
ಬೆಂಗಳೂರು (ಏ.02): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ಮಾಡುತ್ತಾ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಸ್ಪರ್ಧೆಗೆ ಮುಂದಾಗಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಸ್ವತಃ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಕರೆ ಮಾಡಿ ನೀವು ಬಂಡಾಯ ಸ್ಪರ್ಧೆ ಮಾಡದಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ನಾಳೆ ಮಧ್ಯಾಹ್ನದ ವೇಳೆಗೆ ದೆಹಲಿಗೆ ಬರುವಂತೆ ಸೂಚನೆಯನ್ನೂ ನೀಡಿದ್ದಾರೆ.
ಇದರ ಬೆನ್ನಲ್ಲಿಯೇ ಶಿವಮೊಗ್ಗದಲ್ಲಿ ಸುದ್ದೊಗೋಷ್ಠಿ ಏರ್ಪಡಿಸಿ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಇಂದು ಸಂಜೆ ಶಿವಮೊಗ್ಗ ನಗರದ ವಾರ್ಡ್‌ಗಳ ಮಹಿಳಾ ಕಾರ್ಯಕರ್ತರು ಸಮಾವೇಶ ನಡೆಯಲಿದೆ. ಆದರೆ, ಗೃಹ ಮಂತ್ರಿ, ದೇಶದ ಉಕ್ಕಿನ ಮನುಷ್ಯ ಅಮಿತ್ ಶಾ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ಪಕ್ಷದ ಹಿರಿಯರಾಗಿದ್ದೀರಾ ನಿಮ್ಮ ಸ್ಪರ್ಧೆ ನಮಗೆ ಆಶ್ಚರ್ಯ ತಂದಿದೆ ಎಂದರು. ಆಗ ನಾನು ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಕೈನಲ್ಲಿ ಇದೆ ಎಂದು ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಒಂದು ಕುಟುಂಬದ ಹಿಡಿತದಲ್ಲಿದೆ ಅದನ್ನ ತಡೆಯಬೇಕು ಎಂಬ ಭಾವನೆಯಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ಡಿಕೆ ಬ್ರದರ್ಸ್ ಏನು ಸೇವೆ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತು: ಕುಮಾರಸ್ವಾಮಿ
ಇನ್ನು ನೊಂದ ಕಾರ್ಯಕರ್ತರ ಭಾವನೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಹಿಂದುತ್ವದ ಬಗ್ಗೆ ಹೋರಾಟ ಮಾಡುವ ನಾಯಕರ ಪರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಬಿಜೆಪಿಯಿಂದ ಒಂದೇ ಒಂದು ಸ್ಥಾನ ಸಿಕ್ಕುತಿಲ್ಲ. ರಾಜ್ಯದಲ್ಲಿ ಒಬ್ಬ ಕುರುಬರಿಗೂ ಕೂಡ ಟಿಕೆಟ್ ಸಿಕ್ಕಿಲ್ಲ. ಅಮಿತ್ ಶಾ ಅವರು ಬಂಡಾಯ ವಾಪಸ್ ಪಡೆದುಕೊಳ್ಳಿ ನಿಮ್ಮ ಬೇಡಿಕೆ ಈಡೇರಿಸೋಣ ಎಂದರು. 3 ತಿಂಗಳ ಹಿಂದೆ ತಮ್ಮ ಬಳಿ ನಾನು ಒಂದು ಮಾತನಾಡಿದರು ಏನು ಬದಲಾವಣೆ ಆಗಿಲ್ಲ. ನಾಳೆ ದಿನ ದೆಹಲಿಗೆ ಬರಬೇಕು ಎಂದು ಅಮಿತ್ ಶಾ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ನೀವು ದೊಡ್ಡವರಿದ್ದೀರಿ, ನಿಮ್ಮ ಕರೆಗೆ ನಾನು ದೆಹಲಿಗೆ ಬರುತ್ತೇನೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.