2024ರಲ್ಲಿ ಮೋದಿ ನೇತೃತ್ವದ ಭಾರತವಾಗಿಸಿ: ಕೇಂದ್ರ ಸಚಿವ ಜೋಶಿ

By Girish Goudar  |  First Published May 28, 2022, 4:14 AM IST

*  ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ
*  ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಬಡವರಿಗಾಗಿ ಯೋಜನೆ ರೂಪಿಸಿದ ಕೇಂದ್ರ ಸರ್ಕಾರ 
*  ಮೋದಿ ಕೈಗೊಂಡ ಕೆಲಸ-ಕಾರ್ಯವನ್ನು ಮನೆ, ಮನೆಗೆ ತಲುಪಿಸುವ ಕೆಲಸ ಆಗಬೇಕು 


ಹುಬ್ಬಳ್ಳಿ(ಮೇ.28): ಮುಂಬರುವ 2024ರ ಚುನಾವಣೆಯ ಫಲಿತಾಂಶ ಕೂಡ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಆಗುವಂತೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿಯಲ್ಲಿ ಪ್ರಕೋಷ್ಠಗಳ ಕಾರ್ಯ ಮಹತ್ವದ್ದು. ಕಾರ್ಯಕರ್ತರಿಗೆ ಮುಖ್ಯ ಸಮಿತಿಯಲ್ಲಿ ಸ್ಥಾನ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಪ್ರಕೋಷ್ಠಕ್ಕೆ ಸೇರ್ಪಡೆ ಮಾಡಿಲ್ಲ. ಬಡವರಿಗೆ ಸಮರ್ಪಿತವಾದ ಸರ್ಕಾರದ ಕಾರ್ಯಗಳನ್ನು ಜನತೆಗೆ ಮುಟ್ಟಿಸುವ ಕೆಲಸವನ್ನು ನಿರ್ವಹಿಸುವ ಮಹತ್ವದ ಕಾರ್ಯ ಪ್ರಕೋಷ್ಠದ ಮೇಲಿದೆ ಎಂದರು.

Tap to resize

Latest Videos

ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಕೇಂದ್ರ ಸರ್ಕಾರ ಬಡವರಿಗಾಗಿ ಯೋಜನೆ ರೂಪಿಸಿದೆ. ಉಜಾಲ ಯೋಜನೆಯಡಿ 37 ಕೋಟಿ ಎಲ್‌ಇಡಿ ವಿದ್ಯುತ್‌ ಬಲ್ಬ್‌ ನೀಡಿದ್ದು 48 ಲಕ್ಷ ವ್ಯಾಟ್‌ ವಿದ್ಯುತ್‌ ಉಳಿತಾಯವಾಗಿದೆ. ಜತೆಗೆ . 20 ಸಾವಿರ ಕೋಟಿ ಉಳಿತಾಯ ಆಗಿದೆ. ಉಜ್ವಲ್‌ ಯೋಜನೆಯಡಿ ನೀಡಿದ 8 ಕೋಟಿ ಗ್ಯಾಸ್‌ ಕನೆಕ್ಷನ್‌ನಲ್ಲಿ 5 ಕೋಟಿ ಉಚಿತವಾಗಿ ವಿತರಿಸಿದ್ದೇವೆ. ಒನ್‌ ಕಾರ್ಡ್‌ ಒನ್‌ ನೇಷನ್‌ ನೀಡಲಾಗಿದೆ. ಇಂತಹ ಕಾರ್ಯಗಳ ಕುರಿತು, ದೇಶದಲ್ಲಿನ ಪರಿವರ್ತನೆಯನ್ನು ಜನತೆಗೆ ಮನದಟ್ಟು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿವಿಧ ಪ್ರಕೋಷ್ಠಗಳ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮುಂದಾಗಬೇಕು ಎಂದರು.

MLC Election: ಪರಿಷತ್ತಿನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ: ಕಟೀಲ್‌

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಾತನಾಡಿ, ಪ್ರಕೋಷ್ಠಗಳನ್ನು ಸಮರ್ಥವಾಗಿ ಹೊಂದಿರುವುದು ಬಿಜೆಪಿ ಮಾತ್ರ. ಇಲ್ಲಿ ಅಸಂಘಟಿತ ಕಾರ್ಮಿಕರು, ವೈದ್ಯರು, ಮೀಡಿಯಾ ಸೇರಿ ಎಲ್ಲ ವರ್ಗಗಳನ್ನು ಒಳಗೊಂಡಿದೆ. ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯ. ಕಳೆದ ಎಂಟು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಕೆಲಸ-ಕಾರ್ಯವನ್ನು ಮನೆ, ಮನೆಗೆ ತಲುಪಿಸುವ ಕೆಲಸ ಆಗಬೇಕು. ಜಪಾನ್‌ನಲ್ಲಿ 40 ಗಂಟೆಗಳಲ್ಲಿ 27 ಸಭೆ ಮಾಡಿರುವ ಮೋದಿ ಕೆಲಸ ಅಚ್ಚರಿ ತರಿಸಿದೆ ಎಂದರು.

ಜಾಗತಿಕ ವಿದ್ಯಮಾನಕ್ಕೆ ಸಂಬಂಧಿಸಿ ಇತರೆ ದೇಶಗಳ ಪೆಟ್ರೋಲ…, ಡೀಸೆಲ್‌ ಬೆಲೆಗೆ ಹೋಲಿಸಿದರೆ ನಮ್ಮಲ್ಲಿ ತೀರಾ ಕಡಿಮೆ ಇದೆ. ಈಚೆಗೆ ಪುನಃ ಬೆಲೆ ಇಳಿಕೆ ಮಾಡಲಾಗಿದೆ. ಆದರೆ ಕಾಂಗ್ರೆಸ್ಸಿಗೆ ಅದನ್ನು ಶ್ಲಾಘಿಸುವ, ರಚನಾತ್ಮಕ ಸಲಹೆ ನೀಡುವ ಮನೋಭಾವ ಇಲ್ಲ. ಸಣ್ಣ ಉದ್ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ಕಾರಣದಿಂದ ಕೋವಿಡ್‌ನ ಕ್ಲಿಷ್ಟಸಂದರ್ಭದಲ್ಲಿ ಕೈಗಾರಿಕೆಗಳು ಉಳಿದಿವೆ ಎಂದ ಶೆಟ್ಟರ್‌, ಮುಂಬರುವ ಚುನಾವಣೆ ವರ್ಷದಲ್ಲಿ ಪ್ರಕೋಷ್ಠಗಳ ಜವಾಬ್ದಾರಿ ಮಹತ್ವವಾದುದು ಎಂದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಪ್ರಕೋಷ್ಠದ ರಾಜ್ಯ ಸಂಚಾಲಕ ಎಂ.ಬಿ. ಭಾನುಪ್ರಕಾಶ, ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಡಾ. ಮಹೇಶ ನಾಲವಾಡ, ನಾಗೇಶ ಕಲಬುರ್ಗಿ ಸೇರಿ ಹಲವರಿದ್ದರು
 

click me!