ಅಧಿಕಾರದ ಸ್ಥಿರತೆಗೆ ಧಕ್ಕೆ ತರುವ ದುರುದ್ದೇಶದಿಂದ ಪ್ರತಿಪಕ್ಷಗಳು ಈ ಕೃತ್ಯ ಎಸಗಿವೆ.
ಹುಬ್ಬಳ್ಳಿ(ಆ.13): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಚಿಂತನೆಯಿಲ್ಲ. ಇದು ಕೇವಲ ಊಹಾಪೋಹ. ಬಸವರಾಜ ಬೊಮ್ಮಾಯಿ ಅವರೇ ಪೂರ್ಣಾವಧಿ ಅಧಿಕಾರ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಗರದಲ್ಲಿ ನವೀಕೃತ ಪಾಲಿಕೆ ಮೇಯರ್ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಸುದ್ದಿ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಆಗಲಿ, ಕೇಂದ್ರದಲ್ಲಿ ಆಗಲಿ ಈ ಕುರಿತು ಯಾವುದೇ ಚರ್ಚೆಗಳು ಪಕ್ಷದ ನಡೆದಿಲ್ಲ ಎಂದರು.
ಅಧಿಕಾರದ ಸ್ಥಿರತೆಗೆ ಧಕ್ಕೆ ತರುವ ದುರುದ್ದೇಶದಿಂದ ಪ್ರತಿಪಕ್ಷಗಳು ಈ ಕೃತ್ಯ ಎಸಗಿವೆ. ಏತನ್ಮಧ್ಯೆ ಸಿಎಂ ಹುದ್ದೆಗೂ ಜಗದೀಶ ಶೆಟ್ಟರ್ ಹೆಸರು ಯಾರು ಮುನ್ನೆಲೆಗೆ ತಂದಿದ್ದಾರೆ ಗೊತ್ತಿಲ್ಲ ಎಂದರು.
ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ: ಅರುಣ್ ಸಿಂಗ್ ಸ್ಪಷ್ಟೋಕ್ತಿ
ಕಳಪೆ ಧ್ವಜ ಜೋಶಿ ಅಸಮಾಧಾನ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೋಷಪೂರಿತ ರಾಷ್ಟ್ರಧ್ವಜ ಪೂರೈಕೆ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವ ಜೋಶಿ, ಮಾನದಂಡ ಉಲ್ಲಂಘಿಘಿಸಿ ತಯಾರಿಸಿದ ಧ್ವಜಗಳನ್ನು ಸ್ವೀಕರಿಸಿರುವ ಪಾಲಿಕೆ ಸಿಬ್ಬಂದಿಯ ಕರ್ತವ್ಯಲೋಪ ಎಂಬುದು ಕಂಡು ಬಂದಿದೆ. ತೆಗೆದುಕೊಳ್ಳುವ ಮುನ್ನವೇ ಅವುಗಳನ್ನು ಪರಿಶೀಲಿಸಬೇಕಿತ್ತು. ಈ ರೀತಿ ಲೋಪ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಾನೇನು ಡಿಕೆಶಿ, ಸಿದ್ದುನ ಭೇಟಿಯಾಗಿದ್ದೀನಾ?: ಶೆಟ್ಟರ್
ನಾನೇನು ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೀನಾ? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೀರಾ? ಎಂಬ ಪ್ರಶ್ನೆಗೆ ಗರಂ ಆದ ಅವರು, ವೈಷ್ಣೋದೇವಿಗೆ ಹೋಗಿ ಬರುವಾಗ ದೆಹಲಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ನಿಜ. ಅದಕ್ಕೆ ವಿಶೇಷ ಅರ್ಥ ಕಲಿಸಬೇಕಾಗಿಲ್ಲ. ಯಡಿಯೂರಪ್ಪ ನಮ್ಮ ನಾಯಕರು. ನಾನೇನು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೀನಾ? ಎಂದು ಮರು ಪ್ರಶ್ನೆ ಹಾಕಿದರು. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬದಲಾವಣೆ ಬಗ್ಗೆ ಪ್ರಸ್ತಾವನೆ ಇಲ್ಲವೇ ಇಲ್ಲ ಎಂದು ಹೇಳಿದರು.