
ಹಾಸನ (ಏ.25): ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಗಾಗಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತು. ಅವರು ಅಧಿಕಾರಿಕ್ಕಾಗಿ ತಮ್ಮ ತನವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಹಿಂದೆ ಇದ್ದ ಸಿದ್ದರಾಮಯ್ಯ ಆಗಿ ಉಳಿದಿಲ್ಲ. ಗ್ಯಾರಂಟಿ ಭಾಗ್ಯ ಅಂತಾರೆ. ಈಗ ಭಾಗ್ಯನೂ ಇಲ್ಲ, ಕಾಮಗಾರಿಗೆ ದುಡ್ಡು ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ ನಡೆಸಿದರು. ನಗರದ ರಿಂಗ್ ರಸ್ತೆ ಬಳಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರದಿಂದ ತೆರಿಗೆ ಹಣವೇ ರಾಜ್ಯಕ್ಕೆ ಬರುತ್ತಿಲ್ಲ ಎಂವ ಆರೋಪಕ್ಕೆ ಸೋಮಣ್ಣ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ರೀ ಸಿದ್ದರಾಮಯ್ಯ ಈಗ ಪುಸ್ತಕಾನೆ ಓದುತ್ತಿಲ್ಲ ಅದು ಬಂದಿರೋದು ಗ್ರಹಚಾರ.
ಹಿಂದೆ ಇದ್ದ ಸಿದ್ದರಾಮಯ್ಯ ನವರು ಇವತ್ತಿಲ್ಲ. ಕುರ್ಚಿಗೋಸ್ಕರ ಏನೆಲ್ಲ ಮಾಡ್ತಿದ್ದಾರೆ ಅಂತಾ ಇಡೀ ದೇಶಕ್ಕೆ ಗೊತ್ತು. ಯಾವುದೇ ಕೆಲಸ ಮಾಡೋದಕ್ಕೆ ಅವರ ಹತ್ತಿರ ಸಂಪತ್ತಿಲ್ಲ. ಆ ಸಂಪನ್ಮೂಲ ಇಲ್ಲದೇ ಇದ್ದಾಗ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಆದರೇ ಮೋದಿ ಸರ್ಕಾರ ಹಾಗಿಲ್ಲ ನಮ್ಮಹತ್ರ ಎಷ್ಟಿದೆ ಅದಕ್ಕೂ ನೂರು ಪಟ್ಟು ಕೆಲಸ ಮಾಡ್ತಾರೆ. ಈಶಾನ್ಯ ರಾಜ್ಯಗಳಿಗೆ ಹೋಗಿ ಬನ್ನಿ ಅಭಿವೃದ್ಧಿ ಗೊತ್ತಾಗುತ್ತದೆ. ಇವರಿಗೆ ಹೇಳ್ದೆ ನಾನು ನಿಮ್ಮ ಮನೆ ಕಾಯ್ದೋಗ ನೀವು ಮತ್ತು ನಿಮ್ಮ ಅಧಿಕಾರಿಗಳನ್ನ ಒಂದು ವಾರ ಕರ್ಕೊಂಡ್ ಬನ್ನಿ. ಮೋದಿ ಕಚೇರೀಲಿ ಬೇಡ ನನ್ನ ಕಚೇರಿಲಿ ನೋಡಿ ಅಂತಾ, ಆಡಳಿತ ಅಂದ್ರೇನು ಪಾರದರ್ಶಕತೆ ಅಂದ್ರೇನು ನೋಡಿ.
ಗುಪ್ತಚರ ಇಲಾಖೆ ವೈಫಲ್ಯದಿಂದ ಉಗ್ರ ದಾಳಿ: ಸಿಎಂ ಸಿದ್ದರಾಮಯ್ಯ
ಸಾಮಾನ್ಯ ಜನರಿಗೆ ಹೇಗೆ ಸೌಲತ್ತು ನೀಡಬಹುದು ಎಂಬುದನ್ನ ಬಂದು ನೋಡ್ರಿ ಆಮೇಲಾದ್ರು ಒಂದು ಹಂತಕ್ಕೆ ತರೋಣ. ಕೇಂದ್ರ ಮತ್ತು ರಾಜ್ಯ ಒಂದು ನಾಣ್ಯದ ಎರಡು ಮುಖವಾಗಿ ಒಟ್ಟಾಗಿ ಕೆಲಸ ಮಾಡಿದ್ರೆ ಹೇಗೆಲ್ಲಾ ಕೆಲಸ ಆಗುತ್ತೆ ಅನ್ನೋದಕ್ಕೆ ಅನೇಕ ಉದಾಹರಣೆ ಕೊಟ್ಟಿದ್ದೇವೆ. ಅವರ ಸತ್ಯವನ್ನ ಅವರು ಮಾತಾಡಿದ್ರೆ ಸಾಕು ನಾವು ಅಡ್ಜಸ್ಟ್ ಆಗ್ತೀವಪ್ಪ. ಅವರು ಸತ್ಯ ಮಾತಾಡೋಕೆ ತಯಾರಿಲ್ಲ. ಏನೋ ಒಂದು ಹೇಳೋದು ತಪ್ಪಿಸಿಕೊಳ್ಳೋದು ಅಷ್ಟೇ. ಇನ್ನೊಬ್ಬರ ಹೆಗಲಮೇಲೆ ಗನ್ ಇಟ್ಟು ಹೊಡೆಯೋದನ್ನ ಬಿಟ್ಟು ಅವರ ಗನ್ ಪರಿಸ್ಥಿತಿ ಏನಾಗಿದೆ ನೋಡಿಕೊಂಡು ಕೆಲಸ ಮಾಡಿದ್ರೆ ಇನ್ನೂ ಚೆನ್ನಾಗಿ ಆಗಬಹುದು ಎಂದು ಸಲಹೆ ನೀಡಿದರು.
ನಾನು ಕೇಂದ್ರ ಸಚಿವನಾಗಿ ಬಂದ ನಂತರ ಹತ್ತು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳಿಗೂ ಚಾಲನೆ ಸಿಕ್ಕಿದ್ದು, ಇವರು ನಾವು ಶೇಕಡ ೫೦ರಷ್ಟು ಪಾಲು ಕೋಡ್ತೀವಿ ಅಂದ್ರು ಆದ್ರೆ ಕೊಡದೇ ಕಾಮಗಾರಿ ನಿಂತು ಹೋಗಿದ್ದು, ಈಗ ನಾನು ಬಂದ ಮೇಲೆ ನೂರಾರು ಕೆಲಸ ನಡೆಯುತ್ತಿದೆ. ಇವರು ಈ ಹಿಂದೆ ಆ ರೀತಿ ಬಂದಿದ್ದೇ ಎಡವಟ್ಟಾಗಿರುವುದು. ಇವರು ಕೊಡ್ತೇವೆ ಅಂದ್ರು. ಆದ್ರೆ ಇವರ ಹತ್ರ ದುಡ್ಡೂ ಇಲ್ಲ ಕೊಡೋದಕ್ಕೆ. ಗ್ಯಾರೆಂಟಿ ಭಾಗ್ಯ ಅಂತಾರೆ ಈಗ ಭಾಗ್ಯನೂ ಇಲ್ಲಾ ಕಾಮಗಾರಿಗೆ ದುಡ್ಡು ಇಲ್ಲ ಎಂದು ಲೇವಡಿ ಮಾಡಿದರು. ನಾನೇ ಜಿಲ್ಲಾ ಮಂತ್ರಿ ರಾಜಣ್ಣನವರಿಗೆ, ಹಾಸನ ಸಂಸದರಿಗೆ ಇಂದು ಪತ್ರ ಬರೆಯೋದಕ್ಕೆ ಸೂಚಿಸಿದ್ದೇನೆ. ಮೊದಲು ಸಮಸ್ಯೆ ಬಗೆಹರಿಯಲಿ ಎಂದರು.
ಕಾಶ್ಮೀರದ ಘಟನೆ ಅತ್ಯಂತ ಹೀನ ಕೃತ್ಯವಾಗಿದ್ದು, ಇಂದು ಮುಂಜಾನೆ ಕರ್ನಾಟಕದ ಎರಡು ಮೃತದೇಹ ರಾಜ್ಯಕ್ಕೆ ಬಂದಿವೆ. ನಾನೇ ಖುದ್ದು ಹಾಜರಿದ್ದು ಬರಮಾಡಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಭವಿಷ್ಯದ ಭಾರತಕ್ಕೆ ಒಂದು ಸಂದೇಶವನ್ನ ಕೊಡುತ್ತಿದ್ದಾರೆ. ಈಗ ಆಗಿರುವ ಕಹಿ ಘಟನೆಗೆ ಹೇಗೆ ನಡೆದುಕೊಳ್ಳಬೇಕು ಎಂಬ ರಾಜತಾಂತ್ರಿಕ ತೀರ್ಮಾನವನ್ನ ಇಡೀ ವಿಶ್ವವೇ ಮೆಚ್ಚಿಕೊಳ್ತಿದೆ. ಇಂತಹವರು ನಮ್ಮ ಪ್ರಧಾನಿ ಎಂದು ಹೇಳೋದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.
ಕಾಶ್ಮೀರದಲ್ಲಿ ೩೭೦ ಆರ್ಟಿಕಲ್ ತೆಗೆದ ಮೇಲೆ ಭವಿಷ್ಯದ ಭಾರತಕ್ಕೆ ಹತ್ತು ವರ್ಷದಲ್ಲಿ ಪ್ರಧಾನಿಯವರು ಅಭಿವೃದ್ಧಿಗೆ ಮುಂದಾಗಿದ್ದರು. ಇಂತಹ ಸಂದರ್ಭದಲ್ಲಿ ಕಾಶ್ಮೀರದ ಕೆಲ ಕಿಡಿಗೇಡಿ ಪಾಕಿಸ್ತಾನಿಗಳು ಮಾಡಿರೊ ಹೇಯ ಕೃತ್ಯ. ಇದನ್ನ ಇಡೀ ವಿಶ್ವವೇ ಖಂಡಿಸಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಪ್ರಧಾನಿಯವರು ಸಭೆ ಮಾಡಿದ್ದಾರೆ. ಪದೇ ಪದೆ ಇಂತಹ ಕೃತ್ಯ ಮಾಡಿ ಸಾಮಾನ್ಯ ಜನರ ಪ್ರಾಣಹಾನಿ ಮಾಡುತ್ತಿದ್ದಾರೆ. ಹಾಗಾಗಿ ಇದಕ್ಕೆ ತಕ್ಕ ಪಾಠ ಕಲಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಕೆಲ ದಿನ ಕಾದು ನೋಡಿ ಇನ್ನೂ ಕೆಲ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಪರಮಾಣು ವಿದ್ಯುತ್ ಉತ್ಪಾದನೆಯ 2 ಕೈಗಾ ಘಟಕ ನಿರ್ಮಾಣಕ್ಕೆ 12800 ಕೋಟಿ ಒಪ್ಪಂದ
ದೇಶಕ್ಕಿಂತ ದೊಡ್ಡವರು ಯಾರಿಲ್ಲ: ದೇಶದ ಸಾರ್ವಭೌಮತೆಗೆ ಯಾವುದೇ ಅಪಚಾರ ಆಗದಂತೆ ಪ್ರಧಾನಿ ಮಾಡ್ತಾರೆ. ವಿರೋಧ ಪಕ್ಷಗಳಿಗೆ ಟೀಕಿಸೋದು ಬಿಟ್ಟು ಬೇರೇನಿಲ್ಲ. ಪ್ರಧಾನಿ ಬಗ್ಗೆ ಮಾತಾಡಲು ಅವರಿಗೆ ಏನಿದೆ ಹೇಳಿ? ಹತ್ತು ವರ್ಷದಲ್ಲಿ ಎಂಟು ಸಾವಿರ ಕೋಟಿ ಆದಾಯ ಪ್ರವಾಸೋದ್ಯಮದಿಂದ ಬಂದಿದೆ. ಇದನ್ನ ತಡೆಯಲಾಗದೆ ಪಾಕಿಸ್ತಾನದದಿಂದ ಈ ಘಟನೆ ಆಗಿದೆ. ದೇಶಕ್ಕಿಂತ ದೊಡ್ಡವರು ಯಾರು ಇಲ್ಲ. ಏನೇನೊ ಹೇಳಿ ಜನರನ್ನ ದಾರಿ ತಪ್ಪಿಸದೆ ಅಭಿವೃದ್ಧಿಯಲ್ಲಿ ಕೈ ಜೋಡಿಸಿ ಎಂದು ಒತ್ತಾಯಿಸಿದರು. "ಖರ್ಗೆಯವರು ನೆನ್ನೆಯೇ ಸರ್ಕಾರದ ನಡೆಗೆ ಬೆಂಬಲ ಎಂದು ಹೇಳಿದ್ದಾರೆ". ಯಾರೋ ಕೆಲವರು ಪ್ರಚಾರಕ್ಕೆ ಮಾತಾಡ್ತಾರೆ. ದೇಶವೇ ದೊಡ್ಡದು ದೇಶಕ್ಕಿಂತ ನಾವ್ಯಾರು ದೊಡ್ಡವರಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.