
ಹುಬ್ಬಳ್ಳಿ[ಫೆ.10]: ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳಾಗುತ್ತಿದ್ದು, ಆಪರೇಷನ್ ಕಮಲ ಆಡಿಯೋ ವಿಚಾರ ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದೆ. ಈಗಾಗಲೇ ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೋ ಅನ್ವಯ ತಾನು ಶರಣುಗೌಡನೊಂದಿಗೆ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನೀಡಿದ ಮಾತಿನಂತೆ ರಾಜಕೀಯ ನಿವೃತ್ತಿ ಪಡೆಯಿರಿ ಎಂಬ ಒತ್ತಡ ಹೆಚ್ಚಾಗಿದೆ. ಹೀಗಿರುವಾಗ ಯಡಿಯೂರಪ್ಪ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಈ ಆಡಿಯೋ ವಿಚಾರವಾಗಿ ಮತ್ತಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ಹೌದು ಹುಬ್ಬಳ್ಳಿಯಲ್ಲಿ ಆಡಿಯೋ ಕುರಿತಾಗಿ ಮತ್ತಷ್ಟು ಸ್ಪಷ್ಟನೆ ನೀಡಿರುವ ಬಿ. ಎಸ್ ಯಡಿಯೂರಪ್ಪ 'ಶರಣಗೌಡ ರಾತ್ರಿ ಹನ್ನೆರಡೂವರೆ ಗಂಟೆಗೆ ನನ್ನನ್ನು ಭೇಟಿಯಾಗಿದ್ದು ನಿಜ. ಇದು ಸಿಎಂ ಕುಮಾರಸ್ವಾಮಿ ಮಾಡಿರುವ ಷಡ್ಯಂತ್ರ. ಸಂಭಾಷಣೆಯಲ್ಲಿ ಅರ್ಧ ಸತ್ಯ ಅರ್ಧ ಸುಳ್ಳು ಇದೆ. ಯಕೆಂದರೆ ಸ್ಪೀಕರ್‌ಗೆ ನಾನು ಹಣ ಕೊಡುವುದಾಗಿ ಹೇಳಿದ್ದು ಸುಳ್ಳು. ಇದನ್ನು ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ’ ಎಂದಿದ್ದಾರೆ.
ಅಲ್ಲದೇ 'ಸೂಕ್ತ ತನಿಖೆ ಮಾಡಿದ್ರೆ ಸತ್ಯ ಬಹಿರಂಗವಾಗುತ್ತೆ. ಕುಮಾರಸ್ವಾಮಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ತಾವೇ ಶರಣಗೌಡನನ್ನು ಕಳಿಸಿ ರೆಕಾರ್ಡ್ ಮಾಡಿಸಿದ್ದಾರೆ. ನಮ್ಮ ಬಳಿಯೂ ಆಡಿಯೋ, ವಿಡಿಯೋ ಇದೆ. ಕುಮಾರಸ್ವಾಮಿಯವರು ಬಿಜೆಪಿ ಶಾಸಕರಿಗೆ ಆಮಿಷದ ಒಡ್ಡಿರುವ ಆಡಿಯೋ ನಮ್ಮ ಬಳಿಯೂ ಇದೆ' ಎಂದಿದ್ದಾರೆ.
ಒಟ್ಟಾರೆಯಾಗಿ ಆಪರೇಷನ್ ಕಮಲದ ಈ ಆಡಿಯೋ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನೇ ಹುಟ್ಟಿಸಿದೆ. ಆಡಿಯೋದಲ್ಲಿರುವಂತೆ ನಿಜಕ್ಕೂ ಯಡಿಯೂರಪ್ಪ ಸ್ಪೀಕರ್ ಗೆ ಹಣದ ಆಮಿಷ ಒಡ್ಡಿದ ವಿಚಾರವನ್ನು ಮಾತನಾಡಿದ್ದರಾ ಅಥವಾ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆಯಾ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.