
ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಗೆ ಅಭ್ಯರ್ಥಿಗಳ ಅಖೈರುಗೊಳಿಸುವ ವಿಚಾರ ಕಾಂಗ್ರೆಸ್ ನಾಯಕತ್ವದ ಪಾಲಿಕೆ ತಲೆನೋವು ಉಂಟುಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚಿಸಿ ಸಂಭಾವ್ಯರ ಪಟ್ಟಿ ಅಂತಿಮಗೊಳಿಸಲು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾ.20 (ಶುಕ್ರವಾರ) ಬೆಂಗಳೂರಿಗೆ ಆಗಮಿಸಲಿದ್ದಾರೆ.
ಬಾಗಲಕೋಟೆ ಕ್ಷೇತ್ರಕ್ಕೆ ದಿ. ಎಚ್.ವೈ. ಮೇಟಿ ಅವರ ಕುಟುಂಬದಲ್ಲೇ ಪೈಪೋಟಿ ಕಂಡು ಬಂದಿದ್ದರೆ, ದಾವಣಗೆರೆಯಲ್ಲಿ ಲಿಂಗಾಯತ ಹಾಗೂ ಅಲ್ಪಸಂಖ್ಯಾತ ಆಕಾಂಕ್ಷಿಗಳ ನಡುವೆ ತೀವ್ರ ಲಾಬಿ ಕಂಡುಬಂದಿದೆ. ಟಿಕೆಟ್ ತಪ್ಪಿದರೆ ಬಂಡಾಯ ನಿಲ್ಲುವ ಎಚ್ಚರಿಕೆಯನ್ನು ಎರಡೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ನೀಡುತ್ತಿರುವುದರಿಂದ ಸರ್ವ ಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸವಾಲನ್ನು ನಾಯಕತ್ವ ಎದುರಿಸುತ್ತಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್‌ಗೆ ದಿ. ಎಚ್. ವೈ. ಮೇಟಿ ಅವರ ಕುಟುಂಬದಲ್ಲೇ ತೀವ್ರ ಪೈಪೋಟಿ ಕಂಡು ಬಂದಿದೆ. ಹಿರಿಯ ಪುತ್ರ ಮಲ್ಲಿಕಾರ್ಜುನ ಪ್ರಬಲ ಆಕಾಂಕ್ಷಿಯಾಗಿದ್ದರೆ, ಅವರ ಸಹೋದರ ಉಮೇಶ್‌ಗೆ ಟಿಕೆಟ್ ನೀಡಬೇಕು ಇಲ್ಲದಿದ್ದರೆ ತಾವು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಸಹೋದರಿ ಮಹಾದೇವಿ ಎಚ್ಚರಿಕೆ ನೀಡುವ ಮಟ್ಟಿಗೆ ಈ ಕ್ಷೇತ್ರದಲ್ಲಿ ಪೈಪೋಟಿಯಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಟಿ ಕುಟುಂಬದ ನಾಲ್ಕು ಜನ ಸಹೋದರ, ಸಹೋದರಿಯನ್ನು ಕರೆಸಿ ಬುಧವಾರ ಸಂಧಾನ ಸಭೆ ನಡೆಸಿದ್ದು, ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಒಪ್ಪುವುದಾಗಿ ಹೇಳಿಕೆ ನೀಡುವಂತೆ ತಾಕೀತು ಮಾಡಿದ್ದಾರೆ.
ಮುಖ್ಯಮಂತ್ರಿಯವರ ಈ ನಿರ್ದೇಶನಕ್ಕೆ ಸಹೋದರರಾದ ಮಲ್ಲಿಕಾರ್ಜುನ, ಉಮೇಶ್ ಹಾಗೂ ಬಾಯಕ್ಕ ಬಹುತೇಕ ಒಪ್ಪಿದ್ದರೂ, ಮಹಾದೇವಿ ಅವರು ಮಾತ್ರ ಸಹೋದರ ಉಮೇಶ್‌ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದು, ಬಂಡಾಯದ ಬೆದರಿಕೆಯೊಡ್ಡುವ ಪ್ರಯತ್ನ ಮಾಡಿದರು ಎನ್ನುತ್ತವೆ ಮೂಲಗಳು.
ಇದಕ್ಕೆ ಮುಖ್ಯಮಂತ್ರಿಯವರು, ನಿಮ್ಮ ಕುಟುಂಬದವರು ಒಗ್ಗಟ್ಟಿನಿಂದ ಚುನಾವಣೆ ಎದುರಿಸದಿದ್ದರೆ ಬೇರೆಯವರಿಗೆ ಟಿಕೆಟ್ ನೀಡಬೇಕಾದೀತು ಎಂದು ಎಚ್ಚರಿಸಿದರು ಎನ್ನಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ದಿವಂಗತ ಎಚ್.ವೈ. ಮೇಟಿ ಮಕ್ಕಳೊಂದಿಗೆ ಮಾತನಾಡಿದ್ದು, ಯಾರಿಗೇ ಟಿಕೆಟ್ ದೊರೆತರೂ ಎಲ್ಲರೂ ಒಟ್ಟಾಗಿ ಚುನಾವಣೆ ಮಾಡಲು ಸೂಚಿಸಿದ್ದೇನೆ. ಅವರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ. ಈಗಾಗಲೇ ದಾವಣಗೆರೆ ಹಾಗೂ ಬಾಗಲಕೋಟೆಗೆ ಸಂಬಂಧಿಸಿದಂತೆ ಸಭೆಗಳು ನಡೆದಿದ್ದು, ಸಮಿತಿಗಳು ವರದಿ ನೀಡಲಿವೆ. ಬಳಿಕ ನಾನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿ ವರದಿ ನೀಡುತ್ತೇವೆ ಎಂದು ಹೇಳಿದರು.
ಸದ್ಯದಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯಕ್ಕೆ ಬರಲಿದ್ದಾರೆ. ಬಳಿಕ ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಇನ್ನು ದಾವಣಗೆರೆ ಕಗ್ಗಂಟು ಬಗೆಹರಿಸಲು ಕೆಪಿಸಿಸಿ ಕಚೇರಿಯಲ್ಲಿ ಬುದವಾರ ಉಸ್ತುವಾರಿಗಳ ಸಭೆ ನಡೆದಿದ್ದು, ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ದಿ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಈ ಕ್ಷೇತ್ರದಲ್ಲಿ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನು ಅಲ್ಪಸಂಖ್ಯಾತರಿಂದ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಶಾಮನೂರು ಅವರು ತಮ್ಮ ನಂತರ ಈ ಕ್ಷೇತ್ರವನ್ನು ಅಲ್ಪಸಂಖ್ಯಾತರಿಗೆ ಬಿಟ್ಟುಕೊಡಲಾಗುವುದು ಎಂದು ಪ್ರಮಾಣ ಮಾಡಿದ್ದರು ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತರು ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದಾರೆ.
ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಖಲೀಲ್ ಅಹ್ಮದ್, ಮಾಜಿ ನಗರಸಭಾ ಸದಸ್ಯ ಸೈಫುಲ್ಲಾ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸಚಿವ ಜಮೀರ್ ಅಹ್ಮದ್ ಸೇರಿದಂತೆ ಬಹುತೇಕ ಮುಸ್ಲಿಂ ನಾಯಕರು ಒಗ್ಗೂಡಿ ಈ ಬಾರಿ ಟಿಕೆಟ್ ಮುಸ್ಲಿಂ ಅಭ್ಯರ್ಥಿಗೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದ ಇಬ್ಬರನ್ನು ಹೊಂದಿರುವ ಶಾಮನೂರು ಕುಟುಂಬದ ವಿರೋಧ ಕಟ್ಟಿಕೊಂಡು ಮುಸ್ಲಿಂ ಅಭ್ಯರ್ಥಿ ಕಣಕ್ಕೆ ಇಳಿಸುವ ಇರಾದೆ ಕಾಂಗ್ರೆಸ್ ನಾಯಕತ್ವಕ್ಕೆ ಇಲ್ಲ. ಹೀಗಾಗಿ ಶಾಮನೂರು ಕುಟುಂಬವನ್ನು ಮನವೊಲಿಸಿ ಅವರು ಸೂಚಿಸುವ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬಹುದೇ ಎಂಬ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ.
ಒಂದು ವೇಳೆ ಇದು ಸಾಧ್ಯವೇ ಇಲ್ಲ ಎಂದಾದ ಪಕ್ಷದಲ್ಲಿ ಸಹಜವಾಗಿಯೇ ಶಾಮನೂರು ಕುಟುಂಬದ ಕುಡಿಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ. ಆಗ ಅಲ್ಪಸಂಖ್ಯಾತರು ಬಂಡೇಳದಂತೆ ಮನವೊಲಿಸುವ ಹೊಣೆಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ನೀಡುವ ಮನಸ್ಥಿತಿಯನ್ನ ನಾಯಕತ್ವ ಹೊಂದಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.