ಜೂನ್ 13ರಂದು ನಡೆಯಲಿರೋ 11 ಸ್ಥಾನಗಳ ಪರಿಷತ್ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ 3 ಸ್ಥಾನ ಲಭಿಸಲಿದ್ದು, ಇದಕ್ಕೆ ಕಮಲ ಪಾಳಯದಲ್ಲಿ ಬರೋಬ್ಬರಿ 44 ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ.
ಬೆಂಗಳೂರು (ಮೇ.23): ಜೂನ್ 13ರಂದು ನಡೆಯಲಿರೋ 11 ಸ್ಥಾನಗಳ ಪರಿಷತ್ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ 3 ಸ್ಥಾನ ಲಭಿಸಲಿದ್ದು, ಇದಕ್ಕೆ ಕಮಲ ಪಾಳಯದಲ್ಲಿ ಬರೋಬ್ಬರಿ 44 ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ. ಇದಕ್ಕಾಗೆ ನಿನ್ನೆ ಟಿಕೆಟ್ ಆಯ್ಕೆ ಮಾಡಲೆಂದೇ ಸಭೆ ಸೇರಿದ್ದ ಬಿಜೆಪಿ ಕೋರ್ ಕಮಿಟಿ ಸದಸ್ಯರು 44 ಆಕಾಂಕ್ಷಿಗಳ ಪೈಕಿ 12 ಮಂದಿ ಪಟ್ಟಿಯನ್ನ ಶಾರ್ಟ್ ಲಿಸ್ಟ್ ಮಾಡಿದ್ದು, ಅಂತಿಮ ಪಟ್ಟಿಯನ್ನ ಹೈಕಮಾಂಡ್ ನಾಯಕರಿಗೆ ರವಾನೆ ಮಾಡಿದೆ. ಜಾತಿವಾರು ಹಾಗೂ ಪ್ರದೇಶವಾರು ಆಧರಿಸಿ ಅಂತಿಮ ಪಟ್ಟಿ ತಯಾರು ಮಾಡಲಾಗಿದ್ದು.. ಈ ಪೈಕಿ ಮೂವರನ್ನ ಹೈಕಮಾಂಡ್ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ ನಿನ್ನೆಯ ಸಭೆಯಲ್ಲಿ ಮಾಜಿ ಸಿಎಂ ಸದಾನಂದಗೌಡ ಪರಿಷತ್ ಸದಸ್ಯ ಸ್ಥಾನಕ್ಕೆ ನಾನು ಆಕಾಂಕ್ಷಿ. ಲೋಕಸಭಾ ಚುನಾವಣೆಯಲ್ಲಿ ಅನ್ಯಾಯ, ಅವಮಾನ ಆಗಿದೆ. ನನ್ನನ್ನ ಪರಿಷತ್ ವಿಪಕ್ಷ ನಾಯಕ ಮಾಡಿ ಎಂದಿದ್ದಾರೆ. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಸೋತವರಿಗೆ ಅವಕಾಶ ಬೇಡ ಎಂದಿದ್ದಾರೆ. ಇದರಿಂದ ಕೋಪಗೊಂಡ ಸಿಟಿ ರವಿ ಹಾಗೂ ಡಿವಿಎಸ್ ಸಭೆಯಲ್ಲಿದ್ದ ಬಿಜೆಪಿ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋತವರಿಗೆ ಯಾಕೆ ಟಿಕೆಟ್ ನೀಡಬಾರದು? ಹಿಂದೆ ಸೋತವರಿಗೆ ಕೊಟ್ಟ ಅವಕಾಶವನ್ನ ಉದಾಹರಣೆ ಸಹಿತ ವಿವರಿಸಿದ್ದಾರೆ.
ಹಿಂದೆ ವಿಧಾನಸಭೆಯಲ್ಲಿ ಸೋತ, ಬಿಎಸ್ವೈ, ಈಶ್ವರಪ್ಪ, ಯೋಗೇಶ್ವರ್, ಸೋಮಣ್ಣ, ಲಕ್ಷ್ಮಣ್ ಸವದಿ, ಎಂಟಿಬಿ ನಾಗರಾಜ್, ಎಚ್ ವಿಶ್ವನಾಥ್, ರುದ್ರೇಗೌಡ, ಸುನಿಲ್ ವಲ್ಯಾಪುರೆ, ರಘುನಾಥ್ ಮಲ್ಕಾಪುರೆ, ಡಿ ಎಸ್ ವೀರಯ್ಯ, ಸಿ ಹೆಚ್ ವಿಜಯಶಂಕರ್ ಅವರನ್ನ ಪರಿಷತ್ಗೆ ಆಯ್ಕೆ ಮಾಡಿಲ್ವಾ? ಮೊನ್ನೆ ಲೋಕಸಭೆಯಲ್ಲಿ ಸೋತವರಿಗೆ ಟಿಕೆಟ್ ನೀಡಿದ್ರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾನದಂಡವೇ ಎಂದು ಪ್ರಶ್ನೆ ಮಾಡಿದ್ದಾರೆ. ಇವರಿಬ್ಬರ ಮಾತು ಕೇಳಿ ಸಭೆಯಲ್ಲಿದ್ದ ಬಿಎಸ್ವೈ ಹಾಗೂ ವಿಜಯೇಂದ್ರ ಒಂದು ಮಾತನಾಡದೇ ಮೌನವಾಗಿದ್ರಂತೆ. ಬಳಿಕ ಪರಿಷತ್ ಪಟ್ಟಿಗೆ ಸಿ.ಟಿ ರವಿ ಹೆಸರನ್ನ ಸೇರಿಸಲಾಗಿದೆ. ಈ ವೇಳೆ ಅಶೋಕ್ ಕಟೀಲ್ ಅವರನ್ನು ಸಹ ಸೇರಿಸೋಣ ಅವರು ಈಗ ಕರೆ ಮಾಡಿದ್ರು ಎಂದಿದ್ದಾರೆ. ಕೊನೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕಟೀಲ್ ಅವರನ್ನು ಸಹ ಪಟ್ಟಿಗೆ ಸೇರಿಸಲಾಗಿದೆ.
ಕಾಂಗ್ರೆಸ್ ಪಿಕ್ ಪಾಕೆಟ್ ಸರ್ಕಾರ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ
ಸದ್ಯ ರಾಜ್ಯ ಬಿಜೆಪಿ ಸಿದ್ಧಪಡಿಸಿರುವ 12 ಜನರ ಪಟ್ಟಿಯಲ್ಲಿ, ಸಿ.ಟಿ ರವಿ, ಎನ್ ರವಿಕುಮಾರ್, ನಳಿನ್ ಕುಮಾರ್ ಕಟೀಲ್, ಬಿಜೆಪಿ ಮರಾಠ ಮುಖಂಡ ಮಾರುತಿ ರಾವ್ ಮೂಳೆ, ಬಿಜೆಪಿ ಮರಾಠ ನಾಯಕಿ ಧನಶ್ರೀ ಸರ್ದೇಸಾಯಿ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ, ಹಾವೇರಿ ಬಿಜೆಪಿ ನಾಯಕ ಬೋಜರಾಜು ಪ್ರಮುಖರಾಗಿದ್ದಾರೆ. ಸದ್ಯ ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದು ಮೇ 30ರ ನಂತರವಷ್ಟೇ ರಾಜ್ಯ ಬಿಜೆಪಿ ಕಳಿಸಿರುವ ಪಟ್ಟಿ ಬಗ್ಗೆ ಗಮನ ಹರಿಸಲಿದ್ದಾರೆ. 11 ಸ್ಥಾನಗಳ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 3 ಅಂತಿಮ ದಿನವಾಗಿದ್ದು, ಜೂನ್ 13ರಂದು ಚುನಾವಣೆ ನಡೆಯಲಿದೆ. ವಿಧಾನಸಭೆ ಶಾಸಕರು ಪರಿಷತ್ ಸದಸ್ಯರ ಆಯ್ಕೆಗೆ ಮತ ಚಲಾಯಿಸಲಿದ್ದಾರೆ. ಅದೇ ದಿನ ಸಂಜೆ ಮತ ಎಣಿಕೆ ನಡೆಯಲಿದೆ.