ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಬೇರೆ ಧರ್ಮದವರನ್ನು ಓಲೈಸುವ ಜೊತೆ ಅವರಿಗೆ ಹೆಚ್ಚು ಒತ್ತು ಕೊಡುತ್ತಾರೆ ಎಂಬ ಭಯ ರಾಜ್ಯದ ಜನರನ್ನು ಕಾಡುತ್ತಿದ್ದು, ಸಿದ್ದರಾಮಯ್ಯ ಕನಸು ಭಗ್ನವಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭವಿಷ್ಯ ನುಡಿದರು.
ಚಿಕ್ಕಮಗಳೂರು (ನ.07): ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಬೇರೆ ಧರ್ಮದವರನ್ನು ಓಲೈಸುವ ಜೊತೆ ಅವರಿಗೆ ಹೆಚ್ಚು ಒತ್ತು ಕೊಡುತ್ತಾರೆ ಎಂಬ ಭಯ ರಾಜ್ಯದ ಜನರನ್ನು ಕಾಡುತ್ತಿದ್ದು, ಸಿದ್ದರಾಮಯ್ಯ ಕನಸು ಭಗ್ನವಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭವಿಷ್ಯ ನುಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ತೀರ್ಪು ನೀಡುವ ಮುನ್ನವೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಗಳವಾಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನೊಳಗೆ ಆಂತರಿಕ ಬೇಗುದಿ ಇದ್ದು, ಜನ ಇದನ್ನು ಅರ್ಥೈಸಿಕೊಂಡಿದ್ದಾರೆ ಎಂದರು.
ಚುನಾವಣೆಯಲ್ಲಿ ಎಷ್ಟು ಮಂದಿಗೆ ಟಿಕೇಟ್ ನೀಡುತ್ತಾರೆ? ಕೊಡುವಾಗ ಸಿದ್ದರಾಮಯ್ಯ, ಡಿಕೆಶಿ ಜೊತೆ ಈಗ ಖರ್ಗೆ ಸೇರ್ಪಡೆಯಾಗಿದ್ದು, ಅದರಲ್ಲಿ ಮೂರು ಪಾಲು ಮಾಡಬೇಕಿದೆ. ರಾಜ್ಯದಲ್ಲಿ 130 ರಿಂದ 150 ಸೀಟ್ ಬರುತ್ತದೆ ಎಂದು ಕಾಂಗ್ರೆಸ್ಸಿಗರು ಭ್ರಮೆಯಲ್ಲಿದ್ದಾರೆ. 130 ರಿಂದ 150 ಸೀಟು ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿರುವುದು ಗೆಲ್ಲುವ ಸೀಟಲ್ಲ, ಬಹುಶಃ ಅವರ ಶಿಷ್ಯಂದಿರಿಗೆ ಟಿಕೇಟ್ ಕೊಡಿಸುವುದಿರಬೇಕು. ಅದರಲ್ಲೂ 75 ಸೀಟನ್ನು ಖರ್ಗೆ ಹಾಗೂ ಡಿಕೆಶಿ ಹಂಚಿಕೊಳ್ಳಬೇಕಾಗುತ್ತದೆ ಎಂದು ಟೀಕಿಸಿದರು.
Chikkamagaluru: ‘ಭಾರತ್ ಜೋಡೋ’ ಏಕೆಂದು ಅರ್ಥವಾಗ್ತಿಲ್ಲ: ಶೋಭಾ ಕರಂದ್ಲಾಜೆ
ಯಾವುದೇ ರಾಜ್ಯದಲ್ಲಿ ಅಸ್ತಿತ್ವವಿಲ್ಲದೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚುತ್ತಿದೆ. ಕರ್ನಾಟಕದಲ್ಲಿ ಹಿಂದೆ ಕಾಂಗ್ರೆಸ್ ಪಕ್ಷ ಆಡಳಿತಾವಧಿಯಲ್ಲಿ ಗಳಿಸಿದ ಭ್ರಷ್ಟಾಚಾರದ ಹಣದ ಕಾರಣಕ್ಕಾಗಿ ಸಿದ್ದು ಮತ್ತು ಡಿಕೆಶಿ ಗದ್ದಲ, ಖಾಲಿ ಡಬ್ಬದಲ್ಲಿ ಕಲ್ಲು ಹಾಕಿದಂತೆ ಸೌಂಡ್ ಮಾಡುತ್ತಿದೆ ಎಂದು ಕುಟುಕಿದರು. 5 ವರ್ಷ ಆಡಳಿತ ನಡೆಸುವ ಅವಕಾಶ ಸಿದ್ದರಾಮಯ್ಯಗೆ ಸಿಕ್ಕಿತ್ತು. ಜನ ಇಂದು ಯಾವುದನ್ನು ನೆನಪಿಟ್ಟುಕೊಂಡಿದ್ದಾರೆ? ಕಾಂಗ್ರೆಸ್ ಪಕ್ಷದ ದುರಾಡಳಿತ, ಕುಟ್ಟಪ್ಪನ ಸಾವನ್ನು ಜನ ಇನ್ನೂ ಮರೆತಿಲ್ಲ. ಟಿಪ್ಪು ಜಯಂತಿ ಮೂಲಕ ಸಮಾಜದಲ್ಲಿ ಒಡಕು ಮೂಡಿಸಿದ್ದು ರಾಜ್ಯದ ಸಾವಿರಾರು ಜನ ಕೋರ್ಚ್‌ಗೆ ಅಲೆದಾಡುತ್ತಿದ್ದಾರೆ.
ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಎಂ.ಬಿ. ಪಾಟೀಲ್ ಬಳಸಿಕೊಂಡು ಲಿಂಗಾಯತ ಹಾಗೂ ವೀರಶೈವರ ನಡುವೆಯೇ ಗೊಂದಲ ಸೃಷ್ಟಿ ಮಾಡಿ ಧರ್ಮವನ್ನು ಒಡೆಯಲು ಮುಂದಾದರು ಎಂದು ಆರೋಪಿಸಿದರು. ಒಂದು ಜಾತಿ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಿ ಶಾಲೆಯಲ್ಲಿ ಮಕ್ಕಳನ್ನು ಜಾತಿ ಆಧಾರದಲ್ಲಿ ವಿಭಜಿಸಿದರು. ಎಲ್ಲ ಸಮಾಜದಲ್ಲೂ ಬಡವರಿದ್ದರೂ ಕೇವಲ ಒಂದು ಧರ್ಮಕ್ಕೆ ಮಾತ್ರ ಶಾದಿ ಭಾಗ್ಯ ಕೊಟ್ಟರು. ಐದು ವರ್ಷಗಳ ಸಿದ್ದರಾಮಯ್ಯನ ಆಡಳಿದಲ್ಲಿ ಇಂತಹ ಡಿವೈಡಿಂಗ್ ರೂಲ್ ಮಾಡಿದರು. ಇವರಿಗೆ ಅಧಿಕಾರ ಕೊಟ್ಟರೆ ರಾಜ್ಯವನ್ನು ಕಾಶ್ಮೀರ, ಕೇರಳ ರೀತಿ ಮಾಡುತ್ತಾರಾ ಎಂಬ ಭಯ ಜನರನ್ನು ಕಾಡುತ್ತಿದೆ.
ಮಂಡ್ಯ ಬಾಲಕಿ ರೇಪ್ ಕೇಸ್: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ
ಭಯೋತ್ಪಾದನೆ, ಸಮಾಜ ದ್ರೋಹಿ ಚಟುವಟಿಕೆಯಲ್ಲಿ ತೊಡಗಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಬ್ಯಾನ್ ಆಗಿದೆ. ಅದೇ ಸಿದ್ದರಾಮಯ್ಯ ಈ ಸಂಘಟನೆಯ ಕೇಸ್‌ಗಳನ್ನು ಕ್ಯಾಬಿನೆಟ್‌ನಲ್ಲಿ ತಂದು ಜೈಲ್‌ನಿಂದ ಬಿಡುಗಡೆ ಮಾಡಿದರು. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹಲವು ಯುವಕರ ಹತ್ಯೆಯಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಹಾಜರಿದ್ದರು.