
ವಿಧಾನಸಭೆ (ಮಾ.25): ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಆಸ್ಪತ್ರೆಗಳಿಗೂ (Hospitals) ಒಂದೇ ಮಾದರಿಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಲಾಗುತ್ತಿದೆ. ಈ ನಿಯಮ ರೂಪುಗೊಂಡ ಬಳಿಕ ಆಸ್ಪತ್ರೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ (Dr K Sudhakar) ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕಾಂಗ್ರೆಸ್ (Congress) ಸದಸ್ಯ ಪ್ರಿಯಾಂಕ ಖರ್ಗೆ (Priyank Kharge), ಕಲಬುರಗಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ 88 ಹುದ್ದೆ ಮಂಜೂರಾಗಿದ್ದರೆ 47 ಹುದ್ದೆಗಳು ಖಾಲಿ ಇವೆ. ಮಂಜೂರಾತಿ ಹುದ್ದೆಗಳಿಗಿಂತ ಶೇ.50 ರಷ್ಟುಹೆಚ್ಚು ಹುದ್ದೆಗಳು ಖಾಲಿ ಇವೆ. ರೇಡಿಯಾಲಜಿಸ್ಟ್‌ಗಳಿಗೆ ಸಂದರ್ಶನ ನಡೆದು ಒಂದೂವರೆ ವರ್ಷ ಕಳೆದರೂ ಸಂದರ್ಶನದ ಫಲಿತಾಂಶ ನೀಡಿಲ್ಲ. ಕಳೆದ ಮೂರು ವರ್ಷದಿಂದ ಒಬ್ಬರನ್ನೂ ನೇಮಕ ಮಾಡಿಲ್ಲ. ಇದರಿಂದ ಇಷ್ಟುದೊಡ್ಡ ಮೂಲಭೂತ ಸೌಕರ್ಯ ಇದ್ದರೂ ಪ್ರಾಥಮಿಕ ಚಿಕಿತ್ಸಾ ಕೇಂದ್ರವಾಗಿ ಕೆಲಸ ಮಾಡುವಂತಾಗಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಡಾ.ಕೆ. ಸುಧಾಕರ್, 88 ಕಾಯಂ ಮಂಜೂರಾತಿ ಹುದ್ದೆಗೆ 47 ಹುದ್ದೆ ಖಾಲಿ ಇರುವುದು ಸತ್ಯ. ಆದರೆ ಹೊರಗುತ್ತಿಗೆ ಆಧಾರದ ಮೇಲೆ 55 ಹುದ್ದೆ ಭರ್ತಿ ಮಾಡಲಾಗಿದೆ. ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಇದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲಾ ರೀತಿಯ ಸೇವೆ ಒದಗಿಸುವಂತೆ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿ ಬಜೆಟ್‌ನಲ್ಲಿ ತಿಳಿಸಿದ್ದೇವೆ.
Covid 4th Wave: ಕರ್ನಾಟಕದಲ್ಲಿ 4ನೇ ಅಲೆ ಬಗ್ಗೆ ಸಚಿವ ಸುಧಾಕರ್ ಹೇಳಿದ್ದಿಷ್ಟು
ಇನ್ನು ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಮುಂದಾಗಿರುವುದರಿಂದ ರೇಡಿಯಾಲಜಿಸ್ಟ್ ಸೇರಿ ವಿವಿಧ ಹುದ್ದೆ ನೇಮಕಕ್ಕೆ ವಿಳಂಬವಾಗಿದೆ. ಜಯದೇವ, ಕಿದ್ವಾಯಿ ಆಸ್ಪತ್ರೆ ಸೇರಿದಂತೆ ಒಂದೊಂದು ಆಸ್ಪತ್ರೆಗೆ ಒಂದೊಂದು ರೀತಿಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮಾಡಿಕೊಳ್ಳಲಾಗಿದೆ. ಇವುಗಳನ್ನು ಇಡೀ ಇಲಾಖೆಗೆ ಒಂದೇ ರೀತಿಯ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವೈದ್ಯಕೀಯ ಕೋರ್ಸ್ ಶುಲ್ಕ ಕಡಿತಗೊಳಿಸಲು ಚಿಂತನೆ: ವೈದ್ಯಕೀಯ ಶಿಕ್ಷಣ ಶುಲ್ಕ ಕಡಿತಗೊಳಿಸುವುದರ ಜೊತೆಗೆ ಯುದ್ಧ ಬಾಧಿತ ಉಕ್ರೇನ್‌ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೋಮವಾರ ವಿಧಾನಪರಿಷತ್ ನಲ್ಲಿ ತಿಳಿಸಿದರು.
ನವೀನ್ ಜ್ಞಾನಗೌಡರ ಮೃತದೇಹವನ್ನು ಉಕ್ರೇನ್‌ನಿಂದ ತುರ್ತಾಗಿ ಮರಳಿ ತರುವುದು ಮತ್ತು ಭಾರತಕ್ಕೆ ಹಿಂದಿರುಗಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅಗತ್ಯತೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಸಚಿವರು, ವೈದ್ಯಕೀಯ ಶಿಕ್ಷಣ ಶುಲ್ಕವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರಾಷ್ಟ್ರೀಯ ವೈದ್ಯಕೀಯ ಆಯೋಗದೊಂದಿಗೆ ಚರ್ಚಿಸಿದ್ದಾರೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದಾಗಿ ತಿಳಿಸಿದರು.
Jan Aushadhi Kendra: ಶೀಘ್ರ 500 ಹೊಸ ಜನೌಷಧಿ ಕೇಂದ್ರ: ಸಚಿವ ಸುಧಾಕರ್
ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವಲ್ಲಿ ಕೇಂದ್ರ ಸರ್ಕಾರದ ಪ್ರಯತ್ನ ನೆರವಾಗಿದೆ. ಉಕ್ರೇನ್ ನಲ್ಲಿರುವ ಇತರ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಕೂಡಾ ಭಾರತ ಸರ್ಕಾರದ ಸಹಾಯದಿಂದ ಬರುತ್ತಿರುವುದಾಗಿ ಡಾ. ಸುಧಾಕರ್ ಸದನದಲ್ಲಿ ಹೇಳಿದರು. ನವೀನ್ ಅವರ ಮೃತದೇಹವನ್ನು ಆದಷ್ಟು ಬೇಗ ವಾಪಸ್ ತರಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸದಸ್ಯರು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.