
ಮಂಗಳೂರು (ಜ.04): ರಾಜ್ಯ ಸರ್ಕಾರ ಶೇ.15ರಷ್ಟು ಬಸ್ ಪ್ರಯಾಣ ದರ ಏರಿಕೆಯೇ ಮೊದಲಾದ ವಿಚಾರಗಳಲ್ಲಿ ಜನಹಿತದ ದೃಷ್ಟಿಯನ್ನು ಗಮನದಲ್ಲಿರಿಸಿಯೇ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ಸಮರ್ಥಿಸಿಕೊಂಡಿದ್ದಾರೆ. ಬಸ್ ಪ್ರಯಾಣ ದರ ಏರಿಕೆಗೆ ಜನತೆಯ ವಿರೋಧ ಕುರಿತ ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಮಂಗಳೂರಲ್ಲಿ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಸರ್ಕಾರದ ಈ ನಿರ್ಧಾರದ ಹಿಂದೆ ಯಾವುದೋ ಸದುದ್ದೇಶ ಇರಬಹುದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದರೆ, ಮಹಿಳೆಯರು ಹಣ ತೆತ್ತು ಪ್ರಯಾಣಿಸುವುದಿಲ್ಲ. ಆದರೆ ಅವರ ಟಿಕೆಟ್ ಮೊತ್ತವನ್ನು ಸರ್ಕಾರವೇ ಕೆಎಸ್ಆರ್‌ಟಿಸಿಗೆ ಭರಿಸುತ್ತದೆ.
ಅದು ಕೆಎಸ್ಆರ್‌ಟಿಸಿಗೆ ಉಚಿತವಲ್ಲ. ಈಗ ದರ ಏರಿಕೆಯನ್ನು ಜನಸಾಮಾನ್ಯರೂ ವಿರೋಧಿಸುತ್ತಾರೆ ಎನ್ನುವಂತಿಲ್ಲ. ಜನತೆಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸರ್ಕಾರದ ನಿಲುವನ್ನು ಸ್ಪೀಕರ್ ಸಮರ್ಥಿಸಿದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಸ್ಪೀಕರ್ ಬೆಂಬಲಿಸಲಿ ಎನ್ನುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಬಗ್ಗೆ ಉತ್ತರಿಸಿದ ಯು.ಟಿ.ಖಾದರ್, ಗೋಹತ್ಯೆ ನಿಷೇಧ ಕಾನೂನು ಮೊದಲು ದೇಶದಲ್ಲಿ ಜಾರಿಗೆ ತಂದದ್ದು ಆಗಿನ ಪ್ರಧಾನಿ ಇಂದಿರಾ ಗಾಂಧಿ. ಆಗ ಅವರು ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ಕಾನೂನು ಎಂದು ಜಾರಿ ಮಾಡಿಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಒಂದೇ ಕಾನೂನು ಜಾರಿಗೆ ತಂದರು. ಅದು ದೇಶದಲ್ಲೇ ಅನುಷ್ಠಾನಗೊಳ್ಳುತ್ತಿದೆ,
ಸಿ.ಟಿ.ರವಿ ಪ್ರಕರಣ ಮಹಜರು ಬಸವರಾಜ ಹೊರಟ್ಟಿ ವ್ಯಾಪ್ತಿಗೆ: ಯು.ಟಿ.ಖಾದರ್
ಕರ್ನಾಟಕದಲ್ಲಿ ಪ್ರತ್ಯೇಕ ಅನುಷ್ಠಾನಗೊಳಿಸುವ ಮಾತೇ ಇಲ್ಲ. ಆನೆ, ಹಸು ಸೇರಿದಂತೆ ಪ್ರಾಣಿಗಳ ಯಾವುದೆಲ್ಲ ಜೀವ ಉಳಿಸಬೇಕು ಎಂಬ ಬಗ್ಗೆ ಬೇಕಾದರೆ ಅವರಿಗೆ ಪಟ್ಟಿ ನೀಡಲು ಸಿದ್ಧ ಎಂದರು. ಜಿಲ್ಲೆಗೊಂದು ಗೋಶಾಲೆ ಯೋಜನೆ ಜಾರಿಗೊಳಿಸಿದ್ದು ಹಿಂದಿನ ಸರ್ಕಾರ. ಅವರು ಎಷ್ಟು ಕಡೆ ಜಾರಿ ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಮತ್ತೆ ಈ ಸರ್ಕಾರ ಗೋಶಾಲೆ ಯೋಜನೆ ರದ್ದುಗೊಳಿಸಿದ ಬಗ್ಗೆ ಮಾತನಾಡಲಿ ಎಂದು ಸ್ಪೀಕರ್ ಖಾದರ್ ಹೇಳಿದರು. ನಾನು ಸಚಿವನಾಗುವ ವಿಚಾರ ನನಗೆ ಗೊತ್ತಿಲ್ಲ ಎಂದು ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವಿರಾ ಎಂಬ ಪ್ರಶ್ನೆಗೆ ಸ್ಪೀಕರ್ ಖಾದರ್ ಉತ್ತರಿಸಿದರು.
ಸ್ಥಳ ಮಹಜರು ವಿಚಾರ ಪರಿಷತ್ ಸಭಾಪತಿ ವ್ಯಾಪ್ತಿಗೆ: ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣ ವಿಧಾನ ಪರಿಷತ್ ವ್ಯಾಪ್ತಿಗೆ ಬರುವುದರಿಂದ ಸ್ಥಳ ಮಹಜರು ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಏನಿದ್ದರೂ ಪರಿಷತ್ ಸಭಾಪತಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನಾ ಸ್ಥಳ ಮಹಜರಿಗೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಯಾರ ಅನುಮತಿ ಪಡೆಯಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್ ಖಾದರ್,
ಪರಿಸರ ರಕ್ಷಿಸಿದರೆ ವಿಶ್ವದಲ್ಲೇ ಭಾರತ ನ.1: ಯು.ಟಿ.ಖಾದರ್
ಘಟನೆ ನಡೆದಿರುವುದು ಪರಿಷತ್ ವ್ಯಾಪ್ತಿಯಲ್ಲಿ ಆಗಿರುವುದರಿಂದ ಅಲ್ಲಿ ಅಸೆಂಬ್ಲಿ ಸ್ಪೀಕರ್‌ನ ವಿಚಾರ ಬರುವುದಿಲ್ಲ. ಹಾಗಾಗಿ ಪರಿಷತ್ ಸಭಾಪತಿಗಳೇ ನಿಯಮಾನುಸಾರ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾಗಿರುವುದರಿಂದ ಅವರ ವಿಚಾರ ನನ್ನ ವ್ಯಾಪ್ತಿಗೆ ಬರುತ್ತದೆ. ಅವರು ಪ್ರಕರಣ ಬಗ್ಗೆ ದೂರು ನೀಡಿದ್ದು, ಅದನ್ನು ಪ್ರಿವಿಲೇಜ್ ಕಮಿಟಿಗೆ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಹಾಲಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ವಿಚಾರವನ್ನು ಶಾಸಕಾಂಗದ ಕಾರ್ಯದರ್ಶಿಗಳಿಂದ ಮಾಹಿತಿ ಪಡೆಯಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.