
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ 2): ಮಲೆನಾಡ ಮನೆಗಳ ಮುಂದೆ ಕಾಂಗ್ರೆಸ್ಸಿಗರು ಮತ ಕೇಳಲು ಬಂದರೆ ಅವರ ಮೇಲೆ ನಾಯಿ ಬಿಡಲಾಗುವುದು ಎಚ್ಚರ ಎಂಬ ಬೋರ್ಡ್ ಹಾಕಿ ಕಾಂಗ್ರೆಸ್ಸಿನ ಪ್ರಣಾಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಬಜರಂಗದಳವನ್ನ ನಿಷೇಧ ಮಾಡುತ್ತೇವೆ ಎಂದ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದಾರೆ.
ಭತ್ತದ ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತಾ ಪಡೆಯ ಹೆಲಿಕಾಪ್ಟರ್
ಇದು ಬಜರಂಗದಳದವರ ಮನೆ. ಕಾಂಗ್ರೆಸಿಗರು ಮತ ಕೇಳಲು ಅವಕಾಶವಿಲ್ಲ. ಕಾಂಗ್ರೆಸ್ಸಿಗರು ಮತ ಕೇಳಲು ಬಂದರೆ ನಾಯಿ ಬಿಡಲಾಗುವುದು ಎಚ್ಚರ ಎಂದು ಬೋರ್ಡ್ ಹಾಕಿದ್ದಾರೆ. ಕಾಫಿನಾಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಿದೆ. ದತ್ತಪೀಠದ ಹೋರಾಟ ಆರಂಭಗೊಂಡ ಮೇಲೆ ಮಲೆನಾಡು ಭಾಗದಲ್ಲಿ ಹಿಂದೂ ಸಂಘಟನೆ ಮತ್ತಷ್ಟು ಗಟ್ಟಿಯಾಗಿತ್ತು. ಇದೀಗ, ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕೆಂಡವಾಗಿರೋ ಬಜರಂಗದಳ ನಾನಾ ರೀತಿ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದೆ. ಕಾಂಗ್ರೆಸ್ಸಿನ ಈ ಪ್ರಣಾಳಿಕೆ ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಂಗ್ರೆಸ್ಸಿಗೆ ಮುಳ್ಳಾಗೋದು ಗ್ಯಾರಂಟಿ ಆಗಿದೆ.
ಚಿಕ್ಕಮಗಳೂರಲ್ಲಿ ರಾಹುಲ್ ಗಾಂಧಿ ಅಬ್ಬರದ ಪ್ರಚಾರ: ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಹೋದಲ್ಲೆಲ್ಲಾ ಬರೀ ನಿಮ್ಮ ಬಗ್ಗೆಯೇ ಹೇಳುತ್ತೀರಾ. ನಿಮ್ಮ ಬಗ್ಗೆ ನೀವೇ ಹೇಳುವುದನ್ನ ಬಿಟ್ಟು ಜನರ ಬಗ್ಗೆ, ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗೆ ಏನು ಕೊಡ್ತೀರಾ ಅದನ್ನ ಹೇಳಿ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ರೋಡ್ ಶೋ ನಡೆಸಿ ತೆರೆದ ವಾಹನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿಗಳ ಪರ ಮತಪ್ರಚಾರ ಮಾಡಿದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದೊಂದು ಕಳ್ಳ ಸರ್ಕಾರ. ಈ ಸರ್ಕಾರ ಜನರ ಆಶೀರ್ವಾದದಿಂದ ಆದ ಸರ್ಕಾರವಲ್ಲ. ಕಳ್ಳತನ ಮಾಡಿದ ಸರ್ಕಾರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಷೇಧದ ಭರವಸೆ, ದೇಶದ ಬಲ 'ಭಜರಂಗದಳ' ಟ್ವಿಟರ್‌ನಲ್ಲಿ ಟ್ರೆಂಡ್!
ಬಿಜೆಪಿಗೆ 40 ಸ್ಥಾನ ನೀಡಿ, ಕಾಂಗ್ರೆಸ್ಗೆ 150 ಸೀಟು ಕೊಡಿ: ಭ್ರಷ್ಟಾಚಾರದಿಂದ ಮಾಡಿದ ಹಣದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈಗ ರಾಜ್ಯದಲ್ಲಿ ಯಾರನ್ನೇ ಕೇಳಿ 40 ಅಂದ್ರೆ ಏನು ಎಂದು. ಎಲ್ಲರೂ ಭ್ರಷ್ಟಾಚಾರ ಅಂತಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಬಾರಿಯೂ ಬಿಜೆಪಿಯವರು ಮತ್ತದೇ ಕಳ್ಳತನ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಾರೆ. ಹಾಗಾಗಿ, ಅವರಿಗೆ 40 ಅಂದ್ರೆ ತುಂಬಾ ಪ್ರೀತಿ ಹಾಗಾಗಿ, ಅವರಿಗೆ 40 ಸ್ಥಾನ ನೀಡಿ ಕಾಂಗ್ರೆಸ್ 150 ಸ್ಥಾನ ನೀಡಿ ಎಂದು ಮನವಿ ಮಾಡಿದ್ದಾರೆ. ಮೋದಿಯವರು ಚುನಾವಣಾ ವೇಳೆ ಮಾತ್ರ ರಾಜ್ಯಕ್ಕೆ ಭೇಟಿ ಕೊಡ್ತಾರೆ. ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಕಮೀಷನ್ ಬಗ್ಗೆ ಪತ್ರ ಬರೆದರೂ ಉತ್ತರ ಕೊಡಲಿಲ್ಲ. ಭಾಷಣದ ವೇಳೆಯೂ ನಾವು ನಮ್ಮ ನಾಯಕರ ಹೆಸರು ಹೇಳುತ್ತೇವೆ. ಆದರೆ, ಮೋದಿಯವರು ಬೊಮ್ಮಾಯಿ, ಬಿ.ಎಸ್.ವೈ ಸೇರಿದಂತೆ ಯಾರ ಹೆಸರನ್ನೂ ಹೇಳಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.