
ನವದೆಹಲಿ(ಆ. 29): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ತಮಗೆ ಹಿಂದೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಆಹ್ವಾನ ಬಂದಿತ್ತು. ಆದರೆ, ಅದಕ್ಕೆ ಉತ್ತರಿಸಿದ್ದ ಅವರು, 'ಅಂಥದ್ದೇನಾದರೂ ಸ್ಥಿತಿ ಬಂದರೆ ನಾನು ಬಾವಿಗಾದರೂ ಹಾರುತ್ತೇನೆ. ಎಂದಿಗೂ ಕಾಂಗ್ರೆಸ್ ಪಕ್ಷ ಸೇರೋದಿಲ್ಲ' ಎಂದು ಉತ್ತರಿಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಶನಿವಾರ ವಾಣಿಜ್ಯೋದ್ಯಮಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಒಬ್ಬ ವ್ಯಕ್ತಿಯು ಯುದ್ಧದಲ್ಲಿ ಸೋತಾಗ ಅಲ್ಲ, ಅವನು ರಣರಂಗವನ್ನು ತ್ಯಜಿಸಿದಾಗ ಸೋಲು ಕಾಣುತ್ತಾನೆ. ವ್ಯಾಪಾರ, ಸಾಮಾಜಿಕ ಕೆಲಸ ಅಥವಾ ರಾಜಕೀಯದಲ್ಲಿ ಯಾವುದರಲ್ಲೇ ಆಗಲಿ ಮಾನವ ಸಂಬಂಧಗಳು ದೊಡ್ಡ ಶಕ್ತಿ ಎಂದು ಗಡ್ಕರಿ ಹೇಳಿದರು. ಆದ್ದರಿಂದ ಯಾರನ್ನೂ ಅಗತ್ಯವಿದ್ದಾಗ ಬಳಸಿಕೊಂಡು ಆಮೇಲೆ ಎಸೆಯಬಾರದು. ಅದು ನಿಮ್ಮ ಒಳ್ಳೆಯ ದಿನದಲ್ಲೇ ಆಗಿರಲಿ, ಕೆಟ್ಟ ದಿನದಲ್ಲೇ ಆಗಿರಲಿ. ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. ಸಂದರ್ಭಗಳಿಗೆ ಅನುಗುಣವಾಗಿ ಉದಯಿಸುತ್ತಿರುವ ಸೂರ್ಯನನ್ನು ಪೂಜಿಸಬೇಡಿ ಎಂದು ಗಡ್ಕರಿ ಹೇಳಿದ್ದಾರೆ. ಬಿಜೆಪಿಯ ಸಂಸದೀಯ ಮಂಡಳಿಯಿಂದ ತಮ್ಮನ್ನು ಕೈಬಿಟ್ಟ ಕುರಿತಾಗಿಯೇ ನಿತಿನ್ ಗಡ್ಕರಿ ಮಾರ್ಮಿಕವಾಗಿ ಈ ಮಾತನ್ನು ಹೇಳಿದ್ದಾರೆ ಎಂದು ವಿಮರ್ಶೆ ಮಾಡಲಾಗುತ್ತಿದೆ.
ಗಡ್ಕರಿ ಅವರು ನಾಗ್ಪುರದಲ್ಲಿ ವಿದ್ಯಾರ್ಥಿ ನಾಯಕರಾಗಿದ್ದಾಗ ಕಾಂಗ್ರೆಸ್ ನಾಯಕರೊಂದಿಗಿನ ನಡೆಸಿದ್ದ ಸಂಭಾಷಣೆಯನ್ನು ಈ ಸಮಯದಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಸ್ನೇಹಿತ ಶ್ರೀಕಾಂತ್ ಜಿಚ್ಕರ್, ಅವರು ಆಗ ಕಾಂಗ್ರೆಸ್‌ನಲ್ಲಿದ್ದರು, ನೀವು ಒಳ್ಳೆಯ ವ್ಯಕ್ತಿ ಆದರೆ ತಪ್ಪು ಪಕ್ಷದಲ್ಲಿದ್ದೀರಿ, ಉತ್ತಮ ಭವಿಷ್ಯಕ್ಕಾಗಿ ನೀವು ಕಾಂಗ್ರೆಸ್‌ಗೆ ಸೇರಬೇಕು. ಆಗ ನಾನು ಶ್ರೀಕಾಂತ್‌ಗೆ ಹೇಳಿದ್ದೆ. ನಾನು ಬಾವಿಗೆ ಬೇಕಾದರೂ ಹಾರುತ್ತೇನೆ. ಕಾಂಗ್ರೆಸ್‌ಗೆ ಮಾತ್ರ ಸೇರೋದಿಲ್ಲ. ಯಾಕೆಂದರೆ, ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿರುವ ಸಿದ್ಧಾಂತ ತಮಗೆ ಎಂದಿಗೂ ಇಷ್ಟವಾಗುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದರು.
ನನ್ನ ಪಕ್ಷವು ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದ ಸಮಯದಲ್ಲೂ ನನ್ನ ನಿರ್ಧಾರ ಇದಾಗಿತ್ತು ಎಂದು ಗಡ್ಕರಿ ಹೇಳಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರು ಹಿಂದಿನ ಅಮೇರಿಕನ್ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಜೀವನಚರಿತ್ರೆಯನ್ನು ಉಲ್ಲೇಖಿಸಿ, ಯಾರಾದರೂ ಸೋಲು ಕಂಡಾಗ ಅವರ ಸಾಂಗತ್ಯವನ್ನು ಯಾರೂ ಕೂಡ ತೊರೆಯಬಾರದು ಎಂದು ಹೇಳಿದರು.
ಸೋಲು ಕಂಡಾಗ ಯಾವುದೇ ವ್ಯಕ್ತಿ ಕೂಡ ಸೋತಂತಲ್ಲ. ರಣರಂಗವನ್ನು ತೊರೆದಾಗ ಅಥವಾ ಯುದ್ಧವನ್ನೇ ಮಾಡದೇ ಇದ್ದಾಗ ಆತ ಸೋತಂತೆ. ನಿಮ್ಮಲ್ಲಿ ಧನಾತ್ಮಕ ವರ್ತನೆಗಳಿರಬೇಕು, ಆತ್ಮನಂಬಿಕೆ ಇರಬೇಕು. ಆದರೆ, ಅಹಂಕಾರವಿರಬಾರದು ಎಂದು ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
'ಮನೆ ಬಾಗಿಲು ಕಾಯಿ..' ಎಂದು ಪಕ್ಷ ಹೇಳಿದ್ರೆ ದೇಶಕ್ಕಾಗಿ ಅದನ್ನೂ ಮಾಡ್ತೇನೆ: ಶಿವರಾಜ್ ಸಿಂಗ್ ಚೌಹಾಣ್
ಇತ್ತೀಚೆಗೆ ಬಿಜೆಪಿಯ ಪ್ರಮುಖ ಮಂಡಳಿಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲಾಗಿತ್ತು. ಆಗ, ಬಿಜೆಪಿಯ ಅತ್ಯಂತ ಶಕ್ತಿಶಾಲಿ ಸಮಿತಿಯಾಗದ್ದ ಸಂಸದೀಯ ಮಂಡಳಿಯಿಂದ ನಿತಿನ್ ಗಡ್ಕರಿ ಅವರನ್ನು ಕೈಬಿಡಲಾಗಿತ್ತು. ಅವರು ಸರ್ಕಾರದ ಅತ್ಯಂತ ಹಿರಿಯ ಸಚಿವರಲ್ಲಿ ಒಬ್ಬರು ಮತ್ತು ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಕಾರಣ ಈ ನಿರ್ಧಾರ ಆಶ್ಚರ್ಯವನ್ನುಂಟು ಮಾಡಿತ್ತು. 2009 ರಿಂದ 2013ರವರೆಗೆ ನಿತಿನ್ ಗಡ್ಕರಿ ಬಿಜೆಪಿಯ ರಾಷ್ಟ್ರಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಅಧಿಕಾರಕ್ಕಾಗಿ ರಾಜಕೀಯ, ಈ ಮಾತಿಗೆ ಸಂಸದೀಯ ಸಮಿತಿಯಿಂದ ಹೊರಬಿದ್ರಾ ನಿತಿನ್ ಗಡ್ಕರಿ?
ಈ ನಡುವೆ ಕೆಲವು ಮಾಹಿತಿಗಳ ಪ್ರಕಾರ, ನಿತಿನ್ ಗಡ್ಕರಿ ಅವರ ಕೆಲವು ಹೇಳಿಕೆಗಳು ಸ್ವತಃ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದವು. ಆರ್‌ಎಸ್ಎಸ್ ನ ಪ್ರಮುಖ ನಾಯಕರ ಸೂಚನೆಯ ಮೇರೆಗೆ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ. ಕೆಲವು ದಿನಗಳ ಹಿಂದೆ, ಗಡ್ಕರಿ ಅವರು "ರಾಜಕೀಯ ಮೈಲೇಜ್‌ಗಾಗಿ ತಮ್ಮ ಹೇಳಿಕೆಯನ್ನು ಅವರಂತೆ ರೂಪಿಸಿ ಅಪಪ್ರಚಾರ' ನಡೆಸುತ್ತಿರುವ ಮುಖ್ಯವಾಹಿನಿಯ ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಕೆಲವು ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.