
ಮುನಿರಾಬಾದ್ (ಡಿ.03): ತುಂಗಭದ್ರಾ ಜಲಾಶಯದ ನೂತನ ಗೇಟ್ ಅಳವಡಿಕೆ ಕಾರ್ಯ ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜು ಹೇಳಿದರು. ಅವರು ಸಂಜೆ ಮುಖ್ಯ ಅಭಿಯಂತರ ಕಚೇರಿಯಲ್ಲಿ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳು ಶಿಥಿಲಗೊಂಡಿದ್ದು, ನೂತನ ಗೇಟ್ ಅಳವಡಿಕೆ ಮಾಡಬೇಕಾದರೆ ಜಲಾಶಯದ ನೀರಿನ ಮಟ್ಟವು ಇನ್ನೂ 20 ಟಿಎಂಸಿ ಅಷ್ಟು ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ತಾವು ಇಂದಿನ ಸಭೆಯಲ್ಲಿ ಕರ್ನಾಟಕ ಹಾಗೂ ಆಂಧ್ರದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಮ್ಮ ಪಾಲಿನ ನೀರನ್ನು ಆದಷ್ಟು ಬೇಗ (ಇನ್ನು ಹತ್ತು ದಿನಗಳಲ್ಲಿ) ಬಳಕೆ ಮಾಡಿಕೊಳ್ಳಲು ಮನವಿ ಮಾಡಿರುವುದಾಗಿ ತಿಳಿಸಿದರು.
ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ತಮ್ಮ ಪಾಲಿನ ನೀರನ್ನು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಳಸುತ್ತಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಪಾಲಿನ ನೀರನ್ನು ಡಿಸೆಂಬರ್ ತಿಂಗಳಲ್ಲಿ ಬೆಳಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರ ಹಾಗೂ ಕರ್ನಾಟಕದ ಅಧಿಕಾರಿಗಳು ತಮ್ಮ ಪಾಲಿನ ನೀರನ್ನು ಆದಷ್ಟು ಬೇಗ ಬಳಸಲು ಒಪ್ಪಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ನೂತನ ಗೇಟುಗಳ ಅಳವಡಿಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಇದುವರಿಗೆ 15 ಗೇಟ್‌ನ್ನು ತಯಾರಿ ಮಾಡಲಾಗಿದೆ. ಅದನ್ನು ಹಂತ ಹಂತವಾಗಿ ಅಳವಡಿಸಲಾಗುವುದು. ಆಂಧ್ರ ಸರ್ಕಾರವು ₹20 ಕೋಟಿ ಹಣ ಬಿಡುಗಡೆ ಮಾಡಿದ್ದು ಕರ್ನಾಟಕ ಸರ್ಕಾರವು ₹10 ಕೋಟಿ ಹಣ ಆದಷ್ಟು ಬೇಗನೆ ಬಿಡುಗಡೆ ಮಾಡಲಿದೆ ಎಂದರು. ಜಲಾಶಯದ ಎಲ್ಲ 33 ಗೇಟ್ ಗಳನ್ನು ಜೂನ್ 2026 ಅಂತ್ಯದೊಳಗೆ ಅಳವಡಿಸಬೇಕೆಂದು ತಾವು ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಅಪ್ಪಣೆ ನೀಡಿರುವುದಾಗಿ ಸಚಿವರು ವಿವರಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಲಕ್ಷ್ಮಣ್ ನಾಯಕ್, ಅಧೀಕ್ಷಕ ಅಭಿಯಂತರ ಮಲಗಿವಾಡ್, ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ, ಕಾರ್ಯಪಾಲಕ ಅಭಿಯಂತರ ಗೋಡೆಕರ್, ನಾಗನಾಥ್ ಹಾಗೂ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.