ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!

Published : Dec 13, 2025, 03:10 PM IST
V somanna

ಸಾರಾಂಶ

ಕೇಂದ್ರ ಸಚಿವ ವಿ. ಸೋಮಣ್ಣ ಅವರು, ಡಾ. ಜಿ. ರಮೇಶ್ವರ್ ಮುಖ್ಯಮಂತ್ರಿಯಾಗಬೇಕೆಂಬುದು ತುಮಕೂರಿನಲ್ಲಿ ಬಹಿರಂಗವಾಗಿ ಹೇಳಿದ್ದಾರೆ. ಜಿಲ್ಲೆಗೆ ಸಾವಿರಾರು ಕೋಟಿ ವೆಚ್ಚದ ರೈಲ್ವೆ ಯೋಜನೆಗಳು, 20 ಕೋಟಿ ರೂ. ವೆಚ್ಚದ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಹಾಗೂ ಮೆಟ್ರೋ ಯೋಜನೆಗೆ ಸಂಪೂರ್ಣ ಬೆಂಬಲ ಘೋಷಿಸಿದರು.

ತುಮಕೂರು: ಕೇಂದ್ರ ಸಚಿವ ವಿ. ಸೋಮಣ್ಣ ಅವರು  ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ವೈಯಕ್ತಿಕ ಹಾಗೂ ಜಿಲ್ಲೆಯ ಜನರ ಆಶಯ ಎಂದು ಬಹಿರಂಗವಾಗಿ ಹೇಳಿದ್ದಾರೆ. ತುಮಕೂರು ತಾಲ್ಲೂಕಿನ ಹೆಗ್ಗೆರೆ ಬಳಿ ನಿರ್ಮಾಣಗೊಂಡ ಮೇಲುಸೇತುವೆ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಮೇಶ್ವರ ಕುರಿತು ಮುಕ್ತ ಮನಸ್ಸಿನಿಂದ ಮೆಚ್ಚುಗೆಯ ಮಾತುಗಳನ್ನಾಡಿದರು.

“ಪರಮೇಶ್ವರ ಸಿಎಂ ಆಗಬೇಕು ಅನ್ನೋ ಆಸೆ ನನಗಿದೆ”

ಡಾ. ಪರಮೇಶ್ವರ ಅವರು ಗೃಹಮಂತ್ರಿಯಾಗುತ್ತಾರೆ ಅನ್ನೋ ಕನಸು ನನಗೂ ಇರಲಿಲ್ಲ. ಆದರೆ, ಎಲ್ಲೋ ಒಂದು ಕಡೆ ನನಗೆ ಅವರ ಬಗ್ಗೆ ವಿಶೇಷ ಆಸೆ ಇದೆ. ಸುರೇಶ್ ಗೌಡ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ನನಗೂ ವೈಯಕ್ತಿಕವಾಗಿ ಆಸೆ ಇದೆ. ಡಾ. ಪರಮೇಶ್ವರ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಸೋಮಣ್ಣ ಹೇಳಿದರು. ಇದು ನನ್ನೊಬ್ಬನ ಆಸೆ ಮಾತ್ರ ಅಲ್ಲ. ತುಮಕೂರು ಜಿಲ್ಲೆಯ ಮಹಾಜನತೆಗೂ ಇದೇ ಆಶಯ ಇದೆ ಎಂದರು.

ಡಿಕೆ ಶಿವಕುಮಾರ್ ವಿಚಾರಕ್ಕೆ ಸ್ಪಷ್ಟ ಉತ್ತರ

ಈ ವೇಳೆ ಶಾಸಕ ಸುರೇಶ್ ಗೌಡ ಅವರು, “ನಿಮ್ಮ ಕ್ಷೇತ್ರದ ಡಿ.ಕೆ. ಶಿವಕುಮಾರ್ ಕೂಡ ಇದ್ದಾರೆ” ಎಂದು ಉಲ್ಲೇಖಿಸಿದಾಗ, ಸೋಮಣ್ಣ ಅವರು, ಅವರು ಇರಲಿ ಬಿಡಪ್ಪಾ… ಅದು ಸೆಕೆಂಡ್ರಿ. ಡಿ.ಕೆ. ಶಿವಕುಮಾರ್ ಏನಾಗಬೇಕು ಅನ್ನೋದು ಹಣೆಬರಹ. ಆದರೆ ನಡವಳಿಕೆ ಇನ್ನೂ ದೊಡ್ಡದು ಎಂದು ಹೇಳಿದರು.

ನಾನು ಅನಿರೀಕ್ಷಿತವಾಗಿ ತುಮಕೂರಿಗೆ ಬಂದೆ

ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಸೋಮಣ್ಣ, ರಾಜಕಾರಣ ಅನ್ನೋದು ಅದೃಷ್ಟ. ನಾನು ಅನಿರೀಕ್ಷಿತವಾಗಿ ಈ ಕ್ಷೇತ್ರಕ್ಕೆ ಬಂದೆ. ನಾನು ಯಾವುದೇ ಅರ್ಜಿ ಹಾಕಿರಲಿಲ್ಲ. ರಾಷ್ಟ್ರ ನಾಯಕರು ಮೋದಿ, ನಡ್ಡಾ, ಅಮಿತ್ ಶಾ ತುಮಕೂರಿಗೆ ಹೋಗು ಅಂತ ಹೇಳಿದರು. ಅವರ ಮಾತಿಗೆ ಬಂದು ಇಲ್ಲಿ ನಿಂತೆ ಎಂದರು.

ಬಿಜೆಪಿ–ಜೆಡಿಎಸ್–ಕಾಂಗ್ರೆಸ್ ಸಹಕಾರಕ್ಕೆ ಕೃತಜ್ಞತೆ

ನನಗೆ ಬಿಜೆಪಿ ಯಾವ ರೀತಿಯಲ್ಲಿ ಸಹಾಯ ಮಾಡಿತೋ, ಅದೇ ರೀತಿ ಜೆಡಿಎಸ್ ಸಹ ಸಹಕಾರ ನೀಡಿತು. ಬಹುತೇಕ ಕಾಂಗ್ರೆಸ್‌ನ ಒಂದು ಭಾಗವೂ ನನಗೆ ಸಹಾಯ ಮಾಡಿದೆ. ಇದಕ್ಕಾಗಿ ನಾನು ನಿಮಗೆಲ್ಲಾ ತುಂಬಾ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಸದಾ ಕೃತಜ್ಞನಾಗಿರುತ್ತೇನೆ ಎಂದು ಹೇಳಿದರು.

ಮಂತ್ರಿ ಆದ ಮೇಲೆ ಮೊದಲು ಕರೆ ಮಾಡಿದವರು ಪರಮೇಶ್ವರ

ತಾನು ಕೇಂದ್ರ ಸಚಿವನಾದ ನಂತರದ ಅನುಭವವನ್ನು ಹಂಚಿಕೊಂಡ ಸೋಮಣ್ಣ, “ನಾನು ಮಂತ್ರಿಯಾದ ಮೇಲೆ ನನಗೆ ಮೊದಲು ಕರೆ ಮಾಡಿ ಶುಭಾಶಯ ತಿಳಿಸಿದವರು ಡಾ. ಪರಮೇಶ್ವರ. ನಿನಗೆ ಒಳ್ಳೆ ಇಲಾಖೆ ಸಿಕ್ಕಿದೆ, ಸಂತೋಷ ಅಂತಾ ಅವರು ಹೇಳಿದರು. ಅದರಿಂದ ನನಗೆ ತುಂಬಾ ಖುಷಿಯಾಯಿತು ಎಂದು ತಿಳಿಸಿದರು.

ತುಮಕೂರು ಅಭಿವೃದ್ಧಿ ಬಗ್ಗೆ ಸೋಮಣ್ಣ ಮಾತನಾಡಿ, ತುಮಕೂರನ್ನು ಪಂಡಿತನ ಹಳ್ಳಿ, ಜಿಲ್ಲೆಯ ಹೆಬ್ಬಾಗಿಲು ಎಂದು ವರ್ಣಿಸಿದ ಸೋಮಣ್ಣ, ಇದು ಕಳೆದ 50 ವರ್ಷಗಳಿಂದ ಆಗದೇ ಉಳಿದ ಕೆಲಸ. ನಿಮ್ಮ ಮತದ ಬೆಲೆ ಏನು ಅನ್ನೋದನ್ನ ನೀವು ತೋರಿಸಿದ್ದೀರಿ ಎಂದರು.

ರೈಲ್ವೆ ಯೋಜನೆಗಳಿಗೆ ಚಾಲನೆ

“ನಿಮ್ಮ ಆಶೀರ್ವಾದದಿಂದ ನಾನು ಕೇಂದ್ರದಲ್ಲಿ ಮಂತ್ರಿಯಾಗಿ, ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿದ್ದ ರೈಲ್ವೆ ಗೇಟ್ ಸಮಸ್ಯೆಗೆ ಪರಿಹಾರ ನೀಡಿದ್ದೇನೆ.

  • 13 ಆರ್‌ಒಬಿ (ROB)
  • 12 ಆರ್‌ಯುಬಿ (RUB)
  • 3 ಎಫ್‌ಒಬಿ (FOB)

ಈ ಎಲ್ಲಾ ಯೋಜನೆಗಳು ಮುಂದಿನ ಪೀಳಿಗೆಗೆ ರೈಲ್ವೆ ಇಲಾಖೆಯ ದೊಡ್ಡ ಕೊಡುಗೆ” ಎಂದು ಹೇಳಿದರು. ಈ ಯೋಜನೆಗಳ ವೆಚ್ಚ ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಒಂದು ರೂಪಾಯಿ ಕೂಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ವರ್ಕಿಂಗ್ ವುಮೆನ್ಸ್ ಹಾಸ್ಟಲ್ ಘೋಷಣೆ

ಶಾಸಕ ಸುರೇಶ್ ಗೌಡ ಮಾತು ಕೊಟ್ಟಂತೆ ನಾನು ಕೆಲಸ ಮಾಡುತ್ತಿದ್ದೇನೆ. ವಸಂತನರಸಾಪುರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ವರ್ಕಿಂಗ್ ವುಮೆನ್ಸ್ ಹಾಸ್ಟಲ್ ನಿರ್ಮಾಣ ಮಾಡುತ್ತಿದ್ದೇನೆ” ಎಂದು ಘೋಷಿಸಿದರು.

ತುಮಕೂರಿಗೆ ಮೆಟ್ರೋ ಯೋಜನೆಗೆ ಬೆಂಬಲ

ಡಾ. ಪರಮೇಶ್ವರ ಅವರು ತುಮಕೂರಿಗೆ ಮೆಟ್ರೋ ರೈಲು ತರುವ ಯೋಚನೆ ಮಾಡಿಕೊಂಡಿದ್ದಾರೆ ಎಂದು ಹೇಳಿದ ಸೋಮಣ್ಣ, ಆ ಯೋಜನೆಗೆ ಕಾಂಗ್ರೆಸ್‌ನ ಕೆಲ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ನನ್ನ ಬಳಿ ಒಬ್ಬ ಕಾಂಗ್ರೆಸ್ ನಾಯಕ ಬಂದು ‘ಪರಮೇಶ್ವರ ಯಾಕೆ ತುಮಕೂರಿಗೆ ಮೆಟ್ರೋ ತರುತ್ತಾರೆ?’ ಎಂದು ಕೇಳಿದರು. ನಾನು ಅದಕ್ಕೆ ‘ಪರಮೇಶ್ವರ ಒಳ್ಳೆ ಕೆಲಸ ಮಾಡುತ್ತಿದ್ದಾರೆ’ ಎಂದು ಉತ್ತರಿಸಿದೆ” ಎಂದರು. ತುಮಕೂರಿಗೆ ಮೆಟ್ರೋ ಬರಬೇಕು. ಅದಕ್ಕೆ ನನ್ನ ಸಂಪೂರ್ಣ ಸಹಮತ ಇದೆ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಮುಳ್ಳಿನ ಹಾಸಿಗೆ, ಜನರ ಜೊತೆ ಬೆರೆಯುವುದು ಮುಖ್ಯ

ರಾಜಕೀಯ ಜೀವನದ ಸಾರವನ್ನು ವಿವರಿಸಿದ ಸೋಮಣ್ಣ, ರಾಜಕೀಯ ಅನ್ನೋದು ಮುಳ್ಳಿನ ಹಾಸಿಗೆ. ಅದನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಅನ್ನೋದಕ್ಕಿಂತ, ಜನರ ಜೊತೆ ಹೇಗೆ ಬೆರೆಯುತ್ತೇವೆ ಅನ್ನೋದು ಮುಖ್ಯ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ