ಎಲ್ಲವೂ ಅಂದುಕೊಂಡಂತೆ ನಡೆದರೆ ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಆದರೆ 2016ರಲ್ಲಿ ಅತಿಯಾದ ವಿಶ್ವಾಸ ದಿಂದಲೇ ಸೋತಿದ್ದ ಸ್ಟಾಲಿನ್‌ಗೆ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಕಿಲ್ಲ.
ನವದೆಹಲಿ (ಸೆ. 25): ತಮಿಳುನಾಡಿನಲ್ಲಿ ಬಿಜೆಪಿಗೆ ಗಳಿಸುವುದು ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಮುಂದಿನ ಜೂನ್‌ನಲ್ಲಿ ಸ್ಟಾಲಿನ್ ಮತ್ತು ಕಾಂಗ್ರೆಸ್ ಕೂಡಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೆ ಬಿಜೆಪಿಗೆ ಅಷ್ಟುಸಾಕು. ಹೀಗಾಗಿ ಜಯಲಲಿತಾರ ಶೂನ್ಯವನ್ನು ತುಂಬಲು ರಜನಿಕಾಂತ್ ಎಂಟ್ರಿ ಕೊಡುತ್ತಾರೆ ಎಂಬ ಆಸೆಯಲ್ಲಿದ್ದ ಬಿಜೆಪಿ ಕಾದು ಕಾದು ಸುಸ್ತಾಗಿ ಈಗ ಶಶಿಕಲಾ ಜೈಲಿನಿಂದ ಹೊರಗೆ ಬಂದರೆ ಏನಾದರೂ ಲಾಭವಾಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ.
ಡಿಎಂಕೆ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿಗೆ ತಮಿಳುನಾಡಿನಲ್ಲಿ ಸ್ವಂತ ಶಕ್ತಿ ಕಿಂಚಿತ್ತೂ ಇಲ್ಲ. ಇದಕ್ಕಾಗಿ ರಾಜಕೀಯಕ್ಕೆ ಬರುವಂತೆ ಬಿಜೆಪಿ ರಜನಿಯನ್ನು ಪುಸಲಾಯಿಸುತ್ತಲೇ ಇದೆ. ಆದರೆ ರಜನಿಗೆ ರಾಜಕೀಯಕ್ಕೆ ಬಂದು ಪರಿಶ್ರಮ ಪಟ್ಟು ಮುಖ್ಯಮಂತ್ರಿ ಆಗುವ ಆಸೆ ಇರುವಂತೆ ಕಾಣುತ್ತಿಲ್ಲ. 8 ತಿಂಗಳಿಗೆ ಚುನಾವಣೆ ಇರುವಾಗ ರಜನಿ ತಳಮಟ್ಟದಲ್ಲಿ ಓಡಾಡುತ್ತಿಲ್ಲ. ಹೋಗಲಿ ಪನ್ನೀರ್ ಸೆಲ್ವಂ ಮತ್ತು ಪಳನಿಸಾಮಿ ಜೊತೆ ಕೂಡ ಸೇರುತ್ತಿಲ್ಲ. ಬಿಜೆಪಿಗೆ ಬರಲು ತಯಾರಿಲ್ಲ.
ಹೀಗಾಗಿ ಬೇರೆ ದಾರಿ ಕಾಣದೆ ಬಿಜೆಪಿ ಶಶಿಕಲಾ ಮತ್ತು ಪಳನಿಸಾಮಿ ನಡುವೆ ರಾಜಿ ಮಾಡಿಸಲು ಪ್ರಯತ್ನಿಸುತ್ತಿದೆ. ಶಶಿಕಲಾ ಜನವರಿ ವೇಳೆಗೆ ಜೈಲಿನಿಂದ ಹೊರಬಂದರೆ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಪಳನಿ ಮತ್ತು ಪನ್ನೀರ್ ಹೆಸರಿನ ಮೇಲೆ ಚುನಾವಣೆಗೆ ಹೋಗಲು ಬಿಜೆಪಿಗೆ ಮನಸ್ಸಿದೆ. ಈಗ ಬಿಜೆಪಿಯ ಷರತ್ತಿಗೆ ಒಪ್ಪಿಕೊಂಡರೆ ಚುನಾವಣೆಯಲ್ಲಿ ಸೋತರೂ ಕೂಡ ಪಕ್ಷವನ್ನು ಕೈಯಲ್ಲಿ ಉಳಿಸಿಕೊಳ್ಳಬಹುದು ಎಂದು ಶಶಿಕಲಾ ಬಣ ಯೋಚಿಸುತ್ತಿದೆ.
ಬಿಹಾರದಲ್ಲಿ ಬಿಜೆಪಿ ಲೆಕ್ಕಾಚಾರ ವರ್ಕೌಟ್ ಆಗುತ್ತಾ?
ಸದ್ಯದ ಸ್ಥಿತಿಯ ಪ್ರಕಾರ ಪಳನಿಸಾಮಿ ಮತ್ತು ಪನ್ನೀರ್ ಸೆಲ್ವಂ ಯಾರಿಗೂ ಬೇಡವಾಗಿದ್ದಾರೆ. ಬರೀ ಇಬ್ಬರನ್ನು ಮುಂದಿಟ್ಟುಕೊಂಡರೆ ಜಯಲಲಿತಾ ಜೊತೆಗಿದ್ದ ಮತದಾರರನ್ನು ಉಳಿಸಲು ಸಾಧ್ಯವಿಲ್ಲ. ಹೀಗಾಗಿಯೇ ದಿಲ್ಲಿಯ ಬಿಜೆಪಿ ನಾಯಕರು ಶಶಿಕಲಾ ಜೈಲಿನಿಂದ ಹೊರಬರುವುದನ್ನು ಎದುರು ನೋಡುತ್ತಿದ್ದಾರೆ. ಪಳನಿಸಾಮಿ ಜೊತೆ ಶಶಿಕಲಾ ಬಂದು ಕೊನೆಗೆ ರಜನಿ ಕೂಡ ಸ್ಟಾಲಿನ್ ವಿರೋಧಿ ಗುಂಪು ಸೇರಿಕೊಂಡರೆ ತಮಿಳುನಾಡು ರಾಜಕಾರಣಕ್ಕೆ ಬಣ್ಣ ಬರಬಹುದು.
ಸ್ಟಾಲಿನ್ ಜೊತೆ ತಂತ್ರಗಾರ ಪಿಕೆ
ಎಲ್ಲವೂ ಅಂದುಕೊಂಡಂತೆ ನಡೆದರೆ ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಆದರೆ 2016ರಲ್ಲಿ ಅತಿಯಾದ ವಿಶ್ವಾಸ ದಿಂದಲೇ ಸೋತಿದ್ದ ಸ್ಟಾಲಿನ್‌ಗೆ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಕಿಲ್ಲ. ಹೀಗಾಗಿ ಅವರು ಬಿಹಾರದಿಂದ ಪ್ರಶಾಂತ ಕಿಶೋರ್‌ರನ್ನು ಚೆನ್ನೈಗೆ ಕರೆಸಿಕೊಂಡಿದ್ದಾರೆ. ಡಿಎಂಕೆ ಪ್ರಚಾರದ ಉಸ್ತುವಾರಿ ಪಿ.ಕೆ. ಬಳಿಯಿದೆ. 2016ರಲ್ಲಿ ವಿಜಯಕಾಂತ್‌ರ ತೃತೀಯ ರಂಗದ ಕಾರಣದಿಂದ ಜಯಲಲಿತಾ ಗೆದ್ದಿದ್ದರು. ಹೀಗಾಗಿ ಸ್ಟಾಲಿನ್ ತೃತೀಯ ರಂಗದೊಂದಿಗೆ ಕೂಡ ಮೈತ್ರಿ ಮಾಡಿಕೊಳ್ಳಲು ಓಡಾಡುತ್ತಿದ್ದಾರೆ. ಅಂದಹಾಗೆ ಕರುಣಾನಿಧಿ ಮತ್ತು ಜಯಲಲಿತಾ ಇಲ್ಲದ ಮೊದಲ ಚುನಾವಣೆ ಇದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ