ಹಳೆ ದೇಶಪಾಂಡೆ ಯುಗ ಇನ್ನು ಮುಗಿಯಿತು, ಬರುವ ಐದು ವರ್ಷ ಬಹಳ ಸ್ಟ್ರಿಕ್ಟ್ ಆಗಿರಲಿದೆ. ಜನಪ್ರತಿನಿಧಿಗಳು ದಯವಿಟ್ಟು ಗುತ್ತಿಗೆ ಮಾಡಲೂ ಹೋಗಬೇಡಿ, ನಾನು ಯಾರಿಗೂ ಗುತ್ತಿಗೆ ಕೊಡಲ್ಲ, ಯಾರೂ ಕಂಟ್ರಾಕ್ಟ್ ಕೇಳಲು ನನ್ನ ಬಳಿ ಬರಬೇಡಿ ಎಂದು ಶಾಸಕ ಆರ್.ವಿ.ದೇಶಪಾಂಡೆ ಗುಡುಗಿದ್ದಾರೆ.
ಹಳಿಯಾಳ (ಆ.17): ಹಳೆ ದೇಶಪಾಂಡೆ ಯುಗ ಇನ್ನು ಮುಗಿಯಿತು, ಬರುವ ಐದು ವರ್ಷ ಬಹಳ ಸ್ಟ್ರಿಕ್ಟ್ ಆಗಿರಲಿದೆ. ಜನಪ್ರತಿನಿಧಿಗಳು ದಯವಿಟ್ಟು ಗುತ್ತಿಗೆ ಮಾಡಲೂ ಹೋಗಬೇಡಿ, ನಾನು ಯಾರಿಗೂ ಗುತ್ತಿಗೆ ಕೊಡಲ್ಲ, ಯಾರೂ ಕಂಟ್ರಾಕ್ಟ್ ಕೇಳಲು ನನ್ನ ಬಳಿ ಬರಬೇಡಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಗುಡುಗಿದ್ದಾರೆ. ತಮ್ಮ ಕಾರ್ಯಾಲಯದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಗ್ರಾಪಂಗಳಿಗೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿ ಅವರು ಮಾತನಾಡಿದರು.
ನಿಮ್ಮ ಸಹಕಾರ ಸಿಗಲಿಲ್ಲ: ಕ್ಷೇತ್ರಕ್ಕೆ ಕೋಟ್ಯಂತರ ಅನುದಾನ ಮಂಜೂರು ಮಾಡಿಸಿ ತಂದು ನಿಮಗೆ ಕೆಲಸ ಕೊಟ್ಟೆ, ಕಂಟ್ರಾಕ್ಟ್ನ್ನು ನೀವು ಮಾಡಿದ್ದೀರಿ, ಆದರೆ ಚುನಾವಣೆಯಲ್ಲಿ ನಿಮ್ಮಿಂದ ನನಗೆ ನಿರೀಕ್ಷಿತ ಸಹಕಾರ ದೊರಕಲಿಲ್ಲ, ನೀವ್ಯಾರೂ ಖರ್ಚು ಸಹ ಮಾಡಲಿಲ್ಲ. ನಮ್ಮ ಚುನಾವಣಾ ಪ್ರಚಾರದ ಜವಾಬ್ದಾರಿ ನಾವೇ ವಹಿಸುವುದಾದರೆ ನಾನು ನಿಮ್ಮ ಕೆಲಸ ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದರು. ನಾನು ಇನ್ನು ಮುಂದೆ ಹೀಗೆಯೇ ನೇರಾನೇರ ಮಾತನಾಡುವೆ, ಯಾರ ಮುಲಾಜಿನಲ್ಲೂ ನಾನಿಲ್ಲ. ನನ್ನ ಕ್ಷೇತ್ರದಲ್ಲಿ ಏನೋ ನಡೆಯುತ್ತಿದೆ, ಯಾರು ಏನು ಮಾಡುತ್ತಿದ್ದಾರೆಂಬ ಮಾಹಿತಿಯು ನನಗೆ ಬರುತ್ತದೆ. ಕೆಲವರು ಮಾತ್ರ ನನಗೆ ಚುನಾವಣೆಯಲ್ಲಿ ಗುಪ್ತ ಸಹಾಯ ಮಾಡಿದ್ದಾರೆ, ಆದರೆ ಕೆಲವರ ಡಬಲ್ ಸ್ಟ್ಯಾಂಡ್ ನೋಡಿ ನನಗೆ ಸಾಕಾಗಿ ಹೋಗಿದೆ ಎಂದರು.
undefined
ಪ್ರಧಾನಿ ಮೋದಿ ಉದ್ದಿಮೆದಾರರ ಪರ: ಸಚಿವ ಸಂತೋಷ್ ಲಾಡ್
ಬ್ರಹ್ಮಾಂಡ ಭ್ರಷ್ಟಾಚಾರ: ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದರೂ ನಾನು ಹಳಿಯಾಳ ಕ್ಷೇತ್ರಕ್ಕೆ ಎರಡೂ ಸಾವಿರ ಮನೆ ಮಂಜೂರು ಮಾಡಿಸಿ ತಂದು ಗ್ರಾಪಂಗಳಿಗೆ ವಿತರಿಸುವ ಜವಾಬ್ದಾರಿ ನೀಡಿದೆ. ಆದರೆ ಬಡವರಿಗೆ ಮನೆ ಹಂಚಲು ನೀವು ಹಣ ಪಡೆದಿದ್ದೀರಿ. ನಾಚಿಕೆ ಮಾನ, ಮರ್ಯಾದೆಯಾದರೂ ಇದೆಯೇ, ಬಡವರು ಹಣ ಕೊಡುವಾಗ ನಿಮಗೆ ಶಾಪ ಹಾಕಿಯೇ ಕೊಡುತ್ತಾರೆ, ಭ್ರಷ್ಟಾಚಾರದ ದುಡ್ಡಿನಿಂದ ನಿಮಗೆ ಯಾವತ್ತೂ ಒಳ್ಳೆಯದಾಗಲ್ಲ, ಜನರಿಂದ ಹಣ ಅಪೇಕ್ಷಿಸುವ ಬದಲು ಪ್ರೀತಿ, ವಿಶ್ವಾಸ, ಆಶೀರ್ವಾದ ಅಪೇಕ್ಷಿಸಿ ಎಂದು ತಾಕೀತು ಮಾಡಿದರು. ಮುಂದೇ ತಾಪಂ ಮತ್ತು ಜಿಪಂ ಹಾಗೂ ಲೋಕಸಭಾ ಚುನಾವಣೆ ಬರುತ್ತಿದ್ದು, ನಿಮ್ಮ ನಡೆಯ ಮೇಲೆ ಚುನಾವಣಾ ಫಲಿತಾಂಶ ನಿರ್ಧಾರವಾಗಲಿದೆ ಎಂದು ದೇಶಪಾಂಡೆ ಹೇಳಿದರು.
ಕಂಟ್ರಾಕ್ಟ್ ಮಾಡಬೇಡಿ: ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ನೀವೆ, ಪಂಚಾಯತಿ ಕೆಲಸದ ಕಂಟ್ರಾಕ್ಟರ್ ನೀವೆ, ಏನ್ರಿ ಇದು ಹುಡಗಾಟ. ಇದಕ್ಕೊಂದು ಮೀತಿ ಹಾಕಬೇಕಿದೆ. ಇನ್ನೂ ಇಂತಹ ದುರಾಡಳಿತಕ್ಕೆ ಆಸ್ಪದವಿಲ್ಲ ಎಂದ ಅವರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಮಾಡಬಾರದು. ಕೈ-ಬಾಯಿ ಸ್ವಚ್ಛ ಇಟ್ಟುಕೊಂಡು ಕೆಲಸ ಮಾಡಿ ಎಂದರು. ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ಪ್ರಮುಖರಾದ ಐ.ಸಿ. ಕಾಮಕರ, ಉಮೇಶ ಬೊಳಶೆಟ್ಟಿ, ರವಿ ತೋಣಗಟ್ಟಿ, ಮಾಲಾ ಬೃಗಾಂಜಾ, ಶಂಕರ ಬೆಳಗಾಂವಕರ, ದೇಮಾಣಿ ಶಿರೋಜಿ, ಬಿ.ಡಿ. ಚೌಗಲೆ ಇದ್ದರು.
ದೇಶದ ವಿಷಯ ಬಂದಾಗ ಯಾವುದೇ ಪಕ್ಷ ಮುಖ್ಯವಲ್ಲ: ದೇಶದ ವಿಷಯ ಬಂದಾಗ ಯಾವುದೇ ಪಕ್ಷ ಮುಖ್ಯವಲ್ಲ. ನಾವು ದೇಶದ ಸ್ವಾತಂತ್ರ್ಯ ಲಾಭ ಪಡೆಯುತ್ತಿದ್ದೇವೆ ಎಂದರೆ ಅದರ ಹಿಂದೆ ಸಾವಿರಾರು ಜನರ ತ್ಯಾಗ, ಬಲಿದಾನಗಳ ದೊಡ್ಡ ಕತೆಯಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ರಾಜ್ಯದಿಂದ, ಉತ್ತರ ಕನ್ನಡ ಜಿಲ್ಲೆಯಿಂದ ಹಲವಾರು ಜನರು ಹೋರಾಟ ಮಾಡಿದ್ದಾರೆ. ಅವರ ತ್ಯಾಗವನ್ನು ನಾವು ಸ್ಮರಿಸಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರಸಭೆ ವತಿಯಿಂದ ನಡೆದ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಲ್ಲಿ ವೀರಯೋಧರು, ಅವರ ಕುಟುಂಬದವರನ್ನು ಸನ್ಮಾನಿಸಿ ಮಾತನಾಡಿದರು. ಹಲವಾರು ಮಹನೀಯರ ಹೋರಾಟದ ಫಲವಾಗಿ ಭಾರತವು ಎಲ್ಲ ದಿಕ್ಕುಗಳಲ್ಲಿ ದಿಟ್ಟಹೆಜ್ಜೆ ಇಟ್ಟಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಪಥದಲ್ಲಿ ಇದೆ. ಆದರೂ ನಿರುದ್ಯೋಗ ಸಮಸ್ಯೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಗೌರವ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗೌರವ ನೀಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ: ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್ ಸೂಚನೆ
ಕಾರ್ಯಕ್ರಮದಲ್ಲಿ 40 ಜನ ಮಾಜಿ ಯೋಧರಿಗೆ ಹಾಗೂ 20ಕ್ಕೂ ಹೆಚ್ಚು ಪೊಲೀಸ್ ಇಲಾಖೆ ಸಿಬ್ಬಂದಿಗಳಿನ್ನು ಸನ್ಮಾನಿಸಲಾಯಿತು. ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ಅಮೃತ ಕಳಸ’ಕ್ಕೆ ಶಾಸಕರು ಚಾಲನೆ ನೀಡಿದರು. ಕಳಸ ಹೊತ್ತ ವಾಹನವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅನಂತರ ನಗರಸಭೆ ಆವರಣದಲ್ಲಿ ಸಂಪನ್ನಗೊಂಡಿತು. ಈ ವೇಳೆ ತಹಸೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಂ ಪವಾರ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಭೀಮಣ್ಣ ಸೂರಿ ಮುಂತಾದವರಿದ್ದರು. ಶಿಕ್ಷಕ ಸೀತಾರಾಮ ನಾಯಕ ನಿರೂಪಿಸಿದರು.