Ticket Fight: ಬೆಂಗಳೂರಲ್ಲಿ ಉದ್ಭವಿಸ್ತಾರಾ ಅಚ್ಚರಿ ಅಭ್ಯರ್ಥಿಗಳು?

By Govindaraj SFirst Published Dec 21, 2022, 6:45 AM IST
Highlights

ರಾಜ್ಯ ರಾಜಕಾರಣದಲ್ಲಿ ಇತರ ಭಾಗದ ತೂಕ ಒಂದಾದರೆ ರಾಜಧಾನಿ ಬೆಂಗಳೂರಿನ ತೂಕವೇ ಮತ್ತೊಂದು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. 

ವಿಜಯ್ ಮಲಗಿಹಾಳ/ಎಸ್.ಗಿರೀಶ್‌ ಬಾಬು

ಬೆಂಗಳೂರು (ಡಿ.21): ರಾಜ್ಯ ರಾಜಕಾರಣದಲ್ಲಿ ಇತರ ಭಾಗದ ತೂಕ ಒಂದಾದರೆ ರಾಜಧಾನಿ ಬೆಂಗಳೂರಿನ ತೂಕವೇ ಮತ್ತೊಂದು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ರಾಜಧಾನಿಯಲ್ಲಿ ಹೆಚ್ಚು ಸ್ಥಾನ ಗಳಿಸಿರುವ ಪಕ್ಷ ಸಹಜವಾಗಿಯೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಅಥವಾ ಅತಿಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಲಿದೆ. ಸದ್ಯ ಬಿಜೆಪಿ 15, ಕಾಂಗ್ರೆಸ್‌ 12 ಮತ್ತು ಜೆಡಿಎಸ್‌ ಒಂದು ಸ್ಥಾನ ಹೊಂದಿವೆ. ಇತ್ತೀಚಿನ ಹಲವು ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿಕೊಂಡು ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವುದರಿಂದ ಈ ಕ್ಷೇತ್ರಗಳಲ್ಲಿ ಪಾಲಿಕೆಯ ಮಾಜಿ ಸದಸ್ಯರೇ ತಮ್ಮ ಮುಂದಿನ ರಾಜಕೀಯ ಹೆಜ್ಜೆಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುತ್ತಾರೆ. ಈಗ ಹಾಲಿ ಸದಸ್ಯರಾಗಿರುವವರ ಪೈಕಿಯೂ ಅನೇಕರು ಹಿಂದೆ ಪಾಲಿಕೆಯ ಸದಸ್ಯರಾಗಿ ಕೆಲಸ ಮಾಡಿದವರೇ ಆಗಿದ್ದಾರೆ. ಬಿಬಿಎಂಪಿ ವಾಪ್ತಿಯ ಕ್ಷೇತ್ರಗಳಲ್ಲಿ ಜಾತಿಯ ಅಬ್ಬರ ಅಷ್ಟಾಗಿ ನಡೆಯುವುದಿಲ್ಲ. ಅಭ್ಯರ್ಥಿಗಳ ವರ್ಚಸ್ಸು, ಹಣಬಲ ಮತ್ತು ಪಕ್ಷದ ಬಲದ ಆಧಾರದ ಮೇಲೆ ಗೆಲುವು ನಿರ್ಧಾರವಾಗಲಿದೆ.

1.ಆನೇಕಲ್‌ (ಎಸ್‌ಸಿ)- ಕೇಂದ್ರ ಸಚಿವರ ಪುತ್ರಿಯೂ ಟಿಕೆಟ್‌ ಆಕಾಂಕ್ಷಿ
ಕಾಂಗ್ರೆಸ್ಸಿನ ಬಿ.ಶಿವಣ್ಣ ಇಲ್ಲಿ ಹಾಲಿ ಶಾಸಕ. ಈ ಬಾರಿಯೂ ಅವರೇ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ಸಿನಿಂದ ಇತರ ಆಕಾಂಕ್ಷಿಗಳು ಹೊರಹೊಮ್ಮಿಲ್ಲ. ಇನ್ನು ಬಿಜೆಪಿಯಿಂದ ಹುಲ್ಲಳ್ಳಿ ಶ್ರೀನಿವಾಸ್‌, ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರೂ ಆಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ, ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷ ಡಾ.ಸಂದೀಪ್‌, ತಾಲೂಕು ಪಂಚಾಯ್ತಿ ಸದಸ್ಯ ಟಿ.ವಿ.ಬಾಬು ಮತ್ತಿತರರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಈ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿ ಈಗ ಕೇಂದ್ರ ಸಚಿವರಾಗಿರುವ ಎ.ನಾರಾಯಣಸ್ವಾಮಿ ಅವರ ಪುತ್ರಿ ಕೂಡ ಟಿಕೆಟ್‌ ಬಯಸಿದ್ದಾರೆ. ಜೆಡಿಎಸ್‌ನಿಂದ ಕೆ.ಪಿ.ರಾಜು ಸಂಭಾವ್ಯ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಆಮ್‌ ಆದ್ಮಿ ಪಕ್ಷದಿಂದ ಮುನೇಶ್‌ ಟಿಕೆಟ್‌ ಬಯಸಿದ್ದಾರೆ.

Ticket Fight: ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಇಲ್ಲಿ ಬಂಡವಾಳ!

2.ಬಿಟಿಎಂ ಲೇಔಟ್‌- ರಾಮಲಿಂಗಾರೆಡ್ಡಿಗೆ ಪ್ರತಿಸ್ಪರ್ಧಿ ಯಾರು?
ಕಾಂಗ್ರೆಸ್ಸಿನ ಮಾಜಿ ಸಚಿವ ರಾಮಲಿಂಗಾರೆಡ್ಡಿ ಈ ಕ್ಷೇತ್ರದ ಹಾಲಿ ಶಾಸಕರು. ಅವರೇ ಮತ್ತೊಮ್ಮೆ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಹಾಗೂ ಪಕ್ಷದ ರೈತ ಮೋರ್ಚಾ ಉಪಾಧ್ಯಕ್ಷ ಲಲ್ಲೇಶ್‌ ರೆಡ್ಡಿ ಮತ್ತೊಮ್ಮೆ ಕಣಕ್ಕಿಳಿಯಲು ಬಯಸಿದ್ದಾರೆ. ಪಕ್ಷ ಜಿಲ್ಲಾ ಘಟಕದ ಖಜಾಂಚಿ ಶ್ರೀಧರ್‌ ರೆಡ್ಡಿ, ರಾಜ್ಯ ಯುವಮೋರ್ಚಾ ಖಜಾಂಚಿ ಅನಿಲ್‌ ಶೆಟ್ಟಿಹಾಗೂ ಪಕ್ಷದ ರಾಜ್ಯ ವಕ್ತಾರ ವಿವೇಕ್‌ ರೆಡ್ಡಿ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಈ ಪೈಕಿ ಅನಿಲ್‌ ಶೆಟ್ಟಿಸತತವಾಗಿ ಕ್ಷೇತ್ರದಲ್ಲಿ ಜನಪರ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಶ್ರೀನಿವಾಸ್‌ ರೆಡ್ಡಿ ಆಕಾಂಕ್ಷಿಯಾಗಿದ್ದಾರೆ.

3.ಬೆಂಗಳೂರು ದಕ್ಷಿಣ- ಕೃಷ್ಣಪ್ಪ ಅವರನ್ನು ಬದಲಿಸುತ್ತಾರಾ?
ಬಿಜೆಪಿಯ ಎಂ.ಕೃಷ್ಣಪ್ಪ ಹಾಲಿ ಶಾಸಕ. ಮೂರು ಬಾರಿ ಶಾಸಕರಾಗಿರುವ ಕೃಷ್ಣಪ್ಪ ಅವರಿಗೆ ಸಂಘ ಪರಿವಾರದ ವಿರೋಧವಿದೆ ಎಂಬ ಮಾತು ಕೇಳಿಬರುತ್ತಿದ್ದು, ಅವರನ್ನು ಬದಲಿಸುವ ವದಂತಿ ಹಬ್ಬಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ತುಳಸಿ ಮುನಿರಾಜುಗೌಡ, ಬಿಬಿಎಂಪಿ ಮಾಜಿ ಸದಸ್ಯ ವಿಜಯ ರಮೇಶ್‌, ಆಂಜಿನಪ್ಪ, ಬನ್ನೇರುಘಟ್ಟಜಯರಾಂ ಅವರು ಇತರರ ಹೆಸರು ಪ್ರಸ್ತಾಪವಾಗಿದೆ. ಕಾಂಗ್ರೆಸ್‌ನಿಂದ 2018ರ ಅಭ್ಯರ್ಥಿ ಹಾಗೂ ಬಮೂಲ್‌ ಅಧ್ಯಕ್ಷರಾಗಿದ್ದ ಆರ್‌.ಕೆ. ರಮೇಶ್‌, ರಾಜಗೋಪಾಲರೆಡ್ಡಿ, ಸುಷ್ಮಾ ರಾಜಗೋಪಾಲರೆಡ್ಡಿ ಅವರು ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಪ್ರಭಾಕರ್‌ ರೆಡ್ಡಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಆಮ್‌ ಆದ್ಮಿ ಪಕ್ಷದಿಂದ ಭರತ್‌ ನಾರಾಯಣ ಸ್ಪರ್ಧಿಸಲು ಪ್ರಯತ್ನ ನಡೆಸುತ್ತಿದ್ದಾರೆ.

4.ಬಸವನಗುಡಿ- ಎಲ್ಲ ಪಕ್ಷಗಳಿಂದ ಬ್ರಾಹಣರೇ ಅಭ್ಯರ್ಥಿಗಳು
ಬಿಜೆಪಿಯ ರವಿಸುಬ್ರಮಣ್ಯ ಈ ಕ್ಷೇತ್ರದಿಂದ ಮೂರು ಬಾರಿ ಸತತವಾಗಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಬಾರಿ ಪಕ್ಷದಲ್ಲಿ ಅವರಿಗೆ ಟಿಕೆಟ್‌ ನೀಡಲು ಅಪಸ್ವರವೂ ಕೇಳಿಬರುತ್ತಿದೆ. ಒಂದು ವೇಳೆ ಬದಲಾವಣೆ ಮಾಡಬೇಕು ಎಂಬ ನಿರ್ಧಾರವಾದಲ್ಲಿ ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್‌ ಪತ್ನಿ ಹಾಗೂ ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಅವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತಿದೆ. ಬಿಜೆಪಿಯಿಂದ ಅಚ್ಚರಿಯ ಹೆಸರೂ ಇಲ್ಲಿ ಬರಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್‌ನಿಂದ ಹಾಲಿ ವಿಧಾನಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಖ್ಯಾತ ಜ್ಯೋತಿಷಿ ದ್ವಾರಕನಾಥ್‌ ಗುರೂಜಿ ಪುತ್ರ ಡಾ.ಶಂಕರ ಗುಹಾ ಕೂಡ ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್‌ನಿಂದ ಅರಮನೆ ಶಂಕರ್‌ ಘೋಷಿತ ಅಭ್ಯರ್ಥಿಯಾಗಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ರಾವ್‌ ಕಣಕ್ಕಿಳಿಯುವ ಸಾಧ್ಯತೆಯಿದೆ.

5.ಬೊಮ್ಮನಹಳ್ಳಿ- ಸತೀಶ್‌ ರೆಡ್ಡಿಗೆ ಟಕ್ಕರ್‌ ಕೊಡುವವರು ಯಾರು?
ವಿಧಾನಸಭೆಯ ಮುಖ್ಯ ಸಚೇತಕರಾಗಿರುವ ಬಿಜೆಪಿಯ ಸತೀಶ್‌ ರೆಡ್ಡಿ ಇಲ್ಲಿನ ಶಾಸಕರು. ಅವರಿಗೇ ಟಿಕೆಟ್‌ ನೀಡುವ ಸಾಧ್ಯತೆಯಿದೆ. ಮಾಜಿ ಉಪಮೇಯರ್‌ ಮೋಹನ್‌ ರಾಜು ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ್‌ ರೆಡ್ಡಿ ಕೂಡ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರೆ ಕವಿತಾ ರೆಡ್ಡಿ, ಒಕ್ಕಲಿಗರ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಉಮಾಪತಿ ಗೌಡ ಅವರು ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಸೀತಾರಾಂ ಕಣಕ್ಕಿಳಿಯಲು ಬಯಸಿದ್ದಾರೆ.

6.ಬ್ಯಾಟರಾಯನಪುರ- ಬಿಜೆಪಿಯಿಂದ ಮತ್ತೆ ರವಿಗೆ ಟಿಕೆಟ್‌ ಸಿಗುತ್ತಾ?
ಕಾಂಗ್ರೆಸ್ಸಿನ ಕೃಷ್ಣ ಬೈರೇಗೌಡ ಹಾಲಿ ಶಾಸಕ. ವೇಮಗಲ್‌ನಲ್ಲಿ ಒಂದು ಬಾರಿ ಹಾಗೂ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯಿಂದ ಶಾಸಕರಾಗಿರುವ ಕೃಷ್ಣಬೈರೇಗೌಡ ಈ ಬಾರಿಯೂ ಕೈ ಅಭ್ಯರ್ಥಿ. ಅವರನ್ನು ಸೋಲಿಸಲು ಬಿಜೆಪಿ ಸತತ ಪ್ರಯತ್ನ ನಡೆಸಿದರೂ ಇದುವರೆಗೆ ಯಶಸ್ವಿಯಾಗಿಲ್ಲ. ಕಂದಾಯ ಸಚಿವ ಆರ್‌.ಅಶೋಕ್‌ ಅವರ ಸಹೋದರ ಸಂಬಂಧಿ ಎ.ರವಿ ಅವರು ಕಳೆದ ಮೂರು ಬಾರಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್‌ ಬಯಸಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಪ್ತ ಹಾಗೂ ಯುವಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ, ಪಕ್ಷದ ಮುಖಂಡರಾದ ಮುನೀಂದ್ರಕುಮಾರ್‌, ಚಕ್ರಪಾಣಿ ಅವರು ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್‌ನಿಂದ ವೇಣುಗೋಪಾಲ್‌ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದೆ.

7.ಸಿ.ವಿ.ರಾಮನ್‌ನಗರ (ಎಸ್‌ಸಿ)- ರಘು ಮತ್ತೊಮ್ಮೆ ಸ್ಪರ್ಧೆ ಸಂಭವ
ಬಿಜೆಪಿಯ ಎಸ್‌.ರಘು ಇಲ್ಲಿನ ಹಾಲಿ ಶಾಸಕರು. ಅವರೇ ಮತ್ತೊಮ್ಮೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಎಸ್‌ಸಿ ಮೋರ್ಚಾ ಮುಖಂಡ ಚಿ.ನಾ.ರಾಮು, ರಾಜ್ಯ ಯುವಮೋರ್ಚಾ ಅಧ್ಯಕ್ಷ ಡಾ.ಸಂದೀಪ್‌, ಮಾಜಿ ಸದಸ್ಯೆ ಭುವನೇಶ್ವರಿ ತುಳಸಿರಾಮ್‌ ಪತಿ ತುಳಸಿರಾಮ್‌ ಅವರ ಹೆಸರುಗಳೂ ಕೇಳಿಬರುತ್ತಿವೆ. ಕಾಂಗ್ರೆಸ್‌ನಿಂದ ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ರಾಜ್‌, ಎಐಸಿಸಿ ಮಾಜಿ ಸದಸ್ಯ ವಿ. ಶಂಕರ್‌ ಆಕಾಂಕ್ಷಿಗಳು. ಆಮ್‌ ಆದ್ಮಿ ಪಕ್ಷದಿಂದ ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಸ್ಪರ್ಧಿಸುವ ನಿರೀಕ್ಷೆಯಿದೆ.

8.ಚಾಮರಾಜಪೇಟೆ- ಜಮೀರ್‌ಗೆ ಸವಾಲು ಎಸೆಯುವವರು ಯಾರು?
ಕಾಂಗ್ರೆಸ್ಸಿನ ಬಿ.ಝಡ್‌.ಜಮೀರ್‌ ಅಹಮದ್‌ ಖಾನ್‌ ಹಾಲಿ ಶಾಸಕ. ಇದೊಂದು ರೀತಿಯಲ್ಲಿ ಜಮೀರ್‌ ಅವರ ಭದ್ರಕೋಟೆ. ಕಾಂಗ್ರೆಸ್‌ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಈ ಕ್ಷೇತ್ರದಿಂದ ಕೇಳಿಬಂದಿತ್ತು. ಬಿಡಿಎ ಮಾಜಿ ಸದಸ್ಯ ಚಾಂದ್‌ಪಾಷ ಕೂಡ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಲಹರಿ ವೇಲು ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಆಮ್‌ ಆದ್ಮಿ ಪಕ್ಷದಿಂದ ಜಗದೀಶ್‌ ಚಂದ್ರ ಸ್ಪರ್ಧಿಸುವ ಸಾಧ್ಯತೆಯಿದೆ.

Ticket Fight: ಸಿಂಧನೂರಿನಲ್ಲೂ ಗಣಿ ರೆಡ್ಡಿ ಸ್ಪರ್ಧೆ ವದಂತಿ: ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ಗೆ ತೀವ್ರ ಕದನ

9.ಚಿಕ್ಕಪೇಟೆ- ಆಮ್‌ ಆದ್ಮಿ ಪಕ್ಷದಿಂದ ಬ್ರಿಜೇಶ್‌ ಕಾಳಪ್ಪ ಹೆಸರು
ಬಿಜೆಪಿಯ ಉದಯ್‌ ಗರುಡಾಚಾರ್‌ ಈ ಕ್ಷೇತ್ರದ ಹಾಲಿ ಶಾಸಕರು. ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡುವ ಮಾತು ಕೇಳಿಬರುತ್ತಿದೆಯಾದರೂ ಬದಲಿಸಬೇಕು ಎಂಬ ಅಭಿಪ್ರಾಯವೂ ಪಕ್ಷದಲ್ಲಿ ವ್ಯಕ್ತವಾಗಿದೆ. ಹೀಗಾಗಿಯೇ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರ ಹೆಸರು ಪ್ರಸ್ತಾಪವಾಗುತ್ತಿದೆ. ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕ ಆರ್‌.ವಿ. ದೇವರಾಜ್‌ ಕಳೆದ ಬಾರಿ ಸೋತಿದ್ದರು. ಈ ಬಾರಿಯೂ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಉತ್ಸುಕತೆ ತೋರಿದ್ದಾರೆ. ಬಿಬಿಎಂಪಿ ಮಾಜಿ ಮೇಯರ್‌ ಹಾಗೂ ಮೂರು ಬಾರಿ ಬಿಬಿಎಂಪಿ ಸದಸ್ಯರಾಗಿದ್ದ ಗಂಗಾಂಬಿಕೆ ಮಲ್ಲಿಕಾರ್ಜುನ ಅವರೂ ಆಕಾಂಕ್ಷಿಗಳು. ಕಾಂಗ್ರೆಸ್‌ನಿಂದ ಆಮ್‌ ಆದ್ಮಿ ಪಕ್ಷಕ್ಕೆ ವಲಸೆ ಬಂದಿರುವ ಬ್ರಿಜೇಶ್‌ ಕಾಳಪ್ಪ ಈ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ.

ಬಲಾಬಲ
ಒಟ್ಟು 28
ಬಿಜೆಪಿ 15
ಕಾಂಗ್ರೆಸ್‌ 12
ಜೆಡಿಎಸ್‌ 1

click me!