ನಾವು ಹಳ್ಳಿ ಹಳ್ಳಿಗಳಲ್ಲಿ ಮದ್ಯದಂಗಡಿ ತೆರೆಯುತ್ತಿಲ್ಲ. ಎಲ್ಲರೊಂದಿಗೆ ಚರ್ಚೆ ಮಾಡಿ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕುದೂರು (ರಾಮನಗರ) (ಅ.07): ನಾವು ಹಳ್ಳಿ ಹಳ್ಳಿಗಳಲ್ಲಿ ಮದ್ಯದಂಗಡಿ ತೆರೆಯುತ್ತಿಲ್ಲ. ಎಲ್ಲರೊಂದಿಗೆ ಚರ್ಚೆ ಮಾಡಿ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮೂವತ್ತು ವರ್ಷಗಳಿಂದ ಹೊಸ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಿಲ್ಲ. ಕೆಲ ಮದ್ಯದಂಗಡಿಯವರು ನಾಲ್ಕೈದು ಕೋಟಿ ರುಪಾಯಿಗೆ ಪರವಾನಗಿ ಮಾರಾಟ ಮಾಡುತ್ತಿದ್ದಾರೆ. ನಾವು ಹಳ್ಳಿಹಳ್ಳಿಗಳಲ್ಲಿ ಮದ್ಯದಂಗಡಿ ತೆರೆಯುತ್ತಿಲ್ಲ. ಉದ್ಯೋಗ ಸೃಷ್ಟಿ ಉದ್ದೇಶದಿಂದ ಹೊಸದಾಗಿ ಮದ್ಯದಂಗಡಿ ತೆರೆಯಲು ಉದ್ದೇಶಿಸಲಾಗಿದೆ. ಆದರೆ ಎಲ್ಲಿ ತೆರೆಯಬೇಕು, ಹೇಗೆ ತೆರೆಯಬೇಕು ಎಂಬುದನ್ನು ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಮದ್ಯ ಸೇವಿಸುವುದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಶಿಕ್ಷಣ ಕ್ರಾಂತಿಗೆ ಕಾಂಗ್ರೆಸ್ ಮುನ್ನುಡಿ: ರಾಜ್ಯದಲ್ಲಿ 2ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಕುದೂರಿನ ಕೆಪಿಎಸ್ ಶಾಲಾ ರಂಗಮಂದಿರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಹಕ್ಕು ಪತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪಿಸಿ ಆ ಮೂಲಕ ಶಿಕ್ಷಣ ಕ್ರಾಂತಿ ಮಾಡಲು ನಾಡಪ್ರಭು ಕೆಂಪೇಗೌಡರ ನೆಲವಾದ ಮಾಗಡಿಯಲ್ಲಿ ಚಾಲನೆ ದೊರೆತಿದೆ ಎಂದರು.
ಬರಗಾಲ ಇದೆ, ಬೆಳೆ ಹಾಕಬೇಡಿ ಅಂತ ರೈತರಿಗೆ ಹೇಳಿದ್ದೇವೆ: ಡಿ.ಕೆ.ಶಿವಕುಮಾರ್
ನಗರ ಪ್ರದೇಶಗಳಿಗೆ ಶಿಕ್ಷಣಕ್ಕಾಗಿ ವಲಸೆ ಹೋಗುವುದು ತಪ್ಪಬೇಕು. ಪ್ರತಿ ಪಂಚಾಯಿತಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗಬೇಕು. ಇದಕ್ಕಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟಬೇಕು ಎಂಬುದು ನನ್ನ ಕನಸಾಗಿದೆ. ಆದಷ್ಟು ಬೇಗ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಾರ್ಯಗತ ಮಾಡಲಿದ್ದೇವೆ. ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸುವುದಾಗಿ ಎಂದು ಹೇಳಿದರು. ರಾಮನಗರ ಜಿಲ್ಲೆಯಲ್ಲಿರುವ ಎಲ್ಲಾ ಕೈಗಾರಿಕೆಗಳ ಸಿಎಸ್ಆರ್ ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಸುಮಾರು 36 ಕೋಟಿಯಷ್ಟು ಹಣ ಸಿಎಸ್ ಆರ್ ಅನುದಾನದ ಅಡಿಯಲ್ಲಿ ಬಳಕೆಗೆ ಬಂದಿದೆ ಎಂದು ತಿಳಿಸಿದರು.
ಕುದೂರು ಗ್ರಾಮದಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ ಮಾಡಲು ಹೊರಟಿರುವುದು ಕ್ರಾಂತಿಕಾರಿ ಆಲೋಚನೆ. ಇಂತಹ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲು ಹೊರಟಿರುವ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಗೆ ನಾವೆಲ್ಲಾ ಅಭಾರಿಯಾಗಿರುತ್ತೇವೆ. ಈ ಸಂಸ್ಥೆಯವರು ಜಿಲ್ಲೆಯ 4 ತಾಲೂಕುಗಳಲ್ಲಿ ಒಂದೊಂದು ಶಾಲೆ ನಿರ್ಮಾಣ ಮಾಡುವ ಭರವಸೆ ಕೊಟ್ಟಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕೆಪಿಎಸ್ ಶಾಲಾ ಕಟ್ಟಡ, ಪಾರ್ಕ್ ಅಭಿವೃದ್ಧಿ, ಬಯಲು ರಂಗ ಮಂದಿರಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಲ್ಲದೆ, ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಿದರು.
ಜಾತಿಗಳ ಹೆಸರಿನಲ್ಲಿ ಹಿಂದುಗಳನ್ನು ಒಡೆಯುವ ಹುನ್ನಾರ ರಾಹುಲ್ ಗಾಂಧಿಯದ್ದು: ಚಕ್ರವರ್ತಿ ಸೂಲಿಬೆಲೆ
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್ .ರವಿ, ಜಿಲ್ಲಾಕಾರಿ ಅವಿನಾಶ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಉಪಾಧ್ಯಕ್ಷ ಸುದೀಪ್ ದಾಲ್ವಿ, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.