ಇಂದು ಅಮಿತ್‌ ಶಾ ರಾಜ್ಯಕ್ಕೆ: ಉತ್ತರ ಕರ್ನಾಟಕದಲ್ಲಿ ಬಿಜೆಪಿ ಟಾನಿಕ್‌..!

By Kannadaprabha NewsFirst Published Jan 27, 2023, 7:00 AM IST
Highlights

ನಾಳೆ ಹು-ಧಾ, ಕಿತ್ತೂರು, ಬೆಳಗಾವಿಯಲ್ಲಿ ಮಿಂಚಿನ ಸಂಚಾರ, ಕಿತ್ತೂರು ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಸರಣಿ ಸಭೆ, ತಂತ್ರ 

ಬೆಂಗಳೂರು(ಜ.27):  ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಲಿದ್ದು, ಶನಿವಾರ ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮುಂಬರುವ ಚುನಾವಣೆಗೆ ಪೂರಕವಾಗಿ ಕಿತ್ತೂರು ಕರ್ನಾಟಕ ಭಾಗದ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ. ಜತೆಗೆ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ದುರ್ಬಲಗೊಂಡಿರುವ ಪಕ್ಷದ ಸಂಘಟನೆ ಬಲಪಡಿಸಲು ಪ್ರಮುಖರ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದು, ರಣತಂತ್ರ ರೂಪಿಸಲಿದ್ದಾರೆ.

ಶುಕ್ರವಾರ ರಾತ್ರಿ ದೆಹಲಿಯಿಂದ ಆಗಮಿಸುವ ಅಮಿತ್‌ ಶಾ ಅವರು ಖಾಸಗಿ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಶನಿವಾರ ಬೆಳಗ್ಗೆ ಹುಬ್ಬಳ್ಳಿಯ ಕೆಎಲ್‌ಇ ಸೊಸೈಟಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಒಳಾಂಗಣ ಸ್ಟೇಡಿಯಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಅದೇ ಕಾಲೇಜಿನ ಮೈದಾನದಲ್ಲಿ ಕೆಎಲ…ಇ ಸೊಸೈಟಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಧಾರವಾಡದ ರಾಷ್ಟ್ರೀಯ ವಿಧಿ ವಿಜ್ಞಾನ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ನೋಟಿಸ್‌ ಬಂದಿಲ್ಲ. ಆದರೆ ನಾನಿನ್ನು ಮಾತಾಡಲ್ಲ: ಯತ್ನಾಳ್‌

ಬಳಿಕ ಮಧ್ಯಾಹ್ನ ಕುಂದಗೋಳಕ್ಕೆ ತೆರಳುವ ಅಮಿತ್‌ ಶಾ ಅವರು ಪಕ್ಷದ ವಿಜಯ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಂದಗೋಳದಲ್ಲಿ 300 ವರ್ಷಗಳ ಹಿಂದೆ ನಿರ್ಮಿಸಿದ ಪುರಾತನ ಶಂಭುಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಕುಂದಗೋಳದ ವಾರ್ಡ್‌ ಸಂಖ್ಯೆ 7ರ ಬೂತ್‌ ಸಂಖ್ಯೆ 50ರಲ್ಲಿ ಗೋಡೆ ಚಿತ್ರ ರಚಿಸುವ ಮೂಲಕ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸುವರು. ನಂತರ ಸುಮಾರು ಒಂದೂವರೆ ಕಿ.ಮೀ. ಉದ್ದದ ರೋಡ್‌ ಶೋ ನಡೆಸಲಿದ್ದಾರೆ. ಒಂದೆರಡು ಮನೆಗಳಿಗೆ ಕರಪತ್ರ ವಿತರಣೆ, ಮಿಸ್ಡ್‌ ಕಾಲ್‌ ಮೂಲಕ ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ.

ಸಂಜೆ ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಎಂ.ಕೆ.ಹುಬ್ಬಳ್ಳಿಯಲ್ಲಿ ವೀರ ಸೋಮೇಶ್ವರ ರಂಭಾಪುರಿ ಕಲ್ಯಾಣ ಮಂಟಪದ ಬಳಿಯ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ಬಳಿಕ ಬೆಳಗಾವಿ ನಗರದಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ಮೊದಲು ಸಂಘ ಪರಿವಾರದ ಹಿರಿಯರ ಜೊತೆ ಸಂವಾದ ನಡೆಸುವರು. ಅದಾದ ಮೇಲೆ ಬೆಳಗಾವಿ ಜಿಲ್ಲೆಯ ಹಿರಿಯ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ನಂತರ ಪಕ್ಷದ ಸಂಘಟನಾತ್ಮಕ ಸಭೆಯಲ್ಲೂ ಭಾಗವಹಿಸುವರು. ಈ ಸಭೆಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತಿತರ ಹಿರಿಯ ನಾಯಕರು ಉಪಸ್ಥಿತರಿರಲಿದ್ದಾರೆ.

click me!