
ಮೈಸೂರು (ಜೂ.06): ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರದಲ್ಲಿ ಯಾವ ಕಿಕ್ ಬ್ಯಾಕ್ ನಡೆದಿಲ್ಲ. ಎಲ್ಲರಿಗೂ ಎಲ್ಲದರ ವಿವರಣೆ ಕೊಟ್ಟಿದ್ದೇನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು. ಸ್ಮಾರ್ಟ್ ಮೀಟರ್ ಬಗ್ಗೆ ಬಿಜೆಪಿ ಆರೋಪ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಕಿಕ್ಕೂ ಇಲ್ಲ, ಬ್ಯಾಕು ಇಲ್ಲ. ಅವರೇನು ಅದರ ಬಗ್ಗೆ ಮಾತನಾಡುವುದು. ಅವರು ಎಲ್ಲಾ ವಿಚಾರದಲ್ಲೂ ಇಂತಹದೇ ಆರೋಪಗಳನ್ನು ಮಾಡುತ್ತಾರೆ.
ಬೆಂಗಳೂರಿನಲ್ಲಿ ಸ್ಟೀಲ್ ಬ್ರೀಡ್ಜ್ ವಿಚಾರದಲ್ಲಿ ಇದೇ ರೀತಿ ಆರೋಪ ಮಾಡಿದರು. ಇವತ್ತು ಬ್ರಿಡ್ಜ್ ಆಗದೇ ಜನ ಕಷ್ಟ ಅನುಭವಿಸುತ್ತಿದ್ದಾರೆ ಎಂದರು. ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ನಾವು ನ್ಯಾಯಲದಲ್ಲಿ ಅದಕ್ಕೆ ಉತ್ತರ ಕೊಡುತ್ತೇವೆ. ಅವರು ಕೋರ್ಟ್ ಗೆ ಹೋಗಿದ್ದು ಒಳ್ಳೆಯದು ಬಿಡಿ. ಇನ್ನೂ ಯಾರು ಯಾರು ಎಲ್ಲೆಲ್ಲಿಗೆ ದೂರು ಕೊಡುತ್ತಾರೆ ಕೊಡಲಿ. ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ ಎಂದರು. ಡಿ.ಕೆ.ರವಿ ಕೇಸ್‌ನಲ್ಲಿ ನನ್ನ ಮೇಲೆ ಇಂತಹ ಆರೋಪ ಮಾಡಿದ್ದರು. ಆಮೇಲೆ ಸಿಬಿಐ ರಿಪೋರ್ಟ್ ನಲ್ಲಿ ಏನು ವರದಿ ಬಂತು ಹೇಳಿ.
ನನ್ನ ಪಾತ್ರವೇ ಇಲ್ಲ ಎಂಬುದು ಬಂತು. ನನ್ನನ್ನ ವಿಚಾರಣೆಗೆ ಕರೆಯಲೇ ಇಲ್ಲ. ಈಗ ಬಂದಿರುವ ಆರೋಪಕೂಡ ಅಂತಹದೆ. ಪ್ರತಿ ಬಾರಿ ಬಿಜೆಪಿ ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡುತ್ತೆ ಗೊತ್ತಿಲ್ಲ ಎಂದರು. ನಾನೇನು ಸಾಫ್ಟ್ ಲೀಡರ್ ಅಲ್ಲ. ಭಾಷೆಯನ್ನ ಸೌಜನ್ಯವಾಗಿಡುತ್ತೇನೆ ಅಷ್ಟೇ. ನಾನು ಯೂಥ್ ಕಾಂಡ ಅಧ್ಯಕ್ಷನಾಗಿದ್ದವನು. ಹಲವು ಇಲಾಖೆಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಸಾಫ್ಟ್ ಆಗಿದ್ದರೆ ಇವೆಲ್ಲಾ ಆಗುತ್ತಿತ್ತಾ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ರಚನೆ: ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ರಚನೆ ಆಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಎಂದರೆ ಮೌಲ್ಯ ಮತ್ತು ಸಿದ್ಧಾಂತಗಳ ಕಣಜ. ಇದರಲ್ಲಿ ಎಲ್ಲವೂ ಒಳಗೊಂಡಿದೆ. ಹೀಗಾಗಿ, ಕಾಂಗ್ರೆಸ್ ಇದ್ದರೆ ಮಾತ್ರ ನಾವು, ನಮ್ಮಿಂದ ಕಾಂಗ್ರೆಸ್ ಅಲ್ಲ ಎಂದರು. ಎಲ್ಲಾ ಜಾತಿಯವರು, ಭಾಷೆಯವರು ಇರುವ ಪಕ್ಷ ಕಾಂಗ್ರೆಸ್.
ಹೀಗಾಗಿ, ನಮ್ಮ ಜಾತಿ ಕಾಂಗ್ರೆಸ್, ನಮ್ಮ ಭಾಷೆ ಕಾಂಗ್ರೆಸ್. ಜನಪರವಾಗಿ ಕೆಲಸ ಮಾಡುವ ಕಾಂಗ್ರೆಸ್ ಪಕ್ಷವೂ ಎಂದಿಗೂ ಯಾವ ವಿಚಾರದಲ್ಲೂ ಹಿಂದೆ ಬಿದ್ದಿಲ್ಲ ಎಂದರು. ಮುಖ್ಯಮಂತ್ರಿಗಳು ಒಳ್ಳೆ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ತಾವು ಮಲಗುವುದಿಲ್ಲ ಕಾರ್ಯಕರ್ತರನ್ನು ಮಲಗಲು ಬಿಡುವುದಿಲ್ಲ ಎಂದು ಹೇಳಿ, ನಮ್ಮ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪಾದಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಯಶಸ್ವಿಯಾಗಿ ಜನಸ್ತೋಮದ ನಡುವೆ ಜನಮಾನಸದಲ್ಲಿ ಬೆರೆತಿರುವಂತ ಐತಿಹಾಸಿಕ ಘಟನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.