ರಾಜ್ಯಗಳ ಶಕ್ತಿ ಕುಂದಿಸುವ ಯತ್ನ ಕೇಂದ್ರ ಸರ್ಕಾರದಿಂದ ಆಗುತ್ತಿದೆ: ಸಚಿವ ಕೃಷ್ಣ ಭೈರೇಗೌಡ ಕಿಡಿ

By Govindaraj S  |  First Published Feb 5, 2024, 8:41 PM IST

ವಿರೋಧ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ಹೊರಹಾಕಿದ್ದಾರೆ.


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಫೆ.05): ವಿರೋಧ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ಹೊರಹಾಕಿದ್ದಾರೆ. ಕೊಡಗು ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂಬ ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಅವರ ಹೇಳಿಕೆಗೆ ಸಚಿವ ಕೃಷ್ಣಭೈರೆಗೌಡ ತಿರುಗೇಟು ನೀಡಿದರು. 2017 ರಲ್ಲಿ ಕೇಂದ್ರ ಸರ್ಕಾರದ ಬಜೆಟ್ 24 ಲಕ್ಷ ಕೋಟಿ ಇತ್ತು. ಅಂದು ಕರ್ನಾಟಕಕ್ಕೆ 52 ಸಾವಿರ ಕೋಟಿ ಅನುದಾನ ಬರುತ್ತಿತ್ತು. 

Tap to resize

Latest Videos

ಇಂದು ಕೇಂದ್ರದ ಬಜೆಟ್ 45 ಲಕ್ಷ ಕೋಟಿ ಆಗಿದೆ. ಆದರೆ ಇಂದಿಗೂ ರಾಜ್ಯಕ್ಕೆ ಅದೇ 52 ರಿಂದ 53 ಸಾವಿರ ಕೋಟಿ ಅನುದಾನವಷ್ಟೇ ಬರುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳೆರಡರ ಬಜೆಟ್ ಜಾಸ್ತಿಯಾಗಿದೆ. ಆದರೆ ರಾಜ್ಯಕ್ಕೆ ಬರಬೇಕಾಗಿರುವ ಅನುದಾನ ಮಾತ್ರ ಅಷ್ಟೇ ಉಳಿದಿದೆ. ರಾಜ್ಯಕ್ಕೆ ಬರಗಾಲ ಬಂದಿರುವುದರಿಂದ ಸೆಪ್ಟೆಂಬರ್ 23 ರಲ್ಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಮನವಿ ಸಲ್ಲಿಸಿ ನಾಲ್ಕುವರೆ ತಿಂಗಳಾಯ್ತು, ನಮ್ಮ ಮನವಿ ಬಗ್ಗೆ ಕನಿಷ್ಠ ತೀರ್ಮಾನವನ್ನು ಮಾಡಿಲ್ಲ ಎಂದರು. ಕರ್ನಾಟಕದ ರೈತರು ಸಂಕಷ್ಟದಲ್ಲಿ ಇದ್ದಾರೆ, ಆದರೂ ಕೇಂದ್ರ ಸರ್ಕಾರ ರೈತರನ್ನು ಇಷ್ಟು ನಿರ್ಲಕ್ಷ್ಯ ಮಾಡಿದೆ.

35 ವರ್ಷಗಳ‌ ಬಳಿಕ ಶಾಲೆಗೆ ಬಂದ 3 ಸಾವಿರ ವಿದ್ಯಾರ್ಥಿಗಳು: ಗುರುಗಳನ್ನ ಹೆಗಲ ಮೇಲೆ ಹೊತ್ತು ಮೆರವಣಿಗೆ!

ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ 5300 ಕೋಟಿ ಘೋಷಿಸಿತ್ತು. ಅದರಲ್ಲಿ ಇದುವರೆಗೆ ಒಂದೇ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಮಹದಾಯಿ ಯೋಜನೆಗೆ ಪರಿಸರ ಖಾತೆಯಿಂದ ಕ್ಲಿಯರೆನ್ಸ್ ಕೊಟ್ಟಿಲ್ಲ. ಇವೆಲ್ಲಾ ವಿಷಯಗಳನ್ನು ನೋಡಿದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಇದು ಕರ್ನಾಟಕ ರಾಜ್ಯದ ಅಭಿಪ್ರಾಯ ಮಾತ್ರ ಅಲ್ಲ. ಕೇರಳ ಸರ್ಕಾರವೂ ದೆಹಲಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ. ತಮಿಳುನಾಡು ಸರ್ಕಾರವೂ ಫೆಬ್ರುವರಿ 8 ರಂದು ದೆಹಲಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ. 

ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಕೊಲ್ಕತ್ತಾದಲ್ಲಿ ಎರಡು ದಿನಗಳ ಕಾಲ ಪ್ರತಿಭಟನೆ ಮಾಡಿದೆ. ಇದೆಲ್ಲವೂ ಕೇಂದ್ರದ ಮಲತಾಯಿ ಧೋರಣೆ ಅಲ್ಲವೆ.? ವಿರೋಧ ಪಕ್ಷಗಳು ಆಡಳಿತವಿರುವ ರಾಜ್ಯಗಳಿಗೆ, ಅದರಲ್ಲೂ ದಕ್ಷಿಣದ ರಾಜ್ಯಗಳಿಗೆ ಈ ರೀತಿ ಮಲತಾಯಿ ಧೋರಣೆ ಏಕೆಂದು ಕಂದಾಯ ಸಚಿವ ಕೃಷ್ಣೆಬೈರೆಗೌಡ ಪ್ರಶ್ನಿಸಿದರು. ಕೇಂದ್ರ ಸರ್ಕಾರ ರಾಜ್ಯಗಳ ಶಕ್ತಿಯನ್ನು ಕುಂದಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಕರ್ನಾಟಕಕ್ಕೆ ಕೇವಲ 60 ಸಾವಿರ ಕೋಟಿ ಕೊಡಲಾಗುತ್ತಿತ್ತು. 

ಆದರೆ ಈಗ ನಮ್ಮ ಸರ್ಕಾರ 2 ಲಕ್ಷ ಕೋಟಿಗಿಂತ ಹೆಚ್ಚು ಅನುದಾನವನ್ನು ರಾಜ್ಯಕ್ಕೆ ಕೊಟ್ಟಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ ಅವರು ಇಡೀ ದೇಶದಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಜೊತೆಗೆ ಹೊರದೇಶಗಳಿಂದ ಡಾಲರ್ ರೂಪದಲ್ಲಿ ಆದಾಯ ತಂದು ಕೊಡುವುದರಲ್ಲಿ ರಾಜ್ಯವೇ ಮೊದಲಿದೆ. ಇಷ್ಟೆಲ್ಲಾ ಕೊಡುಗೆಯನ್ನು ದೇಶಕ್ಕೆ ಕೊಟ್ಟಿರುವಾಗ, ಇದರಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ. ಅದನ್ನು ಯಾವುದೇ ಅಂಕಿ ಸಂಖ್ಯೆಯಲ್ಲಿ ಯಾರೂ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

ಈ ಅಂಕಿ ಸಂಖ್ಯೆಯನ್ನು ಮುಂದಿನ ವಾರದಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಕೊಡುತ್ತೇವೆ. ಯಾರು ಬೇಕಾದರೂ ಬಂದು ಚರ್ಚಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಸವಾಲು ಹಾಕಿದರು. ಸುಮ್ಮನೇ ಕಟ್ಟು ಕಥೆಗಳನ್ನು ಕಟ್ಟಿ ಜನರ ಗಮನ ಬೇರೆಡೆಗೆ ಸೆಳೆಯುವುದು ಬೇಡ. ಕರ್ನಾಟಕದಲ್ಲಿ ನಾವು ಇದನ್ನು ಹೇಳುತ್ತಿದ್ದೇವೆ ಎಂದುಕೊಂಡರೆ, ಕೇರಳ ವಿಧಾನಸಭೆಯಲ್ಲಿ ಏಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಸರ್ವಾನುಮತದ ನಿರ್ಣಯ ಮಾಡಿದ್ದಾರೆ. ತಮಿಳುನಾಡಿನವರು ಏಕೆ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಪ್ರಶ್ನಿಸಿದರು. 

ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವಿಷಬೀಜ ಬಿತ್ತುವ ರಾಜಕಾರಣ: ಸಚಿವ ಮಹದೇವಪ್ಪ

ಕೇಂದ್ರ ಸರ್ಕಾರ ರಾಜ್ಯಗಳ ಶಕ್ತಿಯನ್ನು ವ್ಯವಸ್ಥಿತವಾಗಿ ಕುಂದಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯಗಳ ಶಕ್ತಿ ಕುಂದಿದರೆ ದೇಶದ ಶಕ್ತಿಯೂ ಕುಂದುತ್ತದೆ. ದೇಶ ಸುಭದ್ರ ಮತ್ತು ಬಲಿಷ್ಠವಾಗಿರಬೇಕು ಅಂದ್ರೆ ರಾಜ್ಯಗಳು ಬಲಿಷ್ಠವಾಗಿರಬೇಕು. ರಾಜ್ಯಗಳ ಶಕ್ತಿ ಕುಂದಿಸಿ ದೇಶವನ್ನು ಬಲಿಷ್ಠ ಮಾಡಲು ಸಾಧ್ಯವಿಲ್ಲ. ಕೇಂದ್ರ ತನ್ನ ಈ ಧೋರಣೆಯನ್ನು ಬದಲಾಯಿಸಿಕೊಳ್ಳಲಿ. ಎಲ್ಲರೂ ಹೊಂದಾಗಿ ಕೆಲಸ ಮಾಡುವುದರಲ್ಲಿ ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

click me!