ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸಿದ್ದು, ಭವಿಷ್ಯದಲ್ಲಿ ಈ ಮೀಸಲಾತಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು (ಫೆ.05): ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸಿದ್ದು, ಭವಿಷ್ಯದಲ್ಲಿ ಈ ಮೀಸಲಾತಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೋರಮಂಗಲದ ಕೆಎಸ್‌ಆರ್‌ಪಿ ಕ್ರೀಡಾಂಗಣದಲ್ಲಿ ನಡೆದ ‘12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್‌ಶಿಪ್’ ಸಮಾರೋಪದಲ್ಲಿ ಮಾತನಾಡಿದ ಅವರು, ಕ್ರೀಡಾ ಕೋಟಾದಡಿ 2022-23ನೇ ಸಾಲಿನಲ್ಲಿ 80 ಸಿವಿಲ್ ಪೇದೆಗಳು ಹಾಗೂ 20 ಪಿಎಸ್ಐಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಥಮ ಬಾರಿಗೆ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್‌ಶಿಪ್ ಆಯೋಜಿಸಿದ್ದು, ಕರ್ನಾಟಕ ಪೊಲೀಸ್ ತಂಡ ಪ್ರಥಮ ಬಾರಿಗೆ ಆರ್ಚರಿಯಲ್ಲಿ ಭಾಗವಹಿಸಿದೆ. ವಿವಿಧ ಶ್ರೇಣಿಯ ಮಹಿಳಾ ಆರ್ಚರಿ ಕ್ರೀಡಾಪಟುಗಳು ಸೇರಿದಂತೆ ಒಟ್ಟು 436 ಆರ್ಚರಿ ಕ್ರೀಡಾಪಟುಗಳು ರೀಕವರ್, ಕಾಂಪೌಂಡ್ ಹಾಗೂ ಇಂಡಿಯನ್ ರೌಂಡ್ ಎಂಬ 3 ವರ್ಗಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 174 ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಅಲ್ಲದೇ ಮೊದಲ ಮೂರು ಮಹಿಳಾ ಹಾಗೂ ಪುರುಷ ತಂಡಗಳು ಟ್ರೋಫಿಯನ್ನು ಗೆದ್ದಿದ್ದಾರೆ ಎಂದು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಸಂಸದ ಡಿ.ಕೆ.ಸುರೇಶ್ ವಿರುದ್ದ ಬಿಜೆಪಿ ಪ್ರತಿಭಟನೆ: ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ!
ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಇತರರಿದ್ದರು. ಒಬ್ಬ ಉತ್ತಮ ಬಿಲ್ಲುಗಾರನಿಗೆ ಸದೃಢ ಮಾನಸಿಕ ಶಿಸ್ತು, ಉತ್ತಮ ತಂತ್ರಗಾರಿಕೆ, ಗುರಿ, ಸದೃಢ ಸ್ನಾಯುಗಳು ಹಾಗೂ ಪರಿಶ್ರಮ ಅತ್ಯಗತ್ಯ. ಬಿಲ್ಲು ವಿದ್ಯೆ ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಈ ವಿದ್ಯೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ್ದ ಏಕಲವ್ಯ, ಅರ್ಜುನ, ಕರ್ಣ, ದ್ರೋಣಾಚಾರ್ಯರ ಕೊಡುಗೆಯನ್ನು ಮರೆಯುವಂತಿಲ್ಲ. ಆಧುನಿಕ ಭಾರತದಲ್ಲಿ ಆರ್ಚರಿ ತನ್ನ ಐತಿಹಾಸಿಕ ಮತ್ತು ಪೌರಾಣಿಕ ಬೇರುಗಳಿಂದ ಸ್ಪರ್ಧಾತ್ಮಕ ಕ್ರೀಡೆಯಾಗಿ ಬೆಳೆದಿದೆ ಎಂದು ತಿಳಿಸಿದರು.