ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರ ನೇರ ಕೈವಾಡವಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳಿಗೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಹುಬ್ಬಳ್ಳಿ (ಜು.20): ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರ ನೇರ ಕೈವಾಡವಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳಿಗೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣದಲ್ಲಿ ಸತ್ತವರ ಹೆಸರಲ್ಲೂ ಡಿನೋಟಿಫಿಕೇಶನ್ ಮಾಡಲಾಗಿದೆ. 1993 ರಲ್ಲಿ ಸತ್ತವರ ಹೆಸರಿನಲ್ಲಿ ಖಾತೆ ಸೃಷ್ಟಿಸಲಾಗಿದೆ. 1998ರಲ್ಲಿ ಸತ್ತಿರುವವರ ಹೆಸರಲ್ಲಿಯೂ ಡಿನೋಟಿಫೈ ಮಾಡಲಾಗಿದೆ. ಜಮೀನು ಸಿದ್ದರಾಮಯ್ಯ ಅವರದ್ದಾ? ಯಾರು ಡಿನೋಟಿಫಿಕೇಷನ್ ಮಾಡಿಸಿದವರು? ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವುದರಿಂದ ಮುಖ್ಯಮಂತ್ರಿ ನೈತಿಕತೆ ಉಳಿಸಿಕೊಂಡಿಲ್ಲ. ಜಾರಿ ನಿರ್ದೇಶನಾಲಯ (ಇ.ಡಿ) ಸಿಎಂ ಹೆಸರು ಹೇಳುವಂತೆ ಬಂಧಿತರ ಮೇಲೆ ಒತ್ತಡ ಹಾಕುತ್ತಿದೆ ಎಂದು ಸಚಿವರಿಂದ ಸಿದ್ದರಾಮಯ್ಯ ಹೇಳಿಕೆ ನೀಡಿಸುತ್ತಿದ್ದಾರೆ. ಈ ಮಾಹಿತಿ ಅವರಿಗೆ ಎಲ್ಲಿಂದ ಬಂತು? ಇ.ಡಿ. ತನಿಖೆ ವಿಚಾರ ಸಿಎಂಗೆ ಹೇಗೆ ಗೊತ್ತಾಯಿತು? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ತಾಂಡವ: ಕೆಐಎಡಿಬಿಯಲ್ಲಿಯೂ ಹಗರಣ ನಡೆದಿದೆ ಎನ್ನುವ ಮಾಹಿತಿ ಬರುತ್ತಿದ್ದು, ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ. ನಾನು ಕೇಂದ್ರ ಸಚಿವನಾಗಿದ್ದು, ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅವರೇ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಧಾರವಾಡದಲ್ಲಿ 1 ವರ್ಷದಿಂದ ಹಾಲಿನ ಸಬ್ಸಿಡಿ ಹಣ ನೀಡುತ್ತಿಲ್ಲ ಎಂದು ರೈತರು ಕೆಎಂಎಫ್ ಎದುರು ಹೋರಾಟ ಮಾಡುತ್ತಿದ್ದಾರೆ. ಅದಕ್ಕೂ ಸರ್ಕಾರ ಸ್ಪಂದಿಸದಿರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
108 ಆ್ಯಂಬುಲೆನ್ಸ್‌ಗೆ 7 ವರ್ಷವಾದರೂ ಹೊಸ ಟೆಂಡರ್ ಇಲ್ಲ: ರಾಜ್ಯಾದ್ಯಂತ ಸೇವೆಯಲ್ಲಿ ಪದೇ ಪದೇ ವ್ಯತ್ಯಯ
ಇಂದು ಸಕಲೇಶಪುರಕ್ಕೆ ಭೇಟಿ: ಕರಾವಳಿ ಭಾಗ ಸೇರಿ ರಾಜ್ಯದ ವಿವಿಧೆಡೆ ಅಪಾರ ಮಳೆಯಾಗಿ 7 ಜನರು ಮೃತಪಟ್ಟಿದ್ದಾರೆ. ಹಲವೆಡೆ ಗುಡ್ಡ ಕುಸಿದು ಸಾಕಷ್ಟು ಹಾನಿಯಾಗಿದ್ದರೂ ಮುಖ್ಯಮಂತ್ರಿ, ಸಚಿವರು ಸ್ಥಳಕ್ಕೆ ಭೇಟಿ ನೀಡದಿರುವುದು ಆಶ್ಚರ್ಯ ತಂದಿದೆ. ಇವರ ಈ ನಡೆಯಿಂದ ಸರ್ಕಾರಕ್ಕೆ ಜನರ ಮೇಲೆ ಎಷ್ಟು ಕಾಳಜಿಯಿದೆ ಎಂಬುದು ಗೊತ್ತಾಗುತ್ತದೆ. ಸಕಲೇಶಪುರದಲ್ಲಿ ಮಳೆಯಿಂದಾಗಿ ಹಾನಿಗೊಳಲಾಗದ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವೆ ಎಂದು ಕುಮಾರಸ್ವಾಮಿ ಹೇಳಿದರು.