ಎಲ್ಲ ಅತೃಪ್ತರ ಮನವೊಲಿಕೆಗೆ ಯತ್ನ: ಸಿಎಂ ಬೊಮ್ಮಾಯಿ

By Kannadaprabha News  |  First Published Apr 13, 2023, 10:48 AM IST

ಅಂಗಾರ ಜೆಂಟಲ್‌ಮೆನ್‌ ರಾಜಕಾರಣಿ, ಸವದಿ ಜೊತೆ ನನಗೂ, ಪಕ್ಷಕ್ಕೂ ಭಾವನಾತ್ಮಕ ಸಂಬಂಧವಿದೆ, ವಿನಯ್‌ ಕುಲಕರ್ಣಿಯನ್ನು ಬಿಜೆಪಿ ಟಾರ್ಗೆಟ್‌ ಮಾಡಿಲ್ಲ: ಬೊಮ್ಮಾಯಿ


ಬೆಳ್ತಂಗಡಿ(ಏ.13):  ಅಸಮಾಧಾನಗೊಂಡ ಎಲ್ಲರ ಹತ್ತಿರವೂ ಮಾತನಾಡುತ್ತಿದ್ದೇನೆ. ಪಕ್ಷ ಅವರನ್ನು ಗೌರವದಿಂದ ಕಂಡು ಶಾಸಕರನ್ನಾಗಿಸಿದೆ. ಅವರ ರಾಜಕೀಯ ಭವಿಷ್ಯವನ್ನು ಗೌರವ ಪೂರ್ವಕವಾಗಿ ಇರುವ ಹಾಗೆ ನಾನು ನೋಡಿಕೊಳ್ಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬುಧವಾರ ಆಗಮಿಸಿದ ಅವರು ದೇವರ ದರ್ಶನದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು. ಮಾಜಿ ಸಚಿವ ಅಂಗಾರ ಬಹಳ ಜೆಂಟಲ್‌ಮೆನ್‌ ರಾಜಕಾರಣಿ, ನಾನು ಅವರ ಜೊತೆ ಮಾತನಾಡ್ತೇನೆ. ಅವರಿಗೆ ಆಗಿರುವ ಅಸಮಾಧಾನ ಹೋಗಲಾಡಿಸುವೆ. ಸವದಿ ಅವರಿಗೆ ನನ್ನ ಜೊತೆ ಮತ್ತು ಪಕ್ಷದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಸ್ವಲ್ಪ ಕೋಪದಲ್ಲಿ ಕೆಲ ವಿಷಯ ಹೇಳಿದ್ದಾರೆ, ಮಾತನಾಡಿ ಬಗೆಹರಿಸುತ್ತೇನೆ. ಬಿಜೆಪಿಯವರು ವಿನಯ್‌ ಕುಲಕರ್ಣಿಯನ್ನು ಯಾವತ್ತೂ ಟಾರ್ಗೆಟ್‌ ಮಾಡಿಲ್ಲ. ಎದುರಾಳಿ ಯಾರು ಅನ್ನೋದು ನನಗೂ ಮುಖ್ಯ, ನನ್ನ ಜನ ನನ್ನ ಮೇಲೆ ವಿಶ್ವಾಸದಿಂದ ಇದ್ದಾರೆ. ಎದುರಾಳಿ ಯಾರೇ ಇದ್ದರೂ ನನಗೆ ಚುನಾವಣೆ ಎದುರಿಸೋದು ಗೊತ್ತಿದೆ. ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ ಅವರು ರಾಜಕೀಯದಲ್ಲಿ ಇರುತ್ತಾರೆ. ಅವರ ಜೊತೆಗೆ ವರಿಷ್ಠರು ಈಗಾಗಲೇ ಮಾತನಾಡಿದ್ದಾರೆ. ಅವರ ಭಾವನೆಯನ್ನು ಗೌರವಿಸುತ್ತೇವೆ. ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಗುರುವಾರ ಅಥವಾ ಶುಕ್ರವಾರ ಬಿಡುಗಡೆಗೊಳಿಸಲಿದ್ದೇವೆ ಎಂದರು.

Tap to resize

Latest Videos

ಅಂಗಾರ, ಮಠಂದೂರಿಗೆ ಟಿಕೆಟ್‌ ತಪ್ಪಿದ್ದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ!

ಸಿಎಂ ಬೊಮ್ಮಾಯಿ ಟೆಂಪಲ್‌ ರನ್‌

ಮಂಗಳೂರು: ವಿಧಾನಸಭೆ ಚುನಾವಣೆ ಘೋಷಣೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಪತ್ನಿ ಸಮೇತ ಬುಧವಾರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸಹಿತ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಧರ್ಮಸ್ಥಳಕ್ಕೆ ಮಧ್ಯಾಹ್ನ ಆಗಮಿಸಿದ ಸಿಎಂ ಬೊಮ್ಮಾಯಿ ಅವರು ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ ಮಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರು. ಈ ವೇಳೆ ಮಂಗಳೂರಿನ ಗೋಳಿಬಜೆ, ಚಹಾ ಸೇವಿಸಿ ಬಳಿಕ ದೇವಸ್ಥಾನ ಭೇಟಿಗೆ ತೆರಳಿದರು. ಮಂಗಳೂರಿನಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಕಂಕನಾಡಿ ಬ್ರಹ್ಮ ಬೈದೆರ್ಕಳ ಗರಡಿಗೆ ಭೇಟಿ ನೀಡಿದರು. ಸಿಎಂ ಜೊತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಡಾ. ಭರತ್‌ ಶೆಟ್ಟಿಇದ್ದರು. ಮಂಗಳೂರಲ್ಲಿ ಬುಧವಾರ ರಾತ್ರಿ ತಂಗಿದ್ದ ಬೊಮ್ಮಾಯಿ, ಗುರುವಾರ ಬೆಳಗ್ಗೆ ಕಟೀಲು ಹಾಗೂ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡುವರು.

click me!