ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಕಾಂಗ್ರೆಸ್‌ಗೆ 3, ಬಿಜೆಪಿ-ಜೆಡಿಎಸ್‌ ದೋಸ್ತಿಗೆ 4ರಲ್ಲಿ ಕಠಿಣ ಸವಾಲು..!

By Kannadaprabha News  |  First Published Mar 27, 2024, 2:28 PM IST

ಕಾಂಗ್ರೆಸ್ ನ ಡಿ.ಕೆ.ಸುರೇಶ್ ಮತ್ತು ಬಿಜೆಪಿಯ ಡಾ.ಸಿ.ಎನ್ .ಮಂಜುನಾಥ್ ಮುಖಾಮುಖಿ ಆಗಿದ್ದು, ಸೋಲು ಗೆಲುವು ಪಲ್ಲಟಗೊಳಿಸಬಹುದೆಂಬಷ್ಟು ತೀವ್ರ ಹಣಾಹಣಿ ನಡೆದಿದೆ. ಹಾಗಾಗಿ ಉಭಯ ಪಕ್ಷಗಳ ನಾಯಕರು ತಮ್ಮ ಹುರಿಯಾಳುಗಳ ಗೆಲುವಿಗಾಗಿ ಯಾವ ಕ್ಷೇತ್ರಗಳಲ್ಲಿ ಪಕ್ಷ ದುರ್ಬಲವಾಗಿದಿಯೋ ಅಲ್ಲಿ ಮತ ಶಿಕಾರಿ ಮಾಡಲು ಕಾರ್ಯತಂತ್ರ ರೂಪಿಸುತ್ತಿವೆ.


ಎಂ.ಅಫ್ರೋಜ್ ಖಾನ್

ರಾಮನಗರ(ಮಾ.27): ಜಿದ್ದಾಜಿದ್ದಿನ ಅಖಾಡವಾಗಿ ಗುರುತಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 3, ಬಿಜೆಪಿ - ಜೆಡಿಎಸ್ ಮೈತ್ರಿಕೂಟಕ್ಕೆ 4 ವಿಧಾನಸಭಾ ಕ್ಷೇತ್ರಗಳು ಕಠಿಣ ಸವಾಲಿನಿಂದ ಕೂಡಿವೆ. ಕಾಂಗ್ರೆಸ್ ನ ಡಿ.ಕೆ.ಸುರೇಶ್ ಮತ್ತು ಬಿಜೆಪಿಯ ಡಾ.ಸಿ.ಎನ್ .ಮಂಜುನಾಥ್ ಮುಖಾಮುಖಿ ಆಗಿದ್ದು, ಸೋಲು ಗೆಲುವು ಪಲ್ಲಟಗೊಳಿಸಬಹುದೆಂಬಷ್ಟು ತೀವ್ರ ಹಣಾಹಣಿ ನಡೆದಿದೆ. ಹಾಗಾಗಿ ಉಭಯ ಪಕ್ಷಗಳ ನಾಯಕರು ತಮ್ಮ ಹುರಿಯಾಳುಗಳ ಗೆಲುವಿಗಾಗಿ ಯಾವ ಕ್ಷೇತ್ರಗಳಲ್ಲಿ ಪಕ್ಷ ದುರ್ಬಲವಾಗಿದಿಯೋ ಅಲ್ಲಿ ಮತ ಶಿಕಾರಿ ಮಾಡಲು ಕಾರ್ಯತಂತ್ರ ರೂಪಿಸುತ್ತಿವೆ.

Tap to resize

Latest Videos

undefined

ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ , ಚನ್ನಪಟ್ಟಣ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿಕೂಟಕ್ಕೆ ಕನಕಪುರ, ಆನೇಕಲ್ , ಮಾಗಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಬೇಟೆಯಾಡಲು ಸಾಕಷ್ಟು ಬೆವರು ಸುರಿಸಬೇಕಿದೆ. ಉಳಿದಂತೆ ಕುಣಿಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸಮಬಲದ ಹೋರಾಟ ನಡೆದಿದೆ.

ಕನಕಪುರದಲ್ಲಿ ಧಮ್ಕಿ, ಬೆದರಿಕೆ ಹೆಚ್ಚು ದಿನ ಇರೊಲ್ಲ: ಡಿಕೆ ಬ್ರದರ್ಸ್‌ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್

ಈ ಕ್ಷೇತ್ರದ ಫಲಿತಾಂಶವನ್ನು ಬೆಂಗಳೂರು ದಕ್ಷಿಣ ಮತ್ತು ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರಗಳು ನಿರ್ಣಯಿಸಿದರು ಅಚ್ಚರಿ ಇಲ್ಲ. ಇದಕ್ಕೆ ಕಾರಣ ಏನೆಂದರೆ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರಲ್ಲಿ ಶೇಕಡ 44ರಷ್ಟು ಜನರು ಈ ಎರಡೂ ಕ್ಷೇತ್ರಗಳಲ್ಲಿಯೇ ಇದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ಮತದಾರ ಸಂಖ್ಯೆ 27.63 ಲಕ್ಷ ಇದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವೊಂದರಲ್ಲೇ 7.33 ಲಕ್ಷ ಮತ್ತು ಆರ್‌ಆರ್‌ ನಗರ ಕ್ಷೇತ್ರದಲ್ಲಿ 4.98 ಲಕ್ಷ ಸೇರಿ ಒಟ್ಟು 12.31 ಲಕ್ಷ ಮತದಾರರು ಇದ್ದಾರೆ. ಈ ಎರಡೂ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿವೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಪಕ್ಷಗಳು ಎನಿಸಿರುವ ಜೆಡಿಎಸ್‌ - ಬಿಜೆಪಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿವೆ. ಏಕಾಂಗಿಯಾಗಿ ಸ್ಪರ್ಧೆಮಾಡಿರುವ ಕಾಂಗ್ರೆಸ್ ವಿಧಾನಸಭಾ ಚುನಾವಣೆಗಳಲ್ಲಿ ಕೇವಲ 15 ಸಾವಿರ ಮತಗಳನ್ನು ಪಡೆದು ಠೇವಣಿ ಕಳೆದು ಕೊಂಡಿದೆ. ಇಲ್ಲಿ ಜೆಡಿಎಸ್ -96,592, ಬಿಜೆಪಿ - 80,677 ಮತಗಳನ್ನು ಪಡೆದಿದೆ.

ಈ ಎಲ್ಲ ಕಾರಣದಿಂದಾಗಿಯೇ ಡಿಕೆ ಸಹೋದರರು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಕಸರತ್ತು ಮುಂದುವರೆಸಿದ್ದಾರೆ. ವಿಪಕ್ಷ ಮುಖಂಡರಿಗೆ ಗಾಳ ಹಾಕುವ ಜೊತೆಗೆ ಸ್ಥಳೀಯ ನಾಯಕರಿಗೆ ಹೆಚ್ಚಿನ ಮತ ಕೊಡಿಸಬೇಕೆಂಬ ಟಾಸ್ಕ್ ನೀಡಿದ್ದಾರೆ.

ಇನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಕನಕಪುರ, ಬಿ.ಶಿವಣ್ಣ ಪ್ರತಿನಿಧಿಸುವ ಆನೇಕಲ್ , ಎಚ್.ಸಿ.ಬಾಲಕೃಷ್ಣರವರ ಮಾಗಡಿ ಹಾಗೂ ಇಕ್ಬಾಲ್ ಹುಸೇನ್ ರವರ ರಾಮನಗರ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿ ರೂಪುಗೊಂಡಿವೆ. ಇದರಲ್ಲಿ ರಾಮನಗರ , ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ - ಜೆಡಿಎಸ್ ಮತ್ತು ಆನೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ಹಣಾಹಣಿ ನಡೆದಿದೆ. ಇಲ್ಲಿನ ಬಹುತೇಕ ಸ್ಥಳೀಯ ಸಂಸ್ಥೆಗಳು ಕೈ ವಶದಲ್ಲಿವೆ. ಹೀಗಾಗಿ ಮೈತ್ರಿ ಪಕ್ಷಕ್ಕೆ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸಾಕಷ್ಟು ಸವಾಲಾಗಿದೆ.

ಅದರಲ್ಲೂ ಡಿ.ಕೆ.ಶಿವಕುಮಾರ್ ರವರು ಕನಕಪುರ ಕ್ಷೇತ್ರದಲ್ಲಿ 1.20 ಲಕ್ಷ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದವರು. ಡಿ.ಕೆ.ಶಿವಕುಮಾರ್ ಭದ್ರಕೋಟೆಯಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಿ, ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ಗೆ ತವರು ನೆಲದಲ್ಲಿ ಹಿನ್ನಡೆ ಅನುಭವಿಸುವಂತೆ ಮಾಡಲು ಮೈತ್ರಿ ನಾಯಕರು ತಂತ್ರ ರೂಪಿಸುತ್ತಿದ್ದಾರೆ.

ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಂಗನಾಥ್ ರವರು (74,724ಮತ) ಶಾಸಕರಾಗಿದ್ದಾರೆ. ಆದರೆ, ಜೆಡಿಎಸ್ - 46,974, ಬಿಜೆಪಿ - 48,151 ಮತಗಳನ್ನು ಪಡೆದಿದ್ದು, ಅವುಗಳನ್ನು ಒಗ್ಗೂಡಿಸಿದರೆ 95,125 ಮತಗಳಿವೆ. ಹೀಗಾಗಿ ಕ್ಷೇತ್ರದಲ್ಲಿ ಸಮಬಲದ ಹೋರಾಟ ಕಂಡು ಬಂದಿದೆ.

ತಮ್ಮದೇ ಕ್ಷೇತ್ರಗಳಲ್ಲಿ ಮತಗಳು ಬಂದೇ ಬರಲಿದೆ ಎಂಬ ಲೆಕ್ಕಾಚಾರ ರಾಜಕೀಯ ಪಕ್ಷಗಳಲ್ಲಿ ನಡೆದಿವೆ. ಆದರೂ ಕಾಂಗ್ರೆಸ್ ಹಾಗೂ ಬಿಜೆಪಿ - ಜೆಡಿಎಸ್ ಮಿತ್ರ ಪಕ್ಷಗಳು ತಮ್ಮ ಶಾಸಕರಿಲ್ಲದ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಯಾರು ಯಾವ ಪಕ್ಷದ ಭದ್ರಕೋಟೆಯನ್ನು ಭೇದಿಸುವರೇ ಕಾದು ನೋಡಬೇಕಿದೆ.

'ನನಗೆ ಕ್ಷೇತ್ರ ಪರಿಚಯ ಇಲ್ಲದಿರಬಹುದು, ಆದರೆ ಜನ ಪರಿಚಯ ಇದ್ದಾರೆ': ಕಾಂಗ್ರೆಸ್ ಟೀಕೆಗೆ ಡಾ ಮಂಜುನಾಥ ತಿರುಗೇಟು

ಅಭಿವೃದ್ಧಿ ಕಾರ್ಯಗಳ ಮೂಲಕ ಕಾಂಗ್ರೆಸ್ ನ ಡಿ.ಕೆ.ಸುರೇಶ್ ಹಾಗೂ ಖ್ಯಾತ ವೈದ್ಯರಾಗಿ ಬಿಜೆಪಿಯ ಡಾ.ಸಿ.ಎನ್. ಮಂಜುನಾಥ್ ರವರು ಮತದಾರರ ಮನದಲ್ಲಿ ಗೌರವ ಪಡೆದುಕೊಂಡವರು. ಅಭ್ಯರ್ಥಿಗಳ ವರ್ಚಸ್ಸು, ಅಭಿವೃದ್ಧಿಯ ಮಾನದಂಡಗಳ ಹೊರತಾಗಿ ವಿವಿಧ ಜಾತಿ ಸಮುದಾಯಗಳ ಒಲವು ಯಾರ ಕಡೆಗೆ ಎಷ್ಟಿವೆ ಎಂಬುದು ನಿರ್ಣಾಯಕವಾಗಲಿದೆ. ಮತದಾರರ ಒಲವು ಯಾವ ಕಡೆಗಿದೆ ಎಂಬ ಸುಳಿವನ್ನು ಬಿಟ್ಟುಕೊಡದೆ ನಿಗೂಢತೆಯನ್ನು ಕಾಯ್ದುಕೊಂಡಿದೆ.

ವಿಧಾನಸಭಾ ಕ್ಷೇತ್ರವಾರು ಪಕ್ಷಗಳ ಬಲಾಬಲ: ವಿಧಾನಸಭಾಕ್ಷೇತ್ರ ಹೆಸರು ಪಕ್ಷ

ಕುಣಿಗಲ್‌ ಡಾ.ಎಚ್.ಡಿ.ರಂಗನಾಥ್‌ ಕಾಂಗ್ರೆಸ್
ಆನೇಕಲ್‌ ಬಿ.ಶಿವಣ್ಣ ಕಾಂಗ್ರೆಸ್
ಮಾಗಡಿ ಎಚ್.ಸಿ.ಬಾಲಕೃಷ್ಣ ಕಾಂಗ್ರೆಸ್
ರಾಮನಗರ ಇಕ್ಬಾಲ್‌ ಹುಸೇನ್‌ ಕಾಂಗ್ರೆಸ್
ಕನಕಪುರ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್
ಚನ್ನಪಟ್ಟಣ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್
ಆರ್ ಆರ್ ನಗರ ಮುನಿರತ್ನ ಬಿಜೆಪಿ
ಬೆಂಗಳೂರು ದಕ್ಷಿಣ ಎಂ.ಕೃಷ್ಣಪ್ಪ ಬಿಜೆಪಿ

click me!