ಮುಸ್ಲಿಮರ ದ್ವೇಷಿಸುತ್ತಿದ್ದ ಪಕ್ಷವೇ ಇಂದು ನಮ್ಮ ಬಗ್ಗೆ ಮೃದು ಧೋರಣೆ ಅನುಸರಿಸುವಂತೆ ಸೂಚನೆ ನೀಡುತ್ತಿರುವುದು ಮುಸ್ಲಿಂ ಮತಗಳ ಶಕ್ತಿ ಏನೆಂಬುದಕ್ಕೆ ಸಾಕ್ಷಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು.
ದಾವಣಗೆರೆ (ಫೆ.4) : ಮುಸ್ಲಿಮರ ದ್ವೇಷಿಸುತ್ತಿದ್ದ ಪಕ್ಷವೇ ಇಂದು ನಮ್ಮ ಬಗ್ಗೆ ಮೃದು ಧೋರಣೆ ಅನುಸರಿಸುವಂತೆ ಸೂಚನೆ ನೀಡುತ್ತಿರುವುದು ಮುಸ್ಲಿಂ ಮತಗಳ ಶಕ್ತಿ ಏನೆಂಬುದಕ್ಕೆ ಸಾಕ್ಷಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು.
ಇಲ್ಲಿನ ಅಖ್ತರ್ ರಜಾ ವೃತ್ತದ ರಿಂಗ್ ರಸ್ತೆಯಲ್ಲಿರುವ ಜೆಡಿಎಸ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ನಡೆದ ಮುಸ್ಲಿಂ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿ, ಮುಸ್ಲಿಂ ಮತಗಳ ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಾಗುತ್ತಿದೆ ಎಂದರು. ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಮರೇ ನಿರ್ಣಾಯಕರು ಎಂಬ ಸತ್ಯ ನೀವ್ಯಾರೂ ಮರೆಯಬಾರದು. ಆದರೂ, ನಮ್ಮ ಸಮುದಾಯಕ್ಕೆ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನಗಳು ಇಂದಿಗೂ ಲಭಿಸಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಸಲ್ಮಾನರು ಬೇರೆ ಬೇರೆ ಸಮಾಜಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಕ್ಷೇತ್ರಗಳಲ್ಲಿ ಜಯ ಸಾಧಿಸಬೇಕಿದೆ ಎಂದರು.
ಜನರ ಸಮಸ್ಯೆ ಅರಿಯಲು ಜೆಡಿಎಸ್ ಪಂಚರತ್ನ ಯಾತ್ರೆ: ಸಿಎಂ ಇಬ್ರಾಹಿಂ
ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಮಾಜಿ ಪ್ರಧಾನಿ ಎಚ್.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಮಾಡಿದ್ದಾರೆ. ಇದು ನಮ್ಮ ಸಮಾಜದ ಧಾರ್ಮಿಕ ಗುರುಗಳು, ಬುದ್ಧಿಜೀವಿಗಳು, ಚಿಂತಕರು, ಸಮಾನ ಮನಸ್ಕರು, ಸಾಮಾನ್ಯ ಮುಸ್ಲಿಮರು ಇಂದು ತೀರ್ಮಾನ ಮಾಡಬೇಕಾದ ಅನಿವಾರ್ಯತೆ, ಅಗತ್ಯತೆಯೂ ಇದೆ ಎಂದು ವಿವರಿಸಿದರು.
ಒಮ್ಮತದ ತೀರ್ಮಾನದಿಂದ ಗೆಲುವು ಸಾಧ್ಯ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಸಮುದಾಯಗಳ ಜೊತೆಗೆ ಬೆರೆತು, ಮುಸ್ಲಿಮರು ಒಮ್ಮತದ ತೀರ್ಮಾನಕ್ಕೆ ಬಂದರೆ ಜೆಡಿಎಸ್ ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ಗೆಲುವು ಸಾಧ್ಯವಾಗಲಿದೆ. ಶೀಘ್ರವೇ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇಂತಹದ್ದೊಂದು ಬದಲಾವಣೆ ಬರಬೇಕೆಂದರೆ ಸಮಸ್ತ ಮುಸ್ಲಿಂ ಬಾಂಧವರು ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸಿ, ಜೆಡಿಎಸ್ ಗೆಲುವಿಗೆ ಶ್ರಮಿಸಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್‌ಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ಮಾತನಾಡಿ, ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರು, ಕಾರ್ಮಿಕರು, ಜನ ಸಾಮಾನ್ಯರು, ಶೋಷಿತರು, ದೀನ ದಲಿತರು, ಅಲ್ಪಸಂಖ್ಯಾತರು ಹೀಗೆ ಎಲ್ಲಾ ಜಾತಿ, ಸಮುದಾಯಗಳ ಜನರ ಹಿತ ಕಾಯುವ ಕೆಲಸ ಮಾಡಲಾಗಿದೆ. ರಾಜ್ಯದಲ್ಲಿ ಕೈಗೊಂಡಿರುವ ಪಂಚರತ್ನ ರಥಯಾತ್ರೆಗೆ ರಾಜ್ಯವ್ಯಾಪಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊನ್ನೆ 2 ದಿನಗಳ ಕಾಲ ಹರಿಹರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸಾರಥ್ಯದ ಪಂಚರತ್ನ ರಥಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿರುವುದೇ ಇದಕ್ಕೆ ಸಾಕ್ಷಿ ಎಂದರು.
ಸಮುದಾಯದ ಧಾರ್ಮಿಕ ಗುರುಗಳು, ಪಕ್ಷದ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್, ಮುಖಂಡರಾದ ಶಹನವಾಜ್ ಖಾನ್, ವಕೀಲ ನಜೀರ್ ಅಹಮ್ಮದ್, ಇಂಜಿನಿಯರ್ ಸಮೀರ್, ಶಫೀವುಲ್ಲಾ, ಯು.ಎಂ.ಮನ್ಸೂರ್ ಅಲಿ, ಜಮೀರ್ ಅಹಮ್ಮದ್, ಅಯ್ಯಪ್ಪ, ದಾದು, ನಯಾಜ್ ಖಾನ್, ಫಾರೂಕ್, ಶೇಕ್ ಅಹಮ್ಮದ್, ಸಮಾಜದ ಬುದ್ಧಿ ಜೀವಿಗಳು, ಚಿಂತಕರು, ಉದ್ಯಮಿಗಳು, ಸಾರ್ವಜನಿಕರಿದ್ದರು.
ಸಿಎಂ ಅಭ್ಯರ್ಥಿ ಘೋಷಿಸಿದರೆ ಬಿಜೆಪಿ, ಕೈ ಹೋಳು: ಸಿ.ಎಂ.ಇಬ್ರಾಹಿಂ
ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬಲು ರಾಜಕೀಯದಲ್ಲಿದ್ದೇನೆ
ನಾನು ಯಾರಿಗೆ ಉಪಕಾರ ಮಾಡಿದ್ದೆನೋ ಅಂತಹವರಿಂದಲೇ ನನಗೆ ಮೋಸವಾಗಿದೆ. ನಾನು ರಾಜಕೀಯದಲ್ಲಿರುವುದೇ ನನ್ನ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಲು. ಯಾವ ಪಕ್ಷ ಮುಸ್ಲಿಮರಿಗೆ ದ್ವೇಷ ಮಾಡುತ್ತಿತ್ತೋ ಅಂತಹ ಪಕ್ಷವೇ ಈಗ ಮುಸ್ಲಿಮರ ಬಗ್ಗೆ ಮೃದುಧೋರಣೆ ತೋರುವಂತೆ ತನ್ನ ಪಕ್ಷದವರಿಗೆ ಸೂಚನೆ ನೀಡುತ್ತಿರುವುದು ಮುಸ್ಲಿಮರ ಮತಗಳ ಶಕ್ತಿ ಏನೆಂಬುದು ಹೇಳುತ್ತಿದೆ. ಸೂಫಿ ಸಂತರ ಜೀವನ ಬಹಳ ಸರಳ, ಅಂತಹವರ ವಿಚಾರಧಾರೆಗಳ ಸಮಾಜಗಳು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕು.
- ಸಿ.ಎಂ.ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ