
ಮಡಿಕೇರಿ (ಜೂ.28): ರಾಜ್ಯ ರಾಜಕಾರಣದಲ್ಲಿ ಅಥವಾ ಪಕ್ಷದಲ್ಲಿ ಸೆಪ್ಟೆಂಬರ್ ಕ್ರಾಂತಿ ಆಗುತ್ತದೆ ಎನ್ನುವ ಸಚಿವ ರಾಜಣ್ಣ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಪ್ರತಿಕ್ರಿಯಿಸಿದ್ದು, ಅವರು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ಕಾರಣಕ್ಕೆ ಹೇಳಿದ್ದಾರೆ ಗೊತ್ತಿಲ್ಲ. ಆದರೆ ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ತೊಂದರೆಗಳು ಇಲ್ಲ ಎಂದು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಮುಖ್ಯಮಂತ್ರಿ, ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಇದ್ದಾರೆ. ಯಾರೋ ಹಿರಿಯರು ಸಂದರ್ಭಕ್ಕೆ ಅನುಗುಣವಾಗಿ ಮಾತನಾಡಿರಬಹುದು.
ಅದು ಬಿಟ್ಟರೆ ಕ್ರಾಂತಿ ಆಗುವಂತಹದ್ದು ಅಥವಾ ಹೆಚ್ಚು ಕಡಿಮೆ ಆಗುವುದೆಲ್ಲ ಇಲ್ಲ. ಪಕ್ಷದಲ್ಲಿ ಆಗಲಿ, ಆಡಳಿತದಲ್ಲಿ ಆಗಲಿ, ಏನೇ ಆಗಬೇಕಾದರೂ ಹೈಕಮಾಂಡ್ ಇದೆ, ಪಕ್ಷವಿದೆ. ಹಾಗೆ ನಡೆದುಕೊಳ್ಳುವ ಪದ್ಧತಿ ನಮ್ಮ ಪಕ್ಷದಲ್ಲಿ ಇದೆ. ಅದು ಮೊದಲಿನಿಂದಲೂ ಇದ್ದು, ಹಾಗೆಯೇ ಮುಂದುವರಿಯುತ್ತದೆ ಎಂದರು. ಸಚಿವ ಸಂಪುಟ ಬದಲಾವಣೆ ವಿಷಯ ಕೂಡ ಇಲ್ಲ. ಏನೇ ಆಗಬೇಕಾದರೂ ಮುಖ್ಯಮಂತ್ರಿಗಳು ಅಥವಾ ಕೆಪಿಸಿಸಿ ಅಧ್ಯಕ್ಷರು ಹೇಳಬೇಕು. ಪ್ರಸ್ತುತ ಸಂದರ್ಭದಲ್ಲಿ ಅಂತಹ ಯಾವುದೇ ನಿರ್ಧಾರಗಳು ಇಲ್ಲ ಎಂದು ಹೇಳಿದರು.
ಮಳೆ ತುರ್ತು ನಿರ್ವಹಣೆಗೆ ಹಣದ ಕೊರತೆ ಇಲ್ಲ: ಕೊಡಗು ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆ ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 37 ಕೋಟಿ ರುಪಾಯಿ ಇದೆ. ತಹಸೀಲ್ದಾರ್‌ಗಳ ಖಾತೆಯಲ್ಲೂ 3.5 ಕೋಟಿ ರು. ಇದೆ. ಒಟ್ಟು 40 ಕೋಟಿ ರುಪಾಯಿಯನ್ನು ಮಳೆ ತುರ್ತು ನಿರ್ವಹಣೆಗೆ ನೀಡಲಾಗಿದೆ. ಏನೇ ಪರಿಸ್ಥಿತಿ ಬಂದರು ನಿಭಾಯಿಸಲು ಸೂಚಿಸಲಾಗಿದೆ. ಜೊತೆಗೆ ಎಷ್ಟೇ ಬೇಕಾದರೂ ಅನುದಾನ ಕೊಡಲು ಸರ್ಕಾರ ಸಿದ್ಧವಿದೆ. ಅದನ್ನು ಬಿಡುಗಡೆ ಮಾಡುವದಕ್ಕೂ ಸಿಎಂ ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ. ಹೀಗಾಗಿ ಹಣದ ಕೊರತೆ ಪ್ರಶ್ನೆ ಇಲ್ಲ ಎಂದು ಹೇಳಿದರು.
ಅಧಿಕಾರಿಗಳು ಚುರುಕಾಗಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಬಗೆಹರಿಸಲು ಸೂಚಿಸಲಾಗಿದೆ. ಯಾವುದೇ ಅಧಿಕಾರಿ ಕೇಂದ್ರ ಸ್ಥಾನ ಬಿಡುವಂತಿಲ್ಲ. ಮುಂದಿನ 40 ದಿನ ಅಧಿಕಾರಿಗಳು ಮುಂಜಾಗೃತೆ ಕ್ರಮ ವಹಿಸಬೇಕು. ಅವರವರ ಇಲಾಖೆ ಕೆಲಸಗಳನ್ನು ಮಾಡಬೇಕು. ಜೊತೆಗೆ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಭೇಟಿ ನೀಡಬೇಕು. ಅವುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಕೂಡಲೇ ವರದಿ ನೀಡಬೇಕು ಎಂದು ಎನ್.ಎಸ್.ಬೋಸರಾಜ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.