ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ: ಅರುಣ್‌ ಸಿಂಗ್‌ ಸ್ಪಷ್ಟೋಕ್ತಿ

By Govindaraj SFirst Published Aug 13, 2022, 5:05 AM IST
Highlights

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ ಉಸ್ತುವಾರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಾಗುತ್ತದೆ ಎಂದು ಹೇಳಿದ್ದಾರೆ.

ನವದೆಹಲಿ (ಆ.13): ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ ಉಸ್ತುವಾರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬದಲಾವಣೆ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

‘ಮುಂದಿನ ವರ್ಷ ಕರ್ನಾಟಕದಲ್ಲಿ ನಾವು ಸರ್ಕಾರ ರಚನೆ ಮಾಡಲಿದ್ದೇವೆ. ನಾಯಕತ್ವ ಬದಲಾವಣೆ ಮಾಡುವ ಯಾವುದೇ ಯೋಚನೆಯಿಲ್ಲ. ಕಾಂಗ್ರೆಸ್‌ ನಾಯಕರಿಲ್ಲದ ಪಕ್ಷವಾಗಿದೆ. ಬಿಜೆಪಿಯನ್ನು ಎದುರಿಸಲು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಬಳಿ ಯಾವುದೇ ಅಜೆಂಡಾಗಳಿಲ್ಲ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.

ಯಡಿಯೂರಪ್ಪ ಕರ್ನಾಟಕದ ಅತ್ಯುನ್ನತ ನಾಯಕ: ಅರುಣ್‌ ಸಿಂಗ್‌

‘ಮುಖ್ಯಮಂತ್ರಿ ಬಸವಾಜ ಬೊಮ್ಮಾಯಿ ರೈತರಿಗಾಗಿ, ಯುವಕರಿಗಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹಾಗಾಗಿ ನಾವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ ಹಾಗೂ ಅದನ್ನು ಸಾಧಿಸುತ್ತೇವೆ’ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ ಒಂದು ಒಡೆದ ಮನೆಯಾಗಿದೆ. ಅವರು ರಾಜ್ಯದಲ್ಲಿ ಬರೀ ಗೊಂದಲ ಸೃಷ್ಟಿಸುವಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ ಒಳಸಂಚಿನಲ್ಲಿ ತೊಡಗಿಕೊಂಡಿರುವ ಪಕ್ಷವಾಗಿದೆ ಎಂದು ಟೀಕಿಸಿದರು.

ಹರ್‌ ಘರ್‌ ತಿರಂಗಾಗೆ ಭರ್ಜರಿ ಪ್ರತಿಕ್ರಿಯೆ: ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಮಹತ್ವಾಕಾಂಕ್ಷಿ ಹರ್‌ಘರ್‌ ತಿರಂಗಾ ಅಭಿಯಾನ ಶನಿವಾರದಿಂದ 3 ದಿನ ದೇಶಾದ್ಯಂತ ಜರುಗಲಿದೆ. ಆದರೆ ಅದಕ್ಕೂ ಮುನ್ನವೇ ದೇಶಾದ್ಯಂತ ತಿರಂಗಾ ಸಂಭ್ರಮಾಚರಣೆ ಆರಂಭವಾಗಿದೆ. ‘ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ ದೊರಕಿದೆ. 20 ಕೋಟಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಗುರಿಯನ್ನು ನಾವು ಖಂಡಿತ ತಲುಪುತ್ತೇವೆ’ ಎಂದು ಬಿಜೆಪಿ ಅತೀವ ವಿಶ್ವಾಸ ವ್ಯಕ್ತಪಡಿಸಿದೆ. ಹರ್‌ ಘರ್‌ ತಿರಂಗಾ ಅಭಿಯಾನದ ಕಾರ್ಯಚಟುವಟಿಕೆ ಆ.9ರಿಂದಲೇ ಆರಂಭವಾಗಿದೆ. ದೇಶದ ಮೂಲೆ ಮೂಲೆಗಳಲ್ಲಿ ಜನ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ. 

ರಾಷ್ಟ್ರಧ್ವಜ ಖರೀದಿಸಿ ಇಟ್ಟುಕೊಂಡಿದ್ದು, ಶನಿವಾರದಿಂದ ‘ಮನೆ ಮನೆಯಲ್ಲಿ ತ್ರಿವರ್ಣ ಧ್ವಜ’ ಹಾರಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಹೇಳಿದ್ದಾರೆ. ಇದೇ ವೇಳೆ ಜನರು ತಿರಂಗಾ ಜತೆ ಸೆಲ್ಫಿ ತೆಗೆಸಿಕೊಳ್ಳಬೇಕು. ಅವನ್ನು ಹರ್‌ ಘರ್‌ ತಿರಂಗಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ದೇಶದ ಅಂಚೆ ಕಚೇರಿ, ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಕಚೇರಿಗಳಲ್ಲಿ ತ್ರಿವರ್ಣಧ್ವಜ ಮಾರಾಟ ಹಾಗೂ ವಿತರಣೆ ಪ್ರಗತಿಲ್ಲಿದೆ.

ರದ್ದಾಗಿದ್ದ ಬಿಜೆಪಿ ಜನೋತ್ಸವ ಸಮಾವೇಶಕ್ಕೆ ಹೊಸ ದಿನಾಂಕ ಫಿಕ್ಸ್, ಬಿಎಸ್‌ವೈಗೆ ಆಹ್ವಾನ

ಏನಿದು ಹರ್‌ ಘರ್‌ ತಿರಂಗಾ?: ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿರುವ ಕಾರಣ, ದೇಶದ ಪ್ರತಿ ಮನೆ ಮೇಲೂ ಆ.13ರಿಂದ 15ರವರೆಗೆ ಹಗಲೂ ರಾತ್ರಿ ರಾಷ್ಟ್ರಧ್ವಜ ಹಾರಬೇಕು ಎಂಬುದು ‘ಹರ್‌ ಘರ್‌ ತಿರಂಗಾ’ ಕಾರ್ಯಕ್ರಮದ ಉದ್ದೇಶ. ಈ ಮೂಲಕ ಇದಕ್ಕೆಂದೇ ದೇಶದ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಮಾರಾಟ ನಡೆದಿದೆ. 3 ದಿನ ಹಗಲು-ರಾತ್ರಿ ರಾಷ್ಟ್ರಧ್ವಜ ಹಾರಿಸುವ ಉದ್ದೇಶವಿದ್ದು, ಇದಕ್ಕೆಂದೇ ಸಂಜೆ ಸೂರ್ಯಾಸ್ತದಿಂದ ಬೆಳಗ್ಗಿನ ಸೂರ್ಯೋದಯದವರೆಗೆ ಧ್ವಜ ಹಾರಿಸಬಾರದು ಎಂಬ ನಿಯಮವನ್ನು ತೆಗೆದು ಹಾಕಲಾಗಿದೆ.

click me!