ್ರೆಸ್‌ ಶಾಸಕರ ವಿರುದ್ಧ ಸದನದ ಒಳ-ಹೊರಗೆ ಹೋರಾಟ ನಡೆಸಲು ತೀರ್ಮಾನಿಸಿದೆ.

ರಾಜ್ಯಪಾಲರು ಸರ್ಕಾರದ ಭಾಷಣ ಓದದೆ ಸಂವಿಧಾನ ಉಲ್ಲಂಘಿಸಿದ್ದಾರೆ. ಜತೆಗೆ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ರಾಜ್ಯಪಾಲರ ಕ್ಷಮೆ ಯಾಚನೆಗೆ ಸರ್ಕಾರ ಪಟ್ಟು ಹಿಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ. ಮತ್ತೊಂದೆಡೆ ರಾಜ್ಯಪಾಲರಿಗೆ ಅವಮಾನ ಮಾಡಿರುವುದಕ್ಕೆ ಸರ್ಕಾರ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷಗಳು ವಾದ ಮಂಡಿಸಿವೆ. ಹೀಗಾಗಿ ಅಧಿವೇಶನದ ಉಳಿದ ಕಲಾಪವೂ ರಾಜ್ಯಪಾಲರ ಭಾಷಣ ಸೃಷ್ಟಿಸಿರುವ ಜ್ವಾಲಾಗ್ನಿಗೆ ಆಹುತಿಯಾಗುವ ನಿರೀಕ್ಷೆಯಿದೆ.

ತನ್ಮೂಲಕ ಗುರುವಾರ ಆರಂಭವಾದ ಜಂಟಿ ಅಧಿವೇಶನವು ಭಾರೀ ಹೈಡ್ರಾಮಾಗೆ ವೇದಿಕೆಯಾಗಿ, ಲೋಕಭವನ ಹಾಗೂ ವಿಧಾನಸೌಧ ನಡುವಿನ ಸಾಂವಿಧಾನಿಕ ಬಿಕ್ಕಟ್ಟು ಮತ್ತೊಂದು ಹಂತ ಮುಟ್ಟಲು ಕಾರಣವಾಗಿದೆ.

5 ನಿಮಿಷಗಳ ಹೈಡ್ರಾಮಾ:

ಇಡೀ ಹೈಡ್ರಾಮಾ ಕೇವಲ 5 ನಿಮಿಷಗಳಲ್ಲಿ ನಡೆದಿದೆ. ರಾಜ್ಯಪಾಲರ ಅಚ್ಚರಿ ಬೆಳವಣಿಗೆ ಹಾಗೂ 64 ಸೆಕೆಂಡುಗಳಲ್ಲಿ ಭಾಷಣ ಮುಗಿಸುವುದನ್ನು ನಿರೀಕ್ಷಿಸದ ಉಭಯ ಪಕ್ಷಗಳ ಸದಸ್ಯರು, ಸಿಬ್ಬಂದಿ ಮೂಕವಿಸ್ಮಿತರಾಗಿ ನಿಂತರು. ಬೆಳಗ್ಗೆ 11.06ಕ್ಕೆ ಸದನಕ್ಕೆ ಆಗಮಿಸಿದ ರಾಜ್ಯಪಾಲರು 11.11 ಗಂಟೆಗೆ ಭಾಷಣ ಮುಗಿಸಿ ಹೊರ ನಡೆದರು. ಹೀಗಾಗಿ ರಾಜ್ಯಪಾಲರ ಭಾಷಣ ಮುಗಿದಾಗ ರಾಷ್ಟ್ರಗೀತೆಯೂ ನುಡಿಸಿಲ್ಲ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಕೇಂದ್ರದ ವಿರುದ್ಧ ಟೀಕಾಪ್ರಹಾರ, ಗವರ್ನರ್‌ ನಕಾರ:

ರಾಜ್ಯ ಸರ್ಕಾರವು ವಿಬಿ ಜಿ ರಾಮ್‌ ಜಿ ಕಾಯ್ದೆ ವಿರೋಧಿಸುವುದು ಸೇರಿ ಕೇಂದ್ರದ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಅಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಿತ್ತು. ಹೀಗಾಗಿ ಸರ್ಕಾರ ಸಿದ್ಧಪಡಿಸಿದ್ದ ಭಾಷಣ ಸಂಪೂರ್ಣ ಓದಲು ನಿರಾಕರಿಸಿದ ರಾಜ್ಯಪಾಲರು ಮೊದಲ ಹಾಗೂ ಕೊನೆಯ ಅಂಶವನ್ನು ಪ್ರಸ್ತಾಪಿಸಿ ಜೈ ಹಿಂದ್‌, ಜೈ ಕರ್ನಾಟಕ ಎಂದು ಹೇಳಿ ಭಾಷಣಕ್ಕೆ ಮುಕ್ತಾಯ ಹಾಡಿ ರಾಷ್ಟ್ರಗೀತೆಗೂ ಕಾಯದೆ ಹೊರ ನಡೆದರು.

ಆಗ ಕಾನೂನು ಸಚಿವ ಎಚ್.ಕೆ.ಪಾಟೀಲ್‌ ಸೇರಿ ಹಿರಿಯ ಸಚಿವರು ನೀವು ಕಡ್ಡಾಯವಾಗಿ ಭಾಷಣ ಓದಬೇಕು ಎಂದು ಕೂಗಿದರು. ಆದರೂ ಕಿವಿಗೊಡದೆ ಭಾಷಣ ಮುಗಿಸಿ ವಿರೋಧಪಕ್ಷದ ಸಾಲಿನಲ್ಲಿದ್ದವರಿಗೆ ಕೈ ಮುಗಿಯುತ್ತಾ ರಾಜ್ಯಪಾಲರು ಹೊರ ನಡೆದರು.

ಈ ವೇಳೆ ರಾಜ್ಯಪಾಲರನ್ನು ತಡೆಯಲು ಅಡ್ಡ ಹಾಕಿದ ಕಾಂಗ್ರೆಸ್‌ನ ಪರಿಷತ್ ಸದಸ್ಯ ಎಸ್.ರವಿ ಅವರು ಪೂರ್ಣ ಭಾಷಣ ಓದುವಂತೆ ಕೋರಿದರು. ಬಳಿಕ ಬಿ.ಕೆ.ಹರಿಪ್ರಸಾದ್ ಅವರು ಅಡ್ಡಲಾಗಿ ನಿಂತು ಹೊರ ಹೋಗದಂತೆ ತಡೆಯಲು ಯತ್ನಿಸಿದರು. ಈ ವೇಳೆ ಮಾರ್ಷಲ್‌ಗಳು ಹರಿಪ್ರಸಾದ್‌ ಅವರನ್ನು ಹೊರಗೆ ತಳ್ಳಿದರು. ಈ ವೇಳೆ ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಬಿ.ಕೆ. ಹರಿಪ್ರಸಾದ್ ಅವರು ಧಿಕ್ಕಾರ ಕೂಗಿದರು.

ಪುನಃ ಆರಂಭವಾದ ವಿಧಾನಸಭೆ ಕಲಾಪದಲ್ಲಿ ಕಾರ್ಯದರ್ಶಿ ವಿಶಾಲಾಕ್ಷಿ ಅವರು, ರಾಜ್ಯಪಾಲರ ಭಾಷಣದ ಪ್ರತಿಯನ್ನು ಸದನದಲ್ಲಿ ಮಂಡಿಸಿದರು.

ಆರೋಪ-ಪ್ರತ್ಯಾರೋಪ:

ಪುನಃ ಆರಂಭವಾದ ಕಲಾಪದ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ಸರ್ಕಾರ ಸಿದ್ಧಪಡಿಸಿದ ಭಾಷಣ ಓದಬೇಕಿರುವುದು ರಾಜ್ಯಪಾಲರ ಕರ್ತವ್ಯ. ಅದನ್ನು ಅಲ್ಲಗೆಳೆದು ಸಂವಿಧಾನ ಉಲ್ಲಂಘಿಸಿದ್ದಾರೆ. ಇದರ ವಿರುದ್ಧ ಚರ್ಚೆಯಾಗಬೇಕು. ರಾಜ್ಯಪಾಲರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್‌, ವಿವಾದ ಸೃಷ್ಟಿಸಿದ್ದ ರಾಜ್ಯ ಸರ್ಕಾರ. ಕಾನೂನು ಸಚಿವರು ಇದರಲ್ಲಿ ಮೊದಲ ಅಪರಾಧಿ. ರಾಜ್ಯಪಾಲರಿಗೆ ಅವಮಾನ ಮಾಡಿದ್ದೀರಿ. ಮೊದಲು ಸರ್ಕಾರ ರಾಜ್ಯಪಾಲರ ಕ್ಷಮೆ ಯಾಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಸುನಿಲ್‌ ಕುಮಾರ್, ರಾಜ್ಯಪಾಲರು ದಲಿತರು ಎಂಬ ಕಾರಣಕ್ಕಾಗಿ ಸರ್ಕಾರ ಅವಮಾನ ಮಾಡಿದೆಯೇ? ರಾಷ್ಟ್ರಗೀತೆ ಬಗ್ಗೆ ಮಾತನಾಡುವ ಸರ್ಕಾರ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದಾಗ ಎಲ್ಲಿ ಹೋಗಿತ್ತು? ಎಂದು ಕಿಡಿ ಕಾರಿದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ತೀವ್ರ ಆರೋಪ-ಪ್ರತ್ಯಾರೋಪ, ಜಟಾಪಟಿ ನಡೆಯಿತು.

ಏನೇನಾಯ್ತು?

ಬೆಳಗ್ಗೆ 11.06: ವಿಧಾನಮಂಡಲ ಅಧಿವೇಶನಕ್ಕೆ ರಾಜ್ಯಪಾಲರ ಆಗಮನ11.07: ರಾಷ್ಟ್ರಗೀತೆಗೆ ಗೌರವ 11.08: ರಾಷ್ಟ್ರಗೀತೆ ಮುಕ್ತಾಯ. 11.08: ರಾಜ್ಯಪಾಲರ ಭಾಷಣ ಆರಂಭ11.09: ರಾಜ್ಯಪಾಲರ ನಿರ್ಗಮನ11.10: ರಾಜ್ಯಪಾಲರನ್ನು ತಡೆಯಲು ಯತ್ನ11.11: ಕಾರು ಏರಿ ಹೊರಟ ಗೌರ್ನರ್‌

ರಾಜ್ಯಪಾಲರು ಮಾಡಿದ 64 ಸೆಕೆಂಡ್‌ ಭಾಷಣ‘

ವಿಧಾನ ಪರಿಷತ್‌ನ​ ಸನ್ಮಾನ್ಯ ಸಭಾಪತಿಯವರೇ, ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರೇ, ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳೇ, ಕರ್ನಾಟಕ ರಾಜ್ಯದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳೇ, ಪ್ರತಿಪಕ್ಷದ ಗೌರವಾನ್ವಿತ ನಾಯಕರುಗಳೇ, ಕರ್ನಾಟಕ ರಾಜ್ಯದ ಸನ್ಮಾನ್ಯ ಮಂತ್ರಿಗಳೇ ಮತ್ತು ವಿಧಾನಸಭೆ ಹಾಗೂ ವಿಧಾನಪರಿಷತ್​ ಮಾನ್ಯ ಸದಸ್ಯರೇ, ಜಂಟಿ ಅಧಿವೇಶನಕ್ಕೆ ಸ್ವಾಗತ. ಮತ್ತೊಂದು ಜಂಟಿ ಅಧಿವೇಶನದಲ್ಲಿ ಭಾಗಿಯಾಗಿರುವುದು ಹರ್ಷದ ಅನುಭೂತಿ ನೀಡುತ್ತಿದೆ. ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ವಿಕಾಸವನ್ನು ನನ್ನ ಸರ್ಕಾರ ಎರಡು ಪಟ್ಟು ಹೆಚ್ಚಿಸಲು ಕಟಿಬದ್ಧವಾಗಿದೆ.‌ ಜೈ ಹಿಂದ್, ಜೈ ಕರ್ನಾಟಕ’.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಜೆಟ್‌ ಅಧಿವೇಶನದಲ್ಲಿ ಜಿ ರಾಮ್‌ ಜಿ ಪ್ರಸ್ತಾಪ : ಖರ್ಗೆ
ಸದನದಲ್ಲಿ ಗೌರ್ನರ್ ಭಾಷಣ ಮಾಡೋದೇ ಬೇಡ : ಸ್ಟಾಲಿನ್‌