ಸಹಕಾರಿ ಕ್ಷೇತ್ರ ಹಾಳಾಗಲು ಹಿಂದಿನ ಸರ್ಕಾರವೇ ಕಾರಣ: ಶಾಸಕ ಜಿ.ಟಿ.ದೇವೇಗೌಡ ಆರೋಪ

By Kannadaprabha News  |  First Published Feb 11, 2024, 1:01 PM IST

ಹಿಂದಿನ ಸರ್ಕಾರವೇ ಸಹಕಾರಿ ಕ್ಷೇತ್ರವನ್ನು ಹಾಳು ಮಾಡಲು ಯತ್ನಿಸಿದ್ದು, ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಹಕಾರ ಸಚಿವ ಅಮಿತ್ ಶಾ ಬಂದ ನಂತರ ಚೇತರಿಕೆ ಕಾಣುತ್ತಿದೆ ಎಂದು ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ ಆರೋಪಿಸಿದರು. 


ಹುಬ್ಬಳ್ಳಿ (ಫೆ.11): ಹಿಂದಿನ ಸರ್ಕಾರವೇ ಸಹಕಾರಿ ಕ್ಷೇತ್ರವನ್ನು ಹಾಳು ಮಾಡಲು ಯತ್ನಿಸಿದ್ದು, ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಹಕಾರ ಸಚಿವ ಅಮಿತ್ ಶಾ ಬಂದ ನಂತರ ಚೇತರಿಕೆ ಕಾಣುತ್ತಿದೆ ಎಂದು ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ ಆರೋಪಿಸಿದರು. ಇಲ್ಲಿನ ಅಮರಗೋಳ ಎಪಿಎಂಸಿ ಬಳಿಯ ವಿದ್ಯಾಧಿರಾಜ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಕಾರ ಭಾರತಿ ಕರ್ನಾಟಕ ಹಾಗೂ ಅಖಿಲ ಭಾರತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ (ಪಿಎಸಿಎಸ್) ರಾಷ್ಟ್ರೀಯ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

ಇಂದಿಗೂ ಕೆಲವರು ಈ ಸಹಕಾರಿ ಕ್ಷೇತ್ರದಿಂದಲೇ ರಾಜಕೀಯ ನೆಲೆ ಕಂಡುಕೊಂಡಿದ್ದಾರೆ. ಆದರೆ, ಇದರ ಏಳ್ಗೆಗೆ ಧ್ವನಿ ಎತ್ತುವ ಕಾರ್ಯ ಮಾಡದಿರುವುದು ನೋವಿನ ಸಂಗತಿ. ಕೇಂದ್ರ ಸರ್ಕಾರದಲ್ಲಿ ಪ್ರಥಮ ಬಾರಿಗೆ ಸಹಕಾರಿ ಕ್ಷೇತ್ರದ ಖಾತೆ ತೆರೆದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು. ಕೇಂದ್ರ ಸಹಕಾರಿ ಖಾತೆಯ ಸಚಿವ ಅಮೀತ್ ಶಾ ಅವರು ಎಲ್ಲ ಸಹಕಾರಿ ಸಂಘಗಳನ್ನು ಡಿಜಿಟಲೀಕರಣಗೊಳಿಸುವ ಜತೆಗೆ ಅನೇಕ ಯೋಜನೆ ಜಾರಿಗೆ ತಂದು ಸಹಕಾರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪಕ್ಷಾತೀತ, ಜಾತ್ಯಾತೀತ ಹಾಗೂ ಸಮಾನತೆಯ ತತ್ವದಲ್ಲಿ ಮುನ್ನಡೆಯುತ್ತಿರುವ ಕ್ಷೇತ್ರವೇ ಈ ಸಹಕಾರ ಕ್ಷೇತ್ರ ಎಂದರು.

Tap to resize

Latest Videos

ಜೆಡಿಎಸ್‌ ಬಿಡಲು ನಾಯಕರ ನಡವಳಿಕೆ ಕಾರಣ: ಸಚಿವ ಎನ್.ಚಲುವರಾಯಸ್ವಾಮಿ

ಸರ್ಕಾರದ ಹಸ್ತಕ್ಷೇಪ: ಕೃಷಿ ಕ್ಷೇತ್ರ ಮತ್ತು ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಹಿರಿದಾಗಿದ್ದು, ಇವುಗಳನ್ನು ಉಳಿಸಿ-ಬೆಳೆಸುವ ಕೆಲಸವನ್ನು ಸಂಘದ ಸರ್ವ ಸದಸ್ಯರು ಮತ್ತು ಪದಾಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು. ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಅನೇಕ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ರೈತರ ಕಣ್ಣೀರು ಒರೆಸುವ ಕೆಲಸವನ್ನು ಕೃಷಿ ಪತ್ತಿನ ಸಹಕಾರಿ ಸಂಘ ಮಾಡುತ್ತಿವೆ. ಆದರೆ, ಕೆಲವೊಮ್ಮೆ ಸರ್ಕಾರದ ಹಸ್ತಕ್ಷೇಪದಿಂದ ಸಹಕಾರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಹಕಾರಿಗಳಿಂದಲೇ ನನ್ನ ಗೆಲುವು: ಇಂದಿನ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಗಟ್ಟಿಯಾಗಿ ಉಳಿದಿರುವ ಕ್ಷೇತ್ರವೆಂದರೆ ಅದು ಸಹಕಾರಿ ಕ್ಷೇತ್ರ. ಅನೇಕರಿಗೆ ಸಹಕಾರಿ ಸಂಘಗಳೇ ಗೌರವ ಮತ್ತು ನಾಯಕತ್ವ ಗುಣವನ್ನು ಬೆಳೆಸಿವೆ. ನಾನು ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು 36 ಸಾವಿರ ಮತಗಳ ಅಂತರದಿಂದ ಸೋಲಿಸುವಾಗ ನನ್ನ ಬಳಿ ಹಣ ಇರಲಿಲ್ಲ. ಇದೇ ಸಹಕಾರಿ ಸಂಘ ಹಾಗೂ ಜನರು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಇಂದು ರೈತರು ಉಳಿದಿದ್ದಾರೆ ಎಂದರೆ, ಅದಕ್ಕೆ ಸಹಕಾರಿ ಕ್ಷೇತ್ರದ ಕೊಡುಗೆಯಾದ ಹೈನುಗಾರಿಕೆಯೇ ಪ್ರಮುಖ ಕಾರಣ. ಸಂಘದ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಸಂಘದ ಕಾರ್ಯದರ್ಶಿಗಳು, ನಿರ್ದೇಶಕರು ಹಾಗೂ ಸದಸ್ಯರು ಮಾಡಬೇಕಿದೆ. ಈ ರಾಷ್ಟ್ರೀಯ ಅಧಿವೇಶನ ಸಹಕಾರ ಕ್ಷೇತ್ರದ ಪುನರುತ್ಥಾನಕ್ಕೆ ಸ್ಫೂರ್ತಿಯಾಗಲಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಸಹಕಾರ ಭಾರತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉದಯ ಜೋಷಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹಕಾರಿ ಸಂಘಕ್ಕೆ ಒಂದು ಪ್ರತ್ಯೇಕ ಇಲಾಖೆ ಮಾಡಿರುವುದು ಹೆಮ್ಮೆಯ ಸಂಗತಿ. ಸಮಾಜದ ಎಲ್ಲ ದುರ್ಬಲರು, ದಲಿತರು ಸೇರಿದಂತೆ ಎಲ್ಲರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಸಹಕಾರ ಕ್ಷೇತ್ರದ ಪ್ರಮುಖ ಧ್ಯೇಯವಾಗಿದೆ ಎಂದರು. ಅದಕ್ಕೂ ಮುನ್ನ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ದೀನಾನಾಥ ಠಾಕೂರ್ ಧ್ವಜಾರೋಹಣ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ಕರ್ನಾಟಕ ಅಧ್ಯಕ್ಷ ರಾಜಶೇಖರ ಶೀಲವಂತ ಮಾತನಾಡಿದರು.

ಬಿಜೆಪಿ ಪಕ್ಷ ಪ್ರಚಾರಕಷ್ಟೇ, ಕಾಂಗ್ರೆಸ್ ಕೆಲಸ ಮಾಡುವ ಪಕ್ಷ: ಸಚಿವ ಡಿ.ಸುಧಾಕರ್

ಇಂದು ಸಮಾರೋಪ: ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಬಳಿಯ ವಿದ್ಯಾಧಿರಾಜ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಕಾರ ಭಾರತಿ ಕರ್ನಾಟಕ ಹಾಗೂ ಅಖಿಲ ಭಾರತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ (ಪಿಎಸಿಎಸ್) ರಾಷ್ಟ್ರೀಯ ಅಧಿವೇಶನದ ಸಮಾರೋಪ ಸಮಾರಂಭ ಫೆ. 10ರಂದು ಬೆಳಗ್ಗೆ 10ಗಂಟೆಗೆ ನಡೆಯಲಿದೆ. ಕೇಂದ್ರ ಸರ್ಕಾರದ ಸಹಕಾರಿ ಇಲಾಖೆ ರಾಜ್ಯ ಸಚಿವ ಬಿ.ಎಲ್‌. ವರ್ಮಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಪಾಲ್ಗೊಂಡು ಮಾತನಾಡುವರು. ಅತಿಥಿಗಳಾಗಿ ಸಹಕಾರ ಭಾರತಿ ರಾಷ್ಟ್ರೀಯ ಸಂರಕ್ಷಕ್‌ ರಮೇಶ ವೈದ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉದಯ ಜೋಷಿ, ಯೋಗೇಂದ್ರ ಕುಮಾರ, ರಾಜದತ್ತ ಪಾಂಡೆ, ರಾಜಶೇಖರ ಶೀಲವಂತ, ಮೋಹನದಾಸ ನಾಯಕ್‌, ಮಲ್ಲಿಕಾರ್ಜುನ ಹೊರಕೇರಿ ಪಾಲ್ಗೊಳ್ಳುವರು. ಪಿಎಸಿಎದ ರಾಜ್ಯ ಸಂಚಾಲಕ ದೀನಾನಾಥ ಠಾಕೂರ್‌ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

click me!