ವಿಧಾನ ಪರಿಷತ್‌ನಲ್ಲಿ ಸದಸ್ಯರ ಆಸನಗಳು ಅದಲು ಬದಲು: ಮೊದಲ ದಿನ ಸದಸ್ಯರ ಗೈರು

Published : Jul 04, 2023, 02:20 AM IST
ವಿಧಾನ ಪರಿಷತ್‌ನಲ್ಲಿ ಸದಸ್ಯರ ಆಸನಗಳು ಅದಲು ಬದಲು: ಮೊದಲ ದಿನ ಸದಸ್ಯರ ಗೈರು

ಸಾರಾಂಶ

ವಿಧಾನಸಭೆ ಚುನಾವಣೆಯ ನಂತರ ಆಡಳಿತ ಮತ್ತು ಪ್ರತಿಪಕ್ಷದ ಸ್ಥಾನಗಳು ಅದಲು ಬದಲಾಗುವುದು ಸಹಜ. ಸ್ವಾರಸ್ಯಕರವೆಂದರೆ ಮೇಲ್ಮನೆಯಲ್ಲಿ ಪ್ರತಿಪಕ್ಷದಲ್ಲಿದ್ದಾಗ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದವರು ಈಗ ಆಡಳಿತ ಪಕ್ಷದ ಕೊನೆಯ ಸಾಲಿಗೆ ‘ಹಿಂಬಡ್ತಿ’ ಪಡೆದಿದ್ದಾರೆ.

ವಿಧಾನ ಪರಿಷತ್‌ (ಜು.04): ವಿಧಾನಸಭೆ ಚುನಾವಣೆಯ ನಂತರ ಆಡಳಿತ ಮತ್ತು ಪ್ರತಿಪಕ್ಷದ ಸ್ಥಾನಗಳು ಅದಲು ಬದಲಾಗುವುದು ಸಹಜ. ಸ್ವಾರಸ್ಯಕರವೆಂದರೆ ಮೇಲ್ಮನೆಯಲ್ಲಿ ಪ್ರತಿಪಕ್ಷದಲ್ಲಿದ್ದಾಗ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದವರು ಈಗ ಆಡಳಿತ ಪಕ್ಷದ ಕೊನೆಯ ಸಾಲಿಗೆ ‘ಹಿಂಬಡ್ತಿ’ ಪಡೆದಿದ್ದಾರೆ. ಅದೇ ರೀತಿ ಆಡಳಿತ ಪಕ್ಷದಲ್ಲಿದ್ದಾಗ ಎರಡು-ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದವರು ಈಗ ಪ್ರತಿಪಕ್ಷದಲ್ಲಿ ‘ಮುಂಬಡ್ತಿ’ ಪಡೆದು ಮೊದಲ ಇಲ್ಲವೇ ಎರಡನೇ ಸಾಲು ಅಲಂಕರಿಸಿದ್ದಾರೆ. ಹೊಸ ಸರ್ಕಾರ ಬಂದ ನಂತರ ನಡೆದ ವಿಧಾನ ಪರಿಷತ್ತಿನ ಅಧಿವೇಶನದ ಮೊದಲ ದಿನವಾದ ಸೋಮವಾರದಂದು ಕಂಡು ಬಂದ ಚಿತ್ರವಿದು. 

ಪ್ರತಿಪಕ್ಷದ ನಾಯಕರಾಗಿ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಿ.ಕೆ.ಹರಿಪ್ರಸಾದ್‌ ಈಗ ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತುಕೊಂಡಿದ್ದರು. ಲಕ್ಷ್ಮಣ ಸವದಿ ಕುಳಿತುಕೊಳ್ಳುತ್ತಿದ್ದ ಸ್ಥಾನದಲ್ಲಿ ಜಗದೀಶ್‌ ಶೆಟ್ಟರ್‌ ಆಸೀನರಾಗಿದ್ದರು. ಇನ್ನೂ ಬಿಜೆಪಿ ಸರ್ಕಾರದಲ್ಲಿ ಸಭಾನಾಯಕರಾಗಿ ಮೊದಲ ಸಾಲಿನಲ್ಲಿದ್ದ ಕೋಟ ಶ್ರೀನಿವಾಸ ಪೂಜಾರಿ ಇಂದು ಮೊದಲ ಸಾಲಿನ ಕೊನೆಯ ಆಸನದಲ್ಲಿ ಕುಳಿತುಕೊಂಡಿದ್ದರು. ಅದೇ ರೀತಿ ಆಡಳಿತ ಪಕ್ಷದಲ್ಲಿದ್ದಾಗ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಿಜೆಪಿಯ ಶಶೀಲ್‌ ನಮೋಶಿ ಈಗ ಮುಂಬಡ್ತಿ ಪಡೆದು ಮೊದಲ ಸಾಲಿಗೆ ಬಂದಿದ್ದಾರೆ. ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಜೆಡಿಎಸ್‌ನ ಟಿ.ಎ. ಶರವಣ ಅವರು ಈಗ ಮೊದಲ ಸಾಲಿಗೆ ಜಿಗಿದಿದ್ದಾರೆ. ಇದೇ ರೀತಿ ಅನೇಕ ಸದಸ್ಯರು ಮೂರನೇ ಸಾಲಿನಿಂದ ಎರಡನೇ ಸಾಲಿಗೆ ಬಡ್ತಿ ಪಡೆದಿದ್ದಾರೆ.

ಆಸ್ಪತ್ರೆ ನಿರ್ವಹಣೆಯಲ್ಲಿ ಆಡಳಿತ ಮಂಡಳಿ ವಿಫಲ: ಸಚಿವ ಚಲುವರಾಯಸ್ವಾಮಿ ಅಸಮಾಧಾನ

ಬಾರದ ಸದಸ್ಯರು: ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣದ ಪ್ರತಿ ಮಂಡನೆ ಹಾಗೂ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕಲಾಪ ಮಾತ್ರ ಇದ್ದ ಕಾರಣ ಅನೇಕ ಸದಸ್ಯರು ಕಲಾಪಕ್ಕೆ ಹಾಜರು ಇರಲಿಲ್ಲ. ಕಲಾಪ ಆರಂಭಕ್ಕೂ ಮುನ್ನ ಸದನಕ್ಕೆ ಬಂದ ಸದಸ್ಯರಿಗೆ ಸಚಿವಾಲಯದ ಅಧಿಕಾರಿಗಳು ಮೀಸಲಿಟ್ಟಆಸನಗಳ ಸಂಖ್ಯೆ ತಿಳಿಸುತ್ತಿದ್ದರು. ಸಚಿವ ಎನ್‌.ಎಸ್‌. ಬೋಸರಾಜು ಹಾಗೂ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಬಳಿ ಹೋಗಿ ಕೈ ಕುಲುಕಿ ಶುಭಾಶಯ ಹೇಳಿದರು.

ನೆಕ್ಕುಂದಿ ಕೆರೆ ಅವ್ಯವಸ್ಥೆ: ಮೀನುಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವ ಸುಧಾಕರ್‌ ಗರಂ

ಶೆಟ್ಟರ್‌ ಪ್ರವೇಶ: ಪರಿಷತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿ.ಕೆ. ಹರಿಪ್ರಸಾದ್‌ ಅವರ ಜೊತೆ ಸದನ ಪ್ರವೇಶಿಸಿದ ಜಗದೀಶ್‌ ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ನ ಅನೇಕ ಹಿರಿ-ಕಿರಿಯ ಸದಸ್ಯರು ಶುಭಾಶಯ ಸಲ್ಲಿಸಿದರು. ಪ್ರತಿಪಕ್ಷದಲ್ಲಿ ಕುಳಿತಿದ್ದು ಒಂದಿಬ್ಬರು ಸದಸ್ಯರು ಅಲ್ಲಿಂದಲೇ ಕೈ ಮುಗಿದಿದ್ದು ಕಂಡು ಬಂದಿತು. ಉಳಿದಂತೆ ಬೇರೆ ಯಾವ ಸದಸ್ಯರು ಅವರ ಬಳಿ ಹೋಗದೇ ದೂರ ಉಳಿದರು. ಕಲಾಪ ಆರಂಭಗೊಂಡ ಕೆಲ ನಿಮಿಷಗಳ ಕಾಲ ಶೆಟ್ಟರ್‌ ಸದನದಿಂದ ಹೊರ ನಡೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌