ಕಾಂಗ್ರೆಸ್‌ನಿಂದ ಕಾನೂನು ಬಾಹಿರವಾಗಿ ಮೀಸಲಾತಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

By Kannadaprabha NewsFirst Published Apr 2, 2023, 12:30 AM IST
Highlights

ರಾಜ್ಯದಲ್ಲಿ ಮತ ಬ್ಯಾಂಕ್‌ ಓಲೈಕೆಗಾಗಿ ಮುಸ್ಲಿಮರಿಗೆ ಕಾಂಗ್ರೆಸ್‌ ಪಕ್ಷವು ಕಾನೂನು ಬಾಹಿರವಾಗಿ ಮೀಸಲಾತಿ ನೀಡಿದ್ದು, ಅದನ್ನು ತೆಗೆದು ಹಾಕಿ ಎಲ್ಲರಿಗೂ ನ್ಯಾಯ ಒದಗಿಸಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ದಾವಣಗೆರೆ (ಏ.02): ರಾಜ್ಯದಲ್ಲಿ ಮತ ಬ್ಯಾಂಕ್‌ ಓಲೈಕೆಗಾಗಿ ಮುಸ್ಲಿಮರಿಗೆ ಕಾಂಗ್ರೆಸ್‌ ಪಕ್ಷವು ಕಾನೂನು ಬಾಹಿರವಾಗಿ ಮೀಸಲಾತಿ ನೀಡಿದ್ದು, ಅದನ್ನು ತೆಗೆದು ಹಾಕಿ ಎಲ್ಲರಿಗೂ ನ್ಯಾಯ ಒದಗಿಸಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಕೊಡುವಂತಿಲ್ಲ. ಆದರೆ, ಕಾಂಗ್ರೆಸ್‌ ಮುಸ್ಲಿಂ ಮತ ಬ್ಯಾಂಕ್‌ನ ಓಲೈಕೆಗಾಗಿ ಕಾನೂನು ಬಾಹಿರವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು ಎಂದರು. ಜಾತಿ, ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ಲಿಂಗಾಯತ, ಒಕ್ಕಲಿಗ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಲಾಗಿದೆ. 

ಇದು ಸಂವಿಧಾನದಡಿಯಲ್ಲಿ ಮಾಡಿರುವ ಕೆಲಸವಾಗಿದೆ. ಭೋವಿ, ಕೊರಚ ಸಮುದಾಯಗಳಿಗೆ ಅನ್ಯಾಯ ಆಗಿಲ್ಲ. ಆದರೆ, ಆ ಸಮಾಜದ ಜನರಿಗೆ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಧ್ವನಿ ಇಲ್ಲದಂತಹವರಿಗೆ ಮೀಸಲಾತಿ ಸಿಗುತ್ತಿರಲಿಲ್ಲ. ಇಂದು ಮೀಸಲಾತಿ ತಂದು, ನ್ಯಾಯ ಕೊಟ್ಟಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ಸಿನ ಷಡ್ಯಂತ್ರದಿಂದ ತಪ್ಪು ಸಂದೇಶ ಹೋಗುತ್ತಿದೆ. ಎಲ್ಲಾ ಸಮಾಜಕ್ಕೆ ಧ್ವನಿ ಕೊಡುವ ಕೆಲಸ ಮಾಡಲಾಗಿದೆ. ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ಜಾರಿಗೆ ತರಲಾಗಿದೆ. ಒಳ ಮೀಸಲಾತಿ ಕಲ್ಪಿಸುವ ಧೈರ್ಯವನ್ನು ಈವರೆಗೆ ಯಾರೂ ತೋರಲಿಲ್ಲ. ಒಳ ಮೀಸಲಾತಿ ಕಲ್ಪಿಸುವ ಮೂಲಕ ಬಿಜೆಪಿ ನ್ಯಾಯ ಕೊಟ್ಟಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಡಿಶುಂ... ಡಿಶುಂ...: ಪರೋಕ್ಷವಾಗಿ ಹೆಚ್.ಡಿ.ತಮ್ಮಯ್ಯ ವಿರುದ್ಧ ಕಾಂಗ್ರೆಸ್ಸಿಗರು ಕಿಡಿ

ಬಹುಮತ ಗಳಿಸುವುದೇ ಬಿಜೆಪಿ ಗುರಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಮತದಾರರ ನೀಡಿದ್ದರೂ, ಬಿಜೆಪಿಗೆ ಬಹುಮತ ಕೊಟ್ಟಿರಲಿಲ್ಲ. ಈ ಸಲ ಚುನಾವಣೆಯಲ್ಲಿ ಬಹುಮತ ಗಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ರಾಜ್ಯಾದ್ಯಂತ ನಮ್ಮ ಕಾರ್ಯಕರ್ತರು ಚುನಾವಣೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಎಲ್ಲಿಯೇ ಪ್ರವಾಸ ಮಾಡಿದರೂ, ಡಬಲ್‌ ಇಂಜಿನ್‌ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ದೇಶದ ರಕ್ಷಣೆ, ಅಭಿವೃದ್ಧಿ ಕೆಲಸಕ್ಕಾಗಿ ಬಿಜೆಪಿ ಬೇಕಾಗಿದೆ. ಪ್ರಧಾನಿ ಮೋದಿಯವರ ಕೆಲಸ ಹಳ್ಳಿ ಹಳ್ಳಿಗೂ ತಲುಪಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಬಹುಮತ ನೀಡುವ ಮೂಲಕ ಅಧಿಕಾರಕ್ಕೆ ತರುತ್ತಾರೆ. ಮೋದಿಯವರ ಕೈಬಲಪಡಿಸಲು ಜನತೆ ಶಕ್ತಿ ತುಂಬುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅರಶಿನ ಕ್ವಿಂಟಾಲ್‌ಗೆ 6,694 ರು. ಬೆಂಬಲ ಬೆಲೆ: ರಾಜ್ಯದ ರೈತರ ಮನವಿಯಂತೆ ಅರಶಿನ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ 6,694 ರು.ನಂತೆ ಬೆಂಬಲ ಬೆಲೆ ಘೋಷಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅರಶಿನ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ಮಾರುಕಟ್ಟೆಮಧ್ಯಸ್ಥಿಕೆ ಯೋಜನೆಯಡಿ ಅರಶಿನ ಬೆಳೆಯನ್ನು ಖರೀದಿಸಬೇಕೆಂದು ರಾಜ್ಯದ ಅರಶಿನ ಬೆಳೆಗಾರರ ನಿಯೋಗ ಕಳೆದ ವಾರ ತನಗೆ ಮನವಿ ಸಲ್ಲಿಸಿತ್ತು, ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರವು ಸಹ ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಆಮ್‌ ಆದ್ಮಿ ಪಕ್ಷದ ಹಿನ್ನಡೆಗೆ ಬಿಜೆಪಿ ಹುನ್ನಾರ: ಮುಖ್ಯಮಂತ್ರಿ ಚಂದ್ರು

ಅದರಂತೆ 2022-23ನೇ ಸಾಲಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಅರಿಶಿನ ಖರೀದಿಗೆ ಪ್ರತಿ ಕ್ವಿಂಟಾಲ್‌ಗೆ 6,694 ರು.ನಂತೆ ಮಾ.22ರಂದು ಅನುಮೋದನೆ ನೀಡಲಾಗಿದೆ. ಪ್ರಸ್ತುತ ಅರಶಿನ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ 5200 ರು. ಮಾರುಕಟ್ಟೆ ಬೆಲೆ ಇದೆ. ಅದಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ 6694 ರು. ಸೇರಿ, ಅಂದಾಜು 1400-1500 ರು.ಗಳಷ್ಟುಲಾಭವಾಗುತ್ತದೆ ಎಂದು ಸಚಿವೆ ಹೇಳಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರದ ಈ ಯೋಜನೆಯಿಂದ ರಾಜ್ಯದಲ್ಲಿ ಹೆಚ್ಚು ಅರಶಿನ ಬೆಳೆಸುವ ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ಬೀದರ್‌ ಹಾಗೂ ಕಲಬುರಗಿ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ ಎಂದವರು ತಿಳಿಸಿದ್ದಾರೆ.

click me!