ನಮ್ಮ ಪಕ್ಷದಲ್ಲೂ ಬಣ ರಾಜಕೀಯ ಇದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೊಡಗಿನ ಮಾಕುಟ್ಟದಲ್ಲಿ ಒಪ್ಪಿಕೊಂಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.10): ನಮ್ಮ ಪಕ್ಷದಲ್ಲೂ ಬಣ ರಾಜಕೀಯ ಇದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೊಡಗಿನ ಮಾಕುಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ಕೊಣನೂರಿನಿಂದ ಮಾಕುಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಮಾಕುಟ್ಟದ ಸಮೀಪ ಅಗಲೀಕರಣಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಡಿಸಿಎಂ ಡಿಕೆಶಿ ಅವರು ಶತ್ರು ಸಂಹಾರ ಯಾಗ ಮಾಡುತ್ತಿರುವುದು ನಿಮ್ಮ ಪಕ್ಷದೊಳಗೂ ಇರುವ ಶತ್ರುಗಳು ನಾಶವಾಗಲಿ ಎಂದೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ. ಬಣ ಕಿತ್ತಾಟ ಯಾರಲ್ಲಿ ಇಲ್ಲ ಹೇಳಿ, ಕಾಂಗ್ರೆಸ್ ನಲ್ಲೂ ಇದೆ ಬಿಜೆಪಿಯಲ್ಲೂ ಇದೆ. ಹಾಗೆ ಜೆಡಿಎಸ್ ನಲ್ಲೂ ಬಣ ರಾಜಕೀಯ ಇದೆ. ಎಲ್ಲಾ ಪಕ್ಷಗಳಲ್ಲೂ ಬಣ ರಾಜಕೀಯ ಇದೆ.
ನಮ್ಮ ಪಕ್ಷದಲ್ಲೂ ಬಣ ರಾಜಕೀಯ ಇದೆ. ಒಂದು ಅಧಿಕಾರ ಇರುವ ಪಕ್ಷ ಎಂದ ಮೇಲೆ ಭಿನ್ನಮತ ಇದ್ದೇ ಇರುತ್ತದೆ ಅಲ್ವಾ.? ಆದರೆ ಅದನ್ನು ವಲಿಷ್ಟರು ಕಾಲಕಾಲಕ್ಕೆ ಸರಿಮಾಡುತ್ತಾ ಹೋಗುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಡಿಸಿಎಂ ಡಿಕೆಶಿ ಅವರು ಶತ್ರು ಸಂಹಾರ ಯಾಗ ಮಾಡುತ್ತಿರುವುದು ಅವರ ಭಕ್ತಿ. ಆದರೆ ರಾಜಕೀಯ ಅಂದ್ರೇನೆ ಒಬ್ಬರಿಗೊಬ್ಬರು ಒಡೆದಾಟ ಮಾಡುತ್ತಾರೆ ಎಂಬ ಮಾತಿದೆ. ಅದರಲ್ಲಿ ಹೊಸದೇನು ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ದಲಿತ ಶಾಸಕರು ಸಚಿವರು ಮಾಡುತ್ತಿದ್ದ ಪ್ರತ್ಯೇಕ ಡಿನ್ನರ್ ಸಭೆ ಬಂದ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಭೆ ಬಂದ್ ಆಗಿಲ್ಲ, ಮುಂದೂಡಲ್ಪಟ್ಟಿದೆ ಅಷ್ಟೇ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರು ನಾನೂ ಕೂಡ ಸಭೆಗೆ ಬರುತ್ತೇನೆ ಎಂದಿದ್ದಾರೆ. ಬಹುಷಃ 13 ನೇ ತಾರೀಖಿನಂದು ಸಭೆಗೆ ಬರುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿ ಗೊಂದಲ ಇದೆಯಾ?: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಅವರು ಸಭೆಗೆ ಬರುತ್ತೇನೆ ಎಂದಿದ್ರಿಂದ ಸಭೆ ಮುಂದಕ್ಕೆ ಹೋಗಿದೆ ಅಷ್ಟೇ. ಅವರು ಅಕಸ್ಮಾತ್ ಬರಲಿಲ್ಲ ಎಂದೆ ಮುಂದೆ ಎಂದಾದರೂ ಸಭೆ ನಡೆಯಲಿದೆ ಎಂದು ಹೇಳುವ ಮೂಲಕ ದಲಿತ ಶಾಸಕರು, ಸಚಿವರು ಎಲ್ಲರೂ ಪ್ರತ್ಯೇಕವಾಗಿ ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿ ಅವರ ವಿರೋಧ ಏನು ಇಲ್ಲ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ಅಂಬೇಡ್ಕರ್ ಸಮಾವೇಶ ಮಾಡುತ್ತಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ಇದು ಒಳ್ಳೆಯ ಕೆಲಸ. ಒಳ್ಳೆಯ ಕೆಲಸವನ್ನು ಮಾಡುವುದಕ್ಕೆ ಯಾರಾದರೇನು ಎಂದು ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿಯ ಬೂತ್ ಮಟ್ಟದ ಅಂಬೇಡ್ಕರ್ ಸಮಾವೇಶಕ್ಕೆ ಸಹಮತ ಸೂಚಿಸಿದ್ದಾರೆ.
ನಾವು ಮಾಡುವ ಒಳ್ಳೆಯ ಕೆಲಸವನ್ನು ಅವರೂ ಮಾಡುವುದಾದರೆ ಮಾಡಲಿ. ಸಂವಿಧಾನವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುವುದರಲ್ಲಿ ತಪ್ಪೇನಿಲ್ಲ. ಸಂವಿಧಾನದ ಮಹತ್ವ, ಪ್ರಾಮುಖ್ಯತೆಯನ್ನು ತಿಳಿಸುವ ಕೆಲಸ ಮಾಡುವುದರಲ್ಲಿ ತಪ್ಪಿಲ್ಲ. ಅವರು ನಾಟಕೀಯಕ್ಕಾದರೂ ಮಾಡಲಿ, ಇಲ್ಲ ಪ್ರಾಮಾಣಿಕವಾಗಿಯಾದರೂ ಮಾಡಲಿ. ಒಳ್ಳೆಯ ಕೆಲಸ ಮಾಡುವುದಾದರೆ ಮಾಡಲಿ ಬಿಡಿ ಎಂದಿದ್ದಾರೆ. ಅಲ್ಲದೆ ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆಯಿಂದ ಏರ್ ಗನ್ ತರಬೇತಿ ನೀಡಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ಪೊಲೀಸ್ ಇಲಾಖೆಯಿಂದ ತನಿಖೆ ನಡೆಸುತ್ತಿದೆ. ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ತನಿಖಾ ವರದಿ ಬಂದ ಬಳಿಕ ಕ್ರಮ ಆಗಲಿದೆ ಎಂದಿದ್ದಾರೆ.
ಡಿನ್ನರ್ ಪಾರ್ಟಿ ಸಿಎಂ ಖುರ್ಚಿಗಲ್ಲ, ಬಿಜೆಪಿಗೆ ಕೆಲಸ ಇಲ್ಲ: ಸತೀಶ ಜಾರಕಿಹೊಳಿ
ಪೊಲೀಸ್ ಇಲಾಖೆ, ಸರ್ಕಾರ ಇದೆ, ಅದರ ಬಗ್ಗೆ ಗಮನ ಹರಿಸುತ್ತೇವೆ ಎಂದ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇದಕ್ಕೂ ಮೊದಲು ಕೊಣನೂರು ಮಾಕುಟ್ಟ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಅಗಲೀಕರಣ ಕಾಮಗಾರಿಗೆ ಕೊಡಗಿನ ಮಾಕುಟ್ಟದ ಸಮೀಪದ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು 6 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಮಾಡಲಾಗುತ್ತಿದೆ. ಇದುವರೆಗೆ ವಿರಾಜಪೇಟೆ ಕ್ಷೇತ್ರಕ್ಕೆ 60 ಕೋಟಿ ರೂಪಾಯಿ ಕೊಡಲಾಗಿದ್ದು, ಸಾಕಷ್ಟು ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಮುಂದೆಯೂ ಇನ್ನೂ ಸಾಕಷ್ಟು ಅನುದಾನ ನೀಡಲಾಗುವುದು ಎಂದಿದ್ದಾರೆ.