
ಬೆಂಗಳೂರು (ಡಿ.13): ದ್ವೇಷ ಭಾಷಣ ತಡೆಗೆ ಕಾಂಗ್ರೆಸ್ ಸರ್ಕಾರ ಕಾನೂನು ತರಲು ಹೊರಟಿರುವುದು ಪ್ರಜಾಪ್ರಭುತ್ವ ಕೊಲೆ. ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕಕ್ಕೆ ನಮ್ಮ ಪಕ್ಷದಿಂದ ವಿರೋಧವಿದೆ. ಸಂವಿಧಾನ ನಮಗೆ ನೀಡಿರುವ ವಾಕ್ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ವಿರೋಧ ಪಕ್ಷದ ಹಾಗೂ ಪತ್ರಿಕೋದ್ಯವನ್ನ ಹತ್ತಿಕ್ಕುವ ಸಂಚು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವು ಸಂವಿಧಾನ ನಮಗೆ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಈ ವಿಧೇಯಕದ ಮೂಲಕ ಕಾಂಗ್ರೆಸ್ ಸ ರ್ಕಾರವು 1975 ರ ತುರ್ತು ಪರಿಸ್ಥಿತಿಯನ್ನು ಮರುಕಳಿಸುವ ಕುತಂತ್ರ ಮಾಡುತ್ತಿದೆ, ಇದರಿಂದ ಕಾಂಗ್ರೆಸ್ ಸರ್ಕಾರದ ಪತನದ ದಿನ ದೂರವಿಲ್ಲ ಎಂದರು.
ಈ ವಿಧೇಯಕವನ್ನು ಗೃಹ ಸಚಿವ ಪರಮೇಶ್ವರ್ ಅವರ ಮಂಡಿಸಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ. ಈ ವಿಧೇಯಕವನ್ನು ಬೇರೆ ಯಾರೋ ತಯಾರಿಸಿ ಗೃಹ ಸಚಿವರ ಮೂಲಕ ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ಈ ಕಾನೂನಿನ ಮೂಲಕ ಮಾಧ್ಯಮಗಳನ್ನು, ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಹಾಗೂ ವಿರೋಧ ಪಕ್ಷದ ಕಾರ್ಯಕರ್ತರನ್ನು ಹೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದು ಈ ಸರ್ಕಾರದಿಂದ ಸಾಧ್ಯವಿಲ್ಲ. ಈ ವಿಧೇಯಕದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಬಿರುದುಕೊಟ್ಟ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ಮಂಡ್ಯ ಜಿಲ್ಲೆಯ ಇಬ್ಬರು ಶಾಸಕರು ಹೊರಟಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಮೊದಲು ಛತ್ರಿಗಳು ಎಂಬ ಅರ್ಥ ತಿಳಿದುಕೊಳ್ಳಬೇಕು. ನಂತರ ಡಿಕೆಶಿ ಛತ್ರಿಗೆ ಬೇರೆ ಅರ್ಥ ಕೊಟ್ಟರು. ಇಂತವರನ್ನು ಮುಖ್ಯಮಂತ್ರಿ ಮಾಡಲು ಜಿಲ್ಲೆಯ ಶಾಸಕರು ಓಡಾಡುತ್ತಿದ್ದಾರೆ. ಮದ್ದೂರು ಕ್ಷೇತ್ರದ ಶಾಸಕರ ನಡವಳಿಕೆ ಸರಿ ಇಲ್ಲ. ತಾಲೂಕಿನಲ್ಲಿ ಪೊಲೀಸ್ ಠಾಣೆ ಇವರಪ್ಪನ ಮನೆನಾ ಎಂದು ಕಿಡಿಕಾರಿದರು.
ಎನ್ ಡಿಎಗೆ ಕುಮಾರಣ್ಣ ಅರ್ಜಿ ಹಾಕೊಂಡು ಹೋಗಿಲ್ಲ. ಎಚ್ಡಿಕೆಯವರಲ್ಲಿದ್ದ ಬಂಡವಾಳ, ಶಕ್ತಿ ನೋಡಿ ರೆಡ್ ಕಾರ್ಪೆಟ್ ಹಾಕಿ ಮಿತ್ರ ಪಕ್ಷ ಬಿಜೆಪಿಯವರು ಎನ್ ಡಿಎಗೆ ಬರ ಮಾಡಿಕೊಂಡಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ 11 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುಲು ಕಾರಣವಾಗಿದೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಪ್ಪನಾಣೆಗೂ ಗೆಲ್ಲಲ್ಲ ಅಂತಾ ಕಾಂಗ್ರೆಸ್ ನವರು ಭಾಷಣ ಬಿಗಿದಿದ್ರು. ಆದರೆ, ಮಂಡ್ಯ ಜನರ ಆಶೀರ್ವಾದದಿಂದ ದಾಖಲೆ ಗೆಲುವು ಸಿಕ್ಕಿತ್ತು. ಕುಮಾರಣ್ಣನ ಶಕ್ತಿ ನೋಡಿಯೇ ಜನ ಗೆಲ್ಲಿಸಿರೋದು. ಕುಮಾರಣ್ಣ ಚುನಾವಣೆಯಲ್ಲಿ ಗೆದ್ದಾಗ ತಲೆ ಎತ್ತಿ ಮೆರೆಯಲ್ಲ. ಸೋತಾಗ ಕೈ ಕಟ್ಟಿ ಮನೆಯಲ್ಲಿ ಕೂರಲ್ಲ. ಅವರು ಸ್ವಾಭಿಮಾನದಿಂದ ಬದುಕಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.