ಜೋಸೆಫ್ ವಿಜಯ್ ಹೀಗಂದ್ರೆ ಯಾರಿಗೂ ಅರ್ಥ ಆಗಲ್ಲ. ದಳಪತಿ ವಿಜಯ್, ಸೂಪರ್ ಸ್ಟಾರ್ ವಿಜಯ್ ಅಂದರಷ್ಟೇ ಅಭಿಮಾನಿಗಳ ಶಿಳ್ಳೆ ಕೇಳೋದು. ಕ್ರಿಶ್ಚಿಯನ್ ಅಪ್ಪ, ನಿರ್ದೇಶಕ ಚಂದ್ರಶೇಖರ್, ಸಂಗೀತಗಾರ್ತಿ ಶೋಭಾ ದಂಪತಿಯ ಪುತ್ರ ಜೋಸೆಫ್ ವಿಜಯ್ ಸದ್ಯ ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಲೇಖಕರು: ಶೋಭಾ ಮಳವಳ್ಳಿ, ಸುವರ್ಣ ನ್ಯೂಸ್ ಕನ್ನಡ, ಔಟ್‌ಪುಟ್ ಚೀಫ್
ಜೋಸೆಫ್ ವಿಜಯ್ ಹೀಗಂದ್ರೆ ಯಾರಿಗೂ ಅರ್ಥ ಆಗಲ್ಲ. ದಳಪತಿ ವಿಜಯ್, ಸೂಪರ್ ಸ್ಟಾರ್ ವಿಜಯ್ ಅಂದರಷ್ಟೇ ಅಭಿಮಾನಿಗಳ ಶಿಳ್ಳೆ ಕೇಳೋದು. ಕ್ರಿಶ್ಚಿಯನ್ ಅಪ್ಪ, ನಿರ್ದೇಶಕ ಚಂದ್ರಶೇಖರ್, ಸಂಗೀತಗಾರ್ತಿ ಶೋಭಾ ದಂಪತಿಯ ಪುತ್ರ ಜೋಸೆಫ್ ವಿಜಯ್ ಸದ್ಯ ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
undefined
ಒಡೆದ ಮನೆಯಂತಾಗಿರುವ ತಮಿಳುನಾಡು ರಾಜಕೀಯಕ್ಕೆ 49 ವರ್ಷದ ಮಾಸ್ ಹೀರೋ ದಳಪತಿ ವಿಜಯ್ ಅಧಿಕೃತವಾಗಿ ಎಂಟ್ರಿ ಕೊಟ್ಟು, ಹೊಸ ಆಟಕ್ಕೆ ರೆಡಿಯಾಗಿದ್ದಾರೆ. ಜಯಲಲಿತಾ, ಕರುಣಾನಿಧಿ ಸಾವಿನ ಬಳಿಕ ಭಣಗುಡುತ್ತಿದ್ದ ತಮಿಳುನಾಡು ರಾಜಕೀಯಕ್ಕೆ ಈಗ ಹೊಸ ರಂಗು ಬಂದಿದೆ.
ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಅಂತ ಇಪ್ಪತ್ತು ವರ್ಷಗಳಿಂದ ಜನ ಕಾಯುತ್ತಲೇ ಇದ್ದರು. ರಜನಿಕಾಂತ್ ಪಕ್ಷ ಕಟ್ಟಿದರು. ಜಯಲಲಿತಾ- ಕರುಣಾನಿಧಿ ಬಿಟ್ಟ ಜಾಗದಲ್ಲಿ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳಲು ಸಿದ್ಧರಾಗಿದ್ದರು. ಆದ್ರೆ, ಅನಾರೋಗ್ಯ ಅವರನ್ನು ರಾಜಕೀಯದಿಂದ ದೂರ ತಳ್ಳಿತು. ಇನ್ನು ಉಲಗನಾಯಕ ಕಮಲ್ಹಾಸನ್ ತಮ್ಮ ‘ಮಕ್ಕಳ್ ನೀದಿ ಮೈಯಂ’ ಪಕ್ಷವನ್ನು ಐದು ವರ್ಷಗಳಿಂದ ಹಾಗೋ ಹೀಗೋ ನಡೆಸಿಕೊಂಡು ಬಂದಿದ್ದಾರೆ. ಆದ್ರೆ, ಅದ್ಯಾಕೋ ತಮಿಳರಿಗೆ ಕಮಲ್ಹಾಸನ್ ರಾಜಕೀಯವೂ ಒಗ್ಗಲಿಲ್ಲ, ರಾಜಕಾರಣಿಯಾಗಿಯೂ ಒಪ್ಪಲಿಲ್ಲ. ಇದೆಲ್ಲದ್ದರಿಂದ ದಿಕ್ಕೆಟ್ಟಂತಾಗಿದ್ದ ತಮಿಳುನಾಡಿನ ಜನರಿಗೆ ದಳಪತಿ ವಿಜಯ್ ಭರವಸೆಯ ದೀಪ ಹಚ್ಚಿದ್ದಾರೆ.
ನಟನೆಯಿಂದ ರಾಜಕಾರಣಕ್ಕಿಳಿದ ದಳಪತಿ ವಿಜಯ್, ಶೀಘ್ರದಲ್ಲೇ ಹೊಸ ಪಕ್ಷ ಸ್ಥಾಪನೆ!
ಕಾಲ ಕಾಲದಿಂದಲೂ ತಮಿಳುನಾಡಿನ ರಾಜಕಾರಣ ಸಿನಿಮಾದೊಂದಿಗೆ ಬೆಸೆದುಕೊಂಡೇ ಬಂದಿದೆ. ಎಂಜಿಆರ್, ಜಯಲಲಿತಾ, ವಿಜಯಕಾಂತ್‌ರಂತಹ ಹಲವು ಕಲಾವಿದರು, ನಟನೆ ಬಿಟ್ಟು ರಾಜಕೀಯಕ್ಕೆ ಧುಮುಕಿ ಯಶಸ್ವಿಯಾದ ಇತಿಹಾಸ ಇದೆ. ಇದೀಗ, ದಳಪತಿ ವಿಜಯ್ ‘ತಮಿಳಗ ವೆಟ್ರಿ ಕಳಗಂ’ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ವಿಜಯ್ ತಮ್ಮ ರಾಜಕೀಯ ಚೊಚ್ಚಲ ಇನ್ನಿಂಗ್ಸ್ನ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ದ್ರಾವಿಡ ಪಕ್ಷಗಳ ಬೈಲಾಗಳನ್ನು ವಿಶ್ಲೇಷಿಸಿದ್ದಾರೆ , ರಾಜಕೀಯ ತಂತ್ರಜ್ಞರನ್ನು ಭೇಟಿ ಮಾಡಿದ್ದಾರೆ. 234 ಕ್ಷೇತ್ರಗಳಲ್ಲಿ ಸಮೀಕ್ಷೆಗಳನ್ನು ನಡೆಸಿದ್ದಾರಂತೆ. 2026ರ ಎಲೆಕ್ಷನ್ ಗೆ ಇನ್ನೆರಡು ವರ್ಷ ಇರುವಾಗಲೇ ವಿಜಯ್, ರಾಜಕೀಯ ರಣಾಂಗಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕಳೆದೊಂದು ದಶಕದಿಂದ ರಾಜಕೀಯ ಪ್ರವೇಶದ ಕನಸು ಕಾಣುತ್ತಿದ್ದ ವಿಜಯ್, ಕಳೆದ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಕೂಲಿಕಾರ್ಮಿಕರು, ಮಹಿಳೆಯರು, ಮಧ್ಯಮ ವರ್ಗ, ವಿದ್ಯಾರ್ಥಿಗಳು..ಹೀಗೆ ಒಂದೊಂದು ವರ್ಗದವರ ಕಷ್ಟ ಸುಖ ವಿಚಾರಿಸಿಕೊಳ್ಳಲು ಅಭಿಮಾನಿಗಳ ಸಂಘ, ವೆಲ್‌ಫೇರ್ ಸಂಸ್ಥೆಗಳಿಗೆ ತಾಕೀತು ಮಾಡಿದ್ರು. ಪ್ರತಿ ಸಮಾರಂಭಗಳಲ್ಲೂ ವಿಜಯ್ ಭಾಷಣದಲ್ಲಿನ ಡೈಲಾಗ್ಗಳು, ರಾಜಕೀಯ ಪದಾರ್ಪಣೆಯ ಸುಳಿವು ನೀಡಿತ್ತು.
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಜಯಲಲಿತಾ ನಂತರ ಯಾರೂ ಯಶಸ್ವಿಯಾಗಲಿಲ್ಲ. ಅಣ್ಣಾದೊರೈ ಮತ್ತು ಕರುಣಾನಿಧಿ ‘ಸೈದ್ಧಾಂತಿಕ ಬ್ರಾಂಡ್’ಗಳು. ಎಂಜಿಆರ್ ಮತ್ತು ಜಯಲಲಿತಾ ಅವರನ್ನು ‘ಜನರ ಬ್ರಾಂಡ್‌ಗಳು’ ಎಂದು ನೋಡುತ್ತಿದ್ದ ತಮಿಳುನಾಡಿನಲ್ಲಿ ದಳಪತಿ ವಿಜಯ್, ಹೊಸ ಕಾಲಘಟ್ಟದ, ಹೊಸ ಜನರೇಷನ್ ಹುಡುಗರನ್ನು ಪ್ರಚೋದಿಸುತ್ತಾರೆ ಅಂತಾರೆ ವಿಶ್ಲೇಷಕರು.
ವರ್ಚಸ್ವಿ ನಾಯಕತ್ವದ ಕೊರತೆಯಿರುವ ತಮಿಳುನಾಡಿನಲ್ಲಿ ಚುನಾವಣಾ ಡೈನಾಮಿಕ್ಸ್ ಬದಲಿಸುವ, ಎಲ್ಲ ವರ್ಗದವರನ್ನೂ ಆಕರ್ಷಿಸುವ ‘ಮಾಸ್ ಅಪೀಲ್’ ಇರುವುದು ವಿಜಯ್ ಗೆ ಮಾತ್ರ. ಆದರೆ, ದಳಪತಿ ವಿಜಯ್ ಎಡಪಂಥೀಯ ಚಿಂತನೆಯುಳ್ಳವರು ಅನ್ನೋದು ಅವರ ಸಿನಿಮಾ ನೋಡಿದವರಿಗೆ ಅರ್ಥವಾಗದೇ ಇರದು. ಬಿಜೆಪಿ ನಾಯಕರು ಆಗಾಗ್ಗೆ ವಿಜಯ್ ಕ್ರಿಶ್ಚಿಯನ್ ಎಂದು ಒತ್ತಿ ಹೇಳುತ್ತಿದ್ದದ್ದು, ಐಟಿ ದಾಳಿ, ಎಐಡಿಎಂಕೆ ಆಡಳಿತದಲ್ಲಿ ವಿಜಯ್ ಸಿನಿಮಾಗಳಿಗೆ ಕೆಲವೊಮ್ಮೆ ಅಡ್ಡಿ ಉಂಟು ಮಾಡಿದ್ದು ಸುಳ್ಳೇನಲ್ಲ.
ತಮ್ಮ ಸಿನಿಮಾ ಡೈಲಾಗ್ ಮೂಲಕ ರಾಜಕೀಯ ಪಕ್ಷಗಳಿಗೆ ಚಾಟಿ ಬೀಸುತ್ತಿದ್ದ ವಿಜಯ್, ಪೊಲಿಟಿಕಲ್ ಗೇಮ್ ಶುರುಮಾಡಿದ್ದಾರೆ. ಜಯಲಲಿತಾ ಬಳಿಕ ರಾಜಕೀಯವಾಗಿ ತನ್ನ ಪ್ರಭಾವ ಕಳೆದುಕೊಂಡಿದ್ದ ತಮಿಳುನಾಡಿನಲ್ಲಿ ದಳಪತಿ ವಿಜಯ್ ಅಬ್ಬರಿಸ್ತಾರಾ ? ತಮಿಳು ಜನರ ಪಾಲಿಗೆ ಹೊಸ ಬ್ರಾಂಡ್ ಆಗ್ತಾರಾ. ಉತ್ತರ ಸಿಗಲು ಕಾಯಲೇಬೇಕು..!