
ಬೆಂಗಳೂರು(ಸೆ.04): ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಆಡಳಿತಾರೂಢ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ಹಿರಿಯ ನಾಯಕರು ಹಿಂದೆ ಸರಿಸಲ್ಪಟ್ಟರೇ ಎಂಬ ಪ್ರಶ್ನೆ ಬಿಜೆಪಿ ಪಾಳೆಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಅಮಿತ್ ಶಾ ಹೇಳಿಕೆಗೆ ಬಿಜೆಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಮಾತೂ ಪ್ರಸ್ತಾಪವಾಗಿದೆ.
ಬಹಿರಂಗವಾಗಿ ಶಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವವರ ಸಂಖ್ಯೆ ಬಿಜೆಪಿಯಲ್ಲಿ ಕಡಮೆಯಿದ್ದರೂ ಆಂತರಿಕವಾಗಿ ಮಾತನಾಡುವ ವೇಳೆ ಶಾ ಹೇಳಿಕೆ ನೀಡಿದ್ದು ಸರಿಯಲ್ಲ ಎಂಬ ಆಕ್ಷೇಪವನ್ನು ಹಲವರು ಹೊರಹಾಕಿದ್ದಾರೆ. ಯಡಿಯೂರಪ್ಪ ಬೆಂಬಲಿಗರು ಈ ಹೇಳಿಕೆಯಿಂದ ಬೇಸರಗೊಂಡಿದ್ದಾರೆ. ಇನ್ನು ಹಲವರು ಬಹಿರಂಗವಾಗಿಯೇ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಚಿವ ಈಶ್ವರಪ್ಪ ಆಪಸ್ವರ?:
‘ಅಮಿತ್ ಶಾ ಅವರು ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆ, ಏನು ಹೇಳಿದ್ದಾರೋ ನೋಡೋಣ. ಆದರೆ ಮುಂಬರುವ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದ ಬಗ್ಗೆ ನಮಗೆ ಒಲವಿದೆ’ ಎಂದು ಪಕ್ಷದ ಹಿರಿಯ ನಾಯಕರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿಯೇ ಹೇಳಿದ್ದಾರೆ.
ಶುಕ್ರವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಒಟ್ಟಿಗೆ ಕುಳಿತು ನಾವೆಲ್ಲ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸಾಮೂಹಿಕ ನಾಯಕತ್ವದ ಬಗ್ಗೆ ಖಂಡಿತ ನಮ್ಮೆಲ್ಲರ ಒಲವು ಇದೆ. ಇದರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಪಾತ್ರ ಕೂಡ ಮುಖ್ಯವಾಗಿ ಇರುತ್ತದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಕ್ಷ ಕಟ್ಟುತ್ತಿದ್ದಾರೆ. ಹೀಗಾಗಿ, ಏನೇ ಆದರೂ ನಾವು ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಲಿದ್ದೇವೆ ಎಂದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮುಂದಿನ ವಿಧಾನಸಭಾ ಚುನಾವಣೆಯನ್ನು ಬೊಮ್ಮಾಯಿ ಅವರ ನೇತೃತ್ವದಲ್ಲಿ ಹೋಗುವುದಾಗಿ ಅಮಿತ್ ಶಾ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಬೇರೆಯದಾಗಿ ಅರ್ಥೈಸಬೇಕಿಲ್ಲ. ಮುಖ್ಯಮಂತ್ರಿ ಆಗಿರುವವರ ನಾಯಕತ್ವದಲ್ಲೆ ಚುನಾವಣೆ ಎದುರಿಸುವುದು ಸಹಜ. ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಿರಿಯ ನಾಯಕರನ್ನು ಕಡೆಗಣಿಸುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಚುನಾವಣೆ ಇನ್ನೂ ದೂರವಿದೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ತಿಂಗಳಷ್ಟೇ ಕಳೆದಿದ್ದಾರೆ. ಇಷ್ಟುಕಡಿಮೆ ಅವಧಿಯಲ್ಲಿ ಸರ್ಕಾರ ಪಾಸೋ ಅಥವಾ ಫೇಲೋ ಎಂದು ನಿರ್ಧರಿಸಲು ಆಗುವುದಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿರುವುದು ಒಳ್ಳೆಯದು ಎಂದು ಮಾರ್ಮಿಕವಾಗಿ ಹೇಳಿದರು.
ಶಾ ಹೇಳಿಕೆ ಸಮರ್ಥಿಸಿದ ಸೋಮಣ್ಣ, ಅಶೋಕ್:
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ, ಅಮಿತ್ ಶಾ ಅವರು ಹೇಳಿದ್ದು ಸರಿಯಾಗಿಯೇ ಇದೆ. ಮುಖ್ಯಮಂತ್ರಿಯಾಗಿದ್ದರಿಂದ ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಬೇಕಾಗುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ. ಇದು ಸಹಜವಾದದ್ದು ಎಂದರು.
ಬೊಮ್ಮಾಯಿ ಅವರು ಒಂದು ತಿಂಗಳ ಅಲ್ಪಾವಧಿಯಲ್ಲಿ ಅನೇಕ ಉತ್ತಮ ಕೆಲಸ ಮಾಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಇನ್ನುಳಿದ ಅವಧಿಯಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ, ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿದರೆ ಪಕ್ಷಕ್ಕೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಯಾರಿರುತ್ತಾರೋ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಸಂಪ್ರದಾಯ. ಹೀಗಾಗಿ ಅಮಿತ್ ಶಾ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಹಿರಿಯ ನಾಯಕರು. ಅವರನ್ನು ಪಕ್ಷ ಯಾವತ್ತೂ ಮರೆಯುವುದಿಲ್ಲ. ಅವರನ್ನು ಪಕ್ಷದ ಸಂಘಟನೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಲು ಮುಂದಾಗಿದ್ದು, ಈ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ಯಡಿಯೂರಪ್ಪ ಎಲ್ಲೆಲ್ಲಿ ಪ್ರವಾಸ ಮಾಡಬೇಕು ಎನ್ನುವುದರ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳುತ್ತಾರೆ ಎಂದು ಮಾಹಿತಿ ನೀಡಿದರು,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.