
ಬೆಂಗಳೂರು(ಸೆ.29): ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಬಗ್ಗೆ ಎರಡು ನಾಲಿಗೆಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ಶನಿವಾರ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಐದು ವರ್ಷ ಅಧಿಕಾರದಲ್ಲಿದ್ದಾಗ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡದ ವೇಳೆ ರಾಜ್ಯಪಾಲರನ್ನು ಸಿದ್ದರಾಮಯ್ಯ ಹೊಗಳಿದ್ದರು. ಇದೀಗ ತಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ಕೊಟ್ಟ ಮೇಲೆ ರಾಜ್ಯ ಪಾಲರನ್ನು ತೆಗಳುತ್ತಿದ್ದಾರೆ ಎಂದು ಕಿಡಿಕಾರಿದರು.
ಅಭಿಯೋಜನೆಗೆ ಅನುಮತಿ ಕೊಟ್ಟ ಮೇಲೆ ರಾಜ್ಯಪಾಲರ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅತ್ಯಂತ ಕೀಳಾಗಿ ವರ್ತಿಸಿದ್ದಾರೆ. ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದಾರೆ. ಪ್ರತಿಕೃತಿ ದಹನ ಮಾಡಿದ್ದಾರೆ. ಈಗ ಅವರು ಯಾರಿಗೆ ಚಪ್ಪಲಿ ಹಾರ ಹಾಕುತ್ತಾರೆ? ಯಾರ ಪ್ರತಿಕೃತಿ ದಹನ ಮಾಡುತ್ತಾರೆ. ಸರ್ಕಾರ ಮತ್ತು ಸಿಎಂ ತಪ್ಪು ಮಾಡಿದ್ದು, ರಾಜ್ಯಪಾಲರು ಅಧಿಕಾರ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಿದ್ದಾರೆ. ಸರ್ಕಾರದಿಂದ ಸಮಜಾಯಿಷಿ ಕೇಳುವುದು ರಾಜ್ಯಪಾಲರ ಹಕ್ಕು ಎಂದು ಟಾಂಗ್ ಕೊಟ್ಟರು.
ತನಿಖೆ ಮಾಡುವವರ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ: ಎ.ಎಸ್.ಪೊನ್ನಣ್ಣ ಅಸಮಾಧಾನ
ನನ್ನ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ತೀರ್ಮಾನವಾಗಲಿ, ತೀರ್ಪು ಬಂದರೆ ತಲೆಬಾಗುತ್ತೇನೆ. ಇವರು ಕೇಳಿದ ಕೂಡಲೇ ನಾನು ಯಾಕೆ ರಾಜೀನಾಮೆ ಕೊಡಬೇಕು? ನಾನು ಅರ್ಕಾವತಿಯಲ್ಲಿ ರೀಡೂ ಮಾಡಿದಂತೆ ಮಾಡಿಲ್ಲ ಮತ್ತು ಸರ್ಕಾರಿ ಜಮೀನು ಕಬಳಿಸಿಲ್ಲ. ಮಾಡುವ ಅಕ್ರಮ ಎಲ್ಲಾ ಮಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಮಾತನಾಡುತ್ತಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.