
ಶಿರಸಿ (ಡಿ.07): ಅಭಿವೃದ್ಧಿಗೆ ಆದ್ಯತೆ ನೀಡಿ, ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಬೇಕಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಖುರ್ಚಿ ಕಾದಾಟ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಬದಲಾವಣೆಯೂ ಇಲ್ಲ. ಅವರೇ ಮುಂದಿನ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿಮಾನಿಗಳು ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ. ಅದು ಬಿಟ್ಟರೆ ಸ್ವತಃ ಡಿ.ಕೆ. ಶಿವಕುಮಾರ ಅವರು ತಾನು ಮುಖ್ಯಮಂತ್ರಿಯಾಗುತ್ತೇನೆಂದು ಹೇಳಿಲ್ಲ.
ಎರಡೂವರೆ ವರ್ಷ ನಾನು, ಎರಡೂವರೆ ವರ್ಷ ನೀನು ಎಂಬ ಕರಾರು ನಮ್ಮೆದುರು ಮಾಡಿಕೊಂಡಿಲ್ಲ. ಕಾಂಗ್ರೆಸ್ಸಿನಲ್ಲಿ ಶಾಸಕಾಂಗ ನಾಯಕರನ್ನು ತೀರ್ಮಾನ ಮಾಡುವವರು ಶಾಸಕರು ಮತ್ತು ಪಕ್ಷದ ವರಿಷ್ಠರು. ನನ್ನ ಪ್ರಕಾರ ಸಿದ್ದರಾಮಯ್ಯ ಐದು ವರ್ಷಕ್ಕೆ ಆಯ್ಕೆ ಮಾಡಿದ್ದೇವೆ. ಇನ್ನೂ ಎರಡೂವರೆ ವರ್ಷ ಸಿದ್ದರಾಮಯ್ಯ ಶಾಸಕಾಂಗ ನಾಯಕರಾಗುತ್ತಾರೆ. ಅಲ್ಲದೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ನಮ್ಮಲ್ಲಿ ಕೆಲ ಗೊಂದಲ ಇದ್ದಿರುವುದು ನಿಜ. ಮುಖ್ಯಮಂತ್ರಿ ಬದಲಾವಣೆ ಅಧ್ಯಾಯ ಮುಗಿದಿದ್ದು, ಡಿ. 8ರಿಂದ ಅಧಿವೇಶನ ಪ್ರಾರಂಭಗೊಳ್ಳುತ್ತದೆ. ಉಳಿದಿರುವ ಅವಧಿಯಲ್ಲಿ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ.
ಅಭಿವೃದ್ಧಿಗೆ ಹಣಕಾಸಿನ ಕೊರೆತೆ ಇಲ್ಲ. ಜಿಎಸ್‌ಟಿ ಇಳಿಕೆ ಮಾಡಿರುವುದು ನಷ್ಟವಾಗಿದೆ. ಆದರೆ ಬಡವರಿಗೆ ಒಳ್ಳೆಯದಾಗಿದೆ. ಆದರೆ ಹಳೆಯ ಜಿಎಸ್‌ಟಿ ನಿಯಮ ಇದ್ದಿದ್ದರೆ ರಾಜ್ಯಕ್ಕೆ ₹15 ಸಾವಿರ ಕೋಟಿ ಹೆಚ್ಚುವರಿಯಾಗಿ ಬರುತ್ತಿತ್ತು. ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆರ್ಥಿಕ ತೊಂದರೆ ಇಲ್ಲ. ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಆದರೆ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಬಾರದು ಎಂದು ಯಾರೂ ಹೇಳಿಲ್ಲ. ಸಮಯ ಬಂದಾಗ ಆಗುತ್ತಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.