
ಬೆಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಬಾಕಿ ಉಳಿದಿರುವ ಜಿಪಂ, ತಾಪಂ ಸೇರಿ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ವರ್ಷದಲ್ಲೇ ಮುಹೂರ್ತ ಫಿಕ್ಸ್ ಆಗುವುದು ನಿಶ್ಚಿತ ಎಂಬಂತಾಗಿದೆ. ಈ ಕುರಿತು ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಭರವಸೆ ನೀಡಿದ್ದಾರೆ.
ಈ ಕುರಿತು ಸದಾಶಿವನಗರದ ತಮ್ಮನಿವಾಸದ ಬಳಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆ, ಮಹಾನಗರ ಪಾಲಿಕೆ, ನಗರಸಭೆ ಸೇರಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ಈ ವರ್ಷವೇ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ 2026ರ ವರ್ಷ ಶುಭ ಲಗ್ನದಲ್ಲಿ ಆರಂಭವಾಗಿದೆ. 2025ರಲ್ಲಿ ನಾವು ಉತ್ತಮ ಆಡಳಿತ ನೀಡಿದ್ದು, ಬಂಡವಾಳ ಹೂಡಿಕೆದಾರರ ಸಮಾವೇಶ, ಟೆಕ್ ಸಮ್ಮಿಟ್ ಸೇರಿ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದರು.
ಕಳೆದ ವರ್ಷ ನೀರಾವರಿ ಇಲಾಖೆಯಲ್ಲಿ ಐತಿಹಾಸಿಕ ತೀರ್ಮಾನಗಳನ್ನು ಮಾಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ತುಂಗಭದ್ರ ಯೋಜನೆ ಸೇರಿ ಇನ್ನಿತರ ಮಹತ್ತರ ಯೋಜನೆಗಳ ಅನುಷ್ಠಾನಕ್ಕೆ ತೀರ್ಮಾನಿಸಿ, ಕೈಗೆತ್ತಿಕೊಂಡಿದ್ದೇವೆ. ಮೇಕೆದಾಟು ಯೋಜನೆಯಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇವೆಲ್ಲವೂ ಇತಿಹಾಸದ ಪುಟ ಸೇರಿವೆ. ರಾಜ್ಯದ ಜನ ನಮ್ಮ ಮೇಲಿಟ್ಟಿರುವ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಅಹಿತಕರ ಘಟನೆ ನಡೆಸಲು ಕೆಲ ಸಂಚುಗಳಿದ್ದವು. ಗೃಹ ಇಲಾಖೆ ಅವೆನ್ನೆಲ್ಲ ಕಾರ್ಯಗತಗೊಳ್ಳದಂತೆ ಮಾಡಿದೆ. ನಮ್ಮ ಪೊಲೀಸರು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ. ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಇಡೀ ಇಲಾಖೆ ಉತ್ತಮ ಕೆಲಸ ಮಾಡಿದ್ದು, ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
- 239 ತಾಲೂಕು ಪಂಚಾಯಿತಿಗಳ 3600 ಕ್ಷೇತ್ರಗಳಿಗೂ 2020-21ರಿಂದ ಚುನಾಔಣೆಗಳು ನಡೆದಿಲ್ಲ
- ಮೈಸೂರು, ದಾವಣಗೆರೆ, ಶಿವಮೊಗ್ಗ, ಮಂಗಳೂರು, ತುಮಕೂರು ಪಾಲಿಕೆಗಳಿಗೂ ಚುನಾವಣೆ ಆಗಿಲ್ಲ
- 180ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದ್ದು, ಆಡಳಿತಾಧಿಕಾರಿಗಳ ಅಧಿಕಾರವಿದೆ
- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಐದು ಹೊಸ ಪಾಲಿಕೆಗಳಿಗೂ ಚುನಾವಣೆ ಆಗಬೇಕಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.