ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ: ಶೋಭಾ ಕರಂದ್ಲಾಜೆ

By Govindaraj S  |  First Published Feb 17, 2024, 8:54 PM IST

ನಾನು ಉಡುಪಿ - ಚಿಕ್ಕಮಗಳೂರು ಬಿಟ್ಟು ಬೇರೆ ಲೋಕಸಭಾ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತೆ ಸ್ಪಷ್ಟಪಡಿಸಿದ್ದಾರೆ. 


ಉಡುಪಿ (ಫೆ.17): ನಾನು ಉಡುಪಿ - ಚಿಕ್ಕಮಗಳೂರು ಬಿಟ್ಟು ಬೇರೆ ಲೋಕಸಭಾ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತೆ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ ಎಂದು ಐದಾರು ಕ್ಷೇತ್ರಗಳ ಹೆಸರು ಕೇಳಿ ಬರುತ್ತಿವೆ. ಆದರೆ ನಾನು ಉಡುಪಿ ಚಿಕ್ಕಮಗಳೂರಿನಿಂದಲೇ ಸ್ಪರ್ಧಿಸುತ್ತೇನೆ. 

ನಾನು ಈ ಜಿಲ್ಲೆಯವಳೂ ಅಲ್ಲ, ನಾನು ಯಾರೂ ಅಂತಾನೇ ಗೊತ್ತಿಲ್ಲದಿದ್ದಾಗಲೂ ಈ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿ ಮಂತ್ರಿಯಾಗುವಂತೆ ಮಾಡಿದ್ದಾರೆ. ಆದ್ದರಿಂದ ನಾನು ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಈ ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ, ಅವುಗಳ ಆಧಾರದಲ್ಲಿಯೇ ನಾನು ಮತ ಕೇಳುತ್ತೇನೆ ಎಂದರು. ಆದರೆ ಪಕ್ಷ ಹೇಳಿದರೆ, ಬೇರೆ ಕ್ಷೇತ್ರಕ್ಕೆ ಹೋಗುವಂತೆ ಸೂಚನೆ ನೀಡಿದರೆ ಅದಕ್ಕೂ ನಾನು ಬದ್ಧಳಿದ್ದೇನೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Latest Videos

undefined

ಈಗ ಪಕ್ಷ ಬಿಟ್ರೇ ಅವರಿಗೇ ನಷ್ಟ: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಕಾಂಗ್ರೆಸ್‌ಗೆ ಹೋಗ್ತಾರೆ, ಯಾರು ಇಲ್ಲಿಯೇ ಇರ್ತಾರೆ, ನನಗೆ ಗೊತ್ತಿಲ್ಲ. ಆದರೆ ಬಿಜೆಪಿಯಿಂದ ಲಾಭ ಪಡೆದು ಈಗ ಬಿಟ್ಟು ಹೋಗ್ತಾರೆ ಅಂದ್ರೆ ಅದರಿಂದ ಅವರಿಗೇನೇ ನಷ್ಟ ಎಂದರು. ಅಧಿಕಾರದಲ್ಲಿದ್ದಾಗ ಪಕ್ಷದಲ್ಲಿರುವುದು, ಅಧಿಕಾರದಲ್ಲಿ ಇಲ್ಲದಿದ್ದಾಗ ಪಕ್ಷ ಬಿಟ್ಟು ಹೋಗುವುದು ಬಿಜೆಪಿ ಕಾರ್ಯಕರ್ತರ ಮನಸ್ಥಿತಿ ಅಲ್ಲ ಎಂದರು. ಪಕ್ಷ ಬಿಟ್ಟು ಹೋಗುವವರಿಗೆ, ಮೋದಿಯಂತಹ ವಿಶ್ವನಾಯಕನನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಅವಕಾಶ ಇದೆ, ಅದಕ್ಕಾಗಿ ಕೆಲಸ ಮಾಡೋಣ ಎಂದು ಕಳಕಳಿಯಿಂದ ವಿನಂತಿಸುತ್ತೇನೆ ಎಂದವರು ಹೇಳಿದರು.

ರೋಗಬಾಧೆಯಿಂದಾಗುವ ಅಡಕೆ ಬೆಳೆಹಾನಿ ಪರಿಹಾರಕ್ಕೆ ಯೋಜನೆಯಿಲ್ಲ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ತುಮಕೂರಿನಿಂದ ಸ್ಪರ್ಧಿಸಲ್ಲ: ತುಮಕೂರು ಲೋಕಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿ, ತುಮಕೂರಿನಿಂದ ಸ್ಪರ್ಧೆ ಮಾಡುವ ಯಾವ ಆಲೋಚನೆಯೂ ತಮಗೆ ಇಲ್ಲ. ಚಿಕ್ಕಮಗಳೂರು ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಹೇಳಿದರು.

click me!