ಸಿದ್ದು 2.0 ಸರ್ಕಾರದ ಮೊದಲ ಅಧಿವೇಶನ ಆರಂಭ: ಹಸಿವು, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಸರ್ಕಾರ ಪಣ

By Kannadaprabha News  |  First Published Jul 4, 2023, 4:22 AM IST

‘ಹಸಿವು ಮುಕ್ತ ಕರ್ನಾಟಕ ಹಾಗೂ ಭ್ರಷ್ಟಾಚಾರ ಮುಕ್ತ ಕರ್ನಾಟಕದ ಕನಸನ್ನು ಸರ್ಕಾರ ಸಾಕಾರಗೊಳಿಸಲಿದೆ. ‘ಅನ್ನಭಾಗ್ಯ’ ಹಾಗೂ ‘ಇಂದಿರಾ ಕ್ಯಾಂಟೀನ್‌’ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ರೂಪಿಸಲಿದ್ದು, ಇದಕ್ಕಾಗಿ ಸರ್ಕಾರ ಯಾವ ತ್ಯಾಗಕ್ಕಾದರೂ ಸಿದ್ಧವಿದೆ’ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಹೇಳಿದ್ದಾರೆ. 


ವಿಧಾನಸಭೆ (ಜು.04): ‘ಹಸಿವು ಮುಕ್ತ ಕರ್ನಾಟಕ ಹಾಗೂ ಭ್ರಷ್ಟಾಚಾರ ಮುಕ್ತ ಕರ್ನಾಟಕದ ಕನಸನ್ನು ಸರ್ಕಾರ ಸಾಕಾರಗೊಳಿಸಲಿದೆ. ‘ಅನ್ನಭಾಗ್ಯ’ ಹಾಗೂ ‘ಇಂದಿರಾ ಕ್ಯಾಂಟೀನ್‌’ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ರೂಪಿಸಲಿದ್ದು, ಇದಕ್ಕಾಗಿ ಸರ್ಕಾರ ಯಾವ ತ್ಯಾಗಕ್ಕಾದರೂ ಸಿದ್ಧವಿದೆ’ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಹೇಳಿದ್ದಾರೆ. ಜತೆಗೆ, ರಾಜ್ಯದಲ್ಲಿ ಹಲವು ಕಾರಣಗಳಿಗೆ ಅಧಿಕೃತ ಎಂಬಂತಾಗಿರುವ (ಸಾಂಸ್ಥೀಕರಣ) ಭ್ರಷ್ಟಾಚಾರವನ್ನು ಮೂಲದಿಂದಲೇ ಉಚ್ಚಾಟನೆ ಮಾಡಲು ಅಗತ್ಯವಿರುವ ಆಡಳಿತಾತ್ಮಕ ಹಾಗೂ ಶಾಸನಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ‘ಅನ್ನವನು ನೀಡುವುದು ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ’ ಎಂದು ಕನ್ನಡದ ಕವಿ ಸರ್ವಜ್ಞ ಹೇಳಿದ್ದಾರೆ. ಹೀಗಾಗಿ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಅನ್ನಭಾಗ್ಯ ಅಡಿ 10 ಕೆ.ಜಿ. ಅಕ್ಕಿ ಘೋಷಿಸಲಾಗಿದೆ. ಅಕ್ಕಿ ಹೊಂದಿಸುವವರೆಗೆ ಕೆ.ಜಿ.ಗೆ 34 ರು. ಹಣ ನೀಡುತ್ತಿದ್ದು, ಮುಂದೆ 10 ಕೆ.ಜಿ. ಅಕ್ಕಿ ನೀಡಲಿದ್ದೇವೆ. ಅದಕ್ಕಾಗಿ ಯಾವುದೇ ತ್ಯಾಗ ಮಾಡಿದರೂ ಸರಿ ನನ್ನ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನ ಮಾಡುತ್ತದೆ ಎಂದು ಘೋಷಿಸಿದರು.

Tap to resize

Latest Videos

ಅತೀ ಹೆಚ್ಚು ಅಶಿಸ್ತು ಇರೋ ಪಕ್ಷ ಬಿಜೆಪಿ: ಸಿಎಂ ಸಿದ್ದರಾಮಯ್ಯ

ಹಸಿವು ಮುಕ್ತ: ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎನಿಸಿಕೊಳ್ಳುತ್ತದೆ. ಹಸಿದವರಿಗೆ ಅನ್ನ ನೀಡುವ ಹಾಗೂ ಸಮಾಜದಲ್ಲಿ ಗೌರವಯುತ ಜೀವನ ನೀಡುವ ಉದ್ದೇಶವನ್ನು ಐದು ಗ್ಯಾರಂಟಿಗಳು ಹೊಂದಿವೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು, ನಿರಾಶ್ರಿತರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲಾಗಿತ್ತು. ಲಕ್ಷಾಂತರ ಮಂದಿಯ ಹಸಿವನ್ನು ಇವು ನೀಗಿಸಿವೆ. ಇವನ್ನು ಇನ್ನೂ ಸಮರ್ಥವಾಗಿ ನಡೆಸುತ್ತೇವೆ. ‘ಅನ್ನಭಾಗ್ಯ’ ಹಾಗೂ ‘ಇಂದಿರಾ ಕ್ಯಾಂಟೀನ್‌ಗಳ’ ಮೂಲಕ ನನ್ನ ಸರ್ಕಾರವು ರಾಜ್ಯವನ್ನು ಹಸಿವು ಮುಕ್ತ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜತೆಗೆ ಯುವನಿಧಿ ಅಡಿ ನಿರುದ್ಯೋಗ ಭತ್ಯೆ, ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ 2.14 ಕೋಟಿ ಫಲಾನುಭವಿಗಳಿಗೆ ಉಚಿತ ವಿದ್ಯುತ್‌, ಮಹಿಳಾ ಸಬಲೀಕರಣಕ್ಕಾಗಿ ಗೃಹ ಲಕ್ಷ್ಮೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.

ದೇಶಕ್ಕೆ ಹೊಸ ಮಾದರಿ: ರಾಜ್ಯಪಾಲರು ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ಅನ್ನಭಾಗ್ಯ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳು ಹಾಗೂ ಅದರ ಆರ್ಥಿಕ, ಸಾಮಾಜಿಕ ಪರಿಣಾಮಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ‘ಜನರಿಂದ ಸೃಷ್ಟಿಯಾದ ಸಂಪತ್ತಿನಲ್ಲಿ ಒಂದು ಪಾಲನ್ನು ಜನರಿಗೆ ಕೊಡುತ್ತಿದ್ದೇವೆ. ಆ ಮೂಲಕ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಅನುಚ್ಛೇದ 38, 39 (ಎ), ಬಿ ಮತ್ತು ಸಿ ಗಳ ಪರೋಕ್ಷವಾಗಿ ಅನುಷ್ಠಾನ ಮಾಡುತ್ತಿದ್ದೇವೆ. ನನ್ನ ಸರ್ಕಾರ ಈ ಯೋಜನೆಗಳ ಮೂಲಕ ಹೊಸ ಅಭಿವೃದ್ಧಿ ಮಾದರಿಯೊಂದನ್ನು ರೂಪಿಸಿ ಕರ್ನಾಟಕದ್ದೇ ಆದ ಹೊಸ ಆಡಳಿತ ಮಾದರಿಯನ್ನು ದೇಶಕ್ಕೆ ಪರಿಚಯಿಸಲಿದೆ’ ಎಂದು ಘೋಷಿಸಿದ್ದಾರೆ.

ಜನ ಕೇಂದ್ರಿತ ಆರ್ಥಿಕತೆ: ‘ನನ್ನ ಸರ್ಕಾರ ಈ ಯೋಜನೆಗಳ ಮೂಲಕ ಜನ ಕೇಂದ್ರಿತವಾದ ಆರ್ಥಿಕತೆಗೆ ಒತ್ತು ನೀಡಿ ಹೊಸ ಅಭಿವೃದ್ಧಿ ಮಾದರಿಯೊಂದನ್ನು ಅನುಷ್ಠಾನ ಮಾಡುತ್ತಿದೆ. ತನ್ಮೂಲಕ ಜನರ ಕಲ್ಯಾಣ, ಆರ್ಥಿಕ ಸ್ಥಿತಿ ಎರಡನ್ನೂ ಸಮ ತೂಕದಲ್ಲಿ ನಿಭಾಯಿಸಿ ದೇಶಕ್ಕೆ ಕರ್ನಾಟಕದ್ದೇ ಆದ ಹೊಸ ಆಡಳಿತ ಮಾದರಿ ಪರಿಚಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಗತ್ತಿನ ಅನೇಕ ದೇಶಗಳು ಜನಕೇಂದ್ರಿತ ಆರ್ಥಿಕತೆ ಪ್ರತಿಪಾದಿಸುತ್ತಿವೆ. ಈ ದೇಶಗಳಲ್ಲಿ ಸಾರ್ವತ್ರಿಕ ಮೂಲ ಆದಾಯ (ಯೂನಿವರ್ಸಲ್‌ ಬೇಸಿಕ್‌ ಇನ್‌ಕಂ) ಕಲ್ಪನೆ ಬಲಗೊಳ್ಳುತ್ತಿದೆ. ನಿರ್ಗತಿಕರಿಗೆ ಖಚಿತ ಆದಾಯ ನೀಡುವ ಮೂಲಕ ಉಳ್ಳವರು ಹಾಗೂ ಇಲ್ಲದವರ ನಡುವಿನ ವ್ಯತ್ಯಾಸ ತುಸುವಾದರೂ ಕಡಿಮೆ ಮಾಡಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು. ಮಾನವೀಯತೆ ಹಾಗೂ ಅಭಿವೃದ್ಧಿ ಎರಡೂ ಚಿಂತನೆಗಳಿಂದ ರೂಪುಗೊಂಡಿರುವ ಈ ಆರ್ಥಿಕ ನೀತಿಯು ಸಂಪತ್ತು ಕೆಲವರ ಕೈಯಲ್ಲೇ ಕೇಂದ್ರೀಕೃತಗೊಳ್ಳುವುದನ್ನು ತಪ್ಪಿಸಲಿದೆ. ಬೆಲೆ ಏರಿಕೆ, ಕಡಿಮೆ ಆದಾಯದಿಂದ ತತ್ತರಿಸಿರುವ ಜನರಿಗೆ ಜೀವನದಲ್ಲಿ ಘನತೆ ತಂದುಕೊಡುತ್ತದೆ ಎಂದು ಹೇಳಿದರು.

‘ಇವ ನಮ್ಮವ’: ಶಾಂತಿ, ಸಮೃದ್ಧಿ, ಸೌಹಾರ್ದಯುತ ‘ಸರ್ವ ಜನಾಂಗದ ಶಾಂತಿಯ ತೋಟ’ ನಿರ್ಮಿಸುತ್ತೇವೆ. ‘ಇವ ನಮ್ಮವ’ ಎಂದು ಕೂಡಿ ಬಾಳುವ ಹಿರಿಯರ ಕನಸು ನನಸು ಮಾಡುತ್ತೇವೆ. ಜಾತಿ ಧರ್ಮಗಳ ಭೇದದ ವಿರುದ್ಧ ಈ ನೆಲವು ಮೊದಲಿನಿಂದಲೂ ಜೀವ ಪರ ಸೆಲೆಯನ್ನು ಚಿಮ್ಮುತ್ತಾ ಬಂದಿದೆ. ಕವಿರಾಜ ಮಾರ್ಗದಲ್ಲಿ ‘ಪರ ವಿಚಾರ, ಪರ ಧರ್ಮಗಳನ್ನು, ಪರ ಬದುಕಿನ ನೀತಿಗಳನ್ನು ಗೌರವಿಸುವುದೇ ನಿಜವಾದ ಬಂಗಾರದ ಒಡವೆ’ ಎಂದು ಹೇಳಲಾಗಿದೆ. ಕನ್ನಡದ ಆದಿ ಕವಿ ಪಂಪ ‘ಮನುಷ್ಯ ಜಾತಿ ತಾನೊಂದೆ ವಲಂ’ (ಇಡೀ ಮನುಷ್ಯ ಕುಲವೇ ಒಂದು) ಎಂದು ಹೇಳಿದ್ದಾರೆ. ಹೀಗಾಗಿ ರಾಷ್ಟ್ರಕವಿ ಕುವೆಂಪು ಹೇಳಿದಂತೆ ‘ಸರ್ವ ಜನಾಂಗದ ಶಾಂತಿಯ ತೋಟ’ ಸಾಕಾರಗೊಳಿಸುವ ನಿಟ್ಟಿನಲ್ಲಿ ಆಡಳಿತ ನೀಡುತ್ತೇವೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಾಮರಸ್ಯದ ವಾತಾವರಣ ತರಲು ಬದ್ಧರಾಗಿದ್ದೇವೆ ಎಂದು ಸರ್ಕಾರದ ಪರ ಮಾತು ನೀಡಿದರು.

30 ನಿಮಿಷಗಳ ಭಾಷಣ: ಮಧ್ಯಾಹ್ನ 12 ಗಂಟೆಗೆ ರಾಷ್ಟ್ರಗೀತೆ ಮೂಲಕ ಆರಂಭವಾದ ಜಂಟಿ ಅಧಿವೇಶನದಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಬಳಿಕ ಹಿಂದಿಯಲ್ಲಿ 30 ನಿಮಿಷಗಳ ಕಾಲ ಭಾಷಣ ಮಾಡಿದರು. 24 ಪುಟಗಳ ಭಾಷಣದ ಪ್ರತಿಯನ್ನು ಓದಿ ಮುಗಿಸಿದರು.

ಬಿಜೆಪಿ 605 ಭರ​ವ​ಸೆ​ಗ​ಳಲ್ಲಿ ಎಷ್ಟು ಈಡೇ​ರಿ​ಸಿ​ದೆ?: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಪ್ರಶ್ನೆ

ಮೊದಲ ಬಾರಿ ವಿಪಕ್ಷ ನಾಯಕರಿಲ್ಲದ ಕಲಾಪ: ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ಸದನಗಳ ಕಲಾಪ ಪ್ರತಿಪಕ್ಷ ನಾಯಕರಿಲ್ಲದೆ ನಡೆಯಿತು. ಅಧಿವೇಶನದ ಮೊದಲ ದಿನವಾದ ಸೋಮವಾರ ರಾಜ್ಯಪಾಲರ ಭಾಷಣ ಹಾಗೂ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕಲಾಪ ಹೊರತುಪಡಿಸಿದರೆ ಚರ್ಚಿಸುವಂತಹ ಬೇರೆ ಯಾವ ವಿಷಯ ಇಲ್ಲದಿದ್ದರೂ ಪ್ರತಿಪಕ್ಷ ನಾಯಕರು ಇಲ್ಲದೇ ಕಲಾಪ ನಡೆಯಿತು. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರು ಆಸೀನರಾಗುವ ಸ್ಥಾನ ಖಾಲಿ ಬಿಟ್ಟು ಉಳಿದ ಆಸನಗಳಲ್ಲಿ ಸದಸ್ಯರು ಕುಳಿತುಕೊಂಡಿದ್ದರು. ಇಂತಹ ಪ್ರಸಂಗ ರಾಜ್ಯದ ಇತಿಹಾಸದಲ್ಲಿ ಮೊಟ್ಟಮೊದಲು.

click me!