
ಬೆಳಗಾವಿ (ಏ.08): ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈಗಲೂ ನಮ್ಮ ಟೀಮ್‌ನಲ್ಲಿದ್ದಾರೆ. ಬಿಜೆಪಿಯಿಂದ ಯತ್ನಾಳ್ ತಾಂತ್ರಿಕವಾಗಿ ಉಚ್ಚಾಟನೆಯಾಗಿದ್ದರೂ ನಮ್ಮ ಜೊತೆಗಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರನ್ನೂ ನಿಂದಿಸಬೇಡಿ. ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆ ನೀಡಬೇಡಿ ಎಂದು ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸ್ಪಂದಿಸುವ ವಿಶ್ವಾಸವಿದೆ ಎಂದರು. ಯತ್ನಾಳ್ ಬಾಯಿ ಮುಚ್ಚಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಸಂಘಟನೆ ಮಾಡುವುದನ್ನು ಬಿಟ್ಟು ಬೇರೆ ವಿಚಾರದ ಬಗ್ಗೆ ಮಾತನಾಡಬೇಡಿ ಎಂದು ಮನವಿ ಮಾಡಿದ್ದೇನೆ.
ಯತ್ನಾಳ್ ಜೊತೆಗೆ ನಾನು, ಕುಮಾರ ಬಂಗಾರಪ್ಪ ಸೇರಿ ಹಲವರು ಮಾತನಾಡಿದ್ದೇವೆ. ಬಿಜೆಪಿ ರಾಷ್ಟ್ರೀಯ ಪಕ್ಷ, ಬಡವರ ಪಕ್ಷ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಪಕ್ಷ. ಇಲ್ಲೆ ನಮಗೆ ನ್ಯಾಯ ಸಿಗುತ್ತದೆ. ರಾಷ್ಟ್ರೀಯ ನಾಯಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಯತ್ನಾಳ ಅವರನ್ನು ನಮ್ಮ ಪಕ್ಷದಿಂದ ಬಿಟ್ಟು ಕೊಡುವುದಿಲ್ಲ. ಅವರು ಬೇರೆ ಪಕ್ಷ ಕಟ್ಟುವುದಿಲ್ಲ. ನಾವು ಈಗಾಗಲೇ ಪಕ್ಷಕ್ಕೆ ಅವರನ್ನು ಕರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಪೂಜ್ಯ ತಂದೆ ಮತ್ತು ಅವರ ಮಗನಿಗೆ ಬೈಯೋದಕ್ಕೆ ಹೋಗಬೇಡಿ ಎಂದು ತಿಳಿ ಹೇಳಿದ್ದೇನೆ. ಅವರು ಬಿಜೆಪಿ ನಾಯಕರನ್ನು ಬೈಯ್ಯುತ್ತಿಲ್ಲ. ಒಂದೇ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಮಹಾ ಸಿಎಂ ಮೇಲೆ ರಮೇಶ್ ಒತ್ತಡ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಬೆನ್ನ ಹಿಂದೆಯೇ ಯತ್ನಾಳ ಅವರ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನಲ್ಲಿ ಬುಧವಾರ ಭೇಟಿಯಾಗಿ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಕುರಿತು ಚರ್ಚೆ ನಡೆಸಿದ್ದಾರೆ. ತಮ್ಮ ಬಣದ ನಾಯಕ, ಯತ್ನಾಳ್ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ದುರ್ದೈವದ ಸಂಗತಿ. ಅವರನ್ನು ಪಕ್ಷದಲ್ಲಿಯೇ ಮುಂದುವರಿಸುವ ಅನಿವಾರ್ಯತೆಯಿದೆ.
ಜಲಮಂಡಳಿಯಿಂದಲೇ ಬೆಂಗಳೂರು ನಗರ ಜಿಲ್ಲೆ ಹಳ್ಳಿಗಳಿಗೆ ನೀರು ಪೂರೈಕೆ?: ಡಿ.ಕೆ.ಶಿವಕುಮಾರ್ ಸೂಚನೆ
ತಟಸ್ಥ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ನಮ್ಮ ಜತೆಗಿದ್ದಾರೆ. ಯತ್ನಾಳ್ ಅವರ ಉಚ್ಚಾಟನೆ ಆದೇಶವನ್ನು ವಾಪಸ್ ಪಡೆಯುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವಂತೆ ಜಾರಕಿಹೊಳಿ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರಿಗೆ ಮನವಿ ಮಾಡಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ. ಮಾತ್ರವಲ್ಲ, ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಿ ಅನುಭವದ ಆಧಾರದ ಮೇಲೆ ಮತ್ತೊಬ್ಬರನ್ನು ನೇಮಿಸಲು ವರಿಷ್ಠರ ಮೇಲೆ ಒತ್ತಡ ಹಾಕುವಂತೆ ಕೇಳಿಕೊಂಡಿದ್ದಾರೆ. ಪಕ್ಷದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.