
ಬೆಂಗಳೂರು (ಜೂ.16): ಅನ್ನಭಾಗ್ಯ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ರಾಜಕೀಯ ಮಾಡುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಛತ್ತೀಸ್‌ಗಢ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ. ಜುಲೈ ತಿಂಗಳಿಂದಲೇ ಹೆಚ್ಚುವರಿ ಅಕ್ಕಿ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ರಾಜ್ಯಕ್ಕೆ 2.28 ಲಕ್ಷ ಟನ್ ಅಕ್ಕಿ ನೀಡುವುದಾಗಿ ಒಪ್ಪಿಗೆ ನೀಡಿದ್ದ ಭಾರತೀಯ ಆಹಾರ ನಿಗಮವು ಕೇಂದ್ರದ ಸೂಚನೆ ಮೇರೆಗೆ ಅಕ್ಕಿ ನೀಡುವುದಿಲ್ಲ ಎಂದು ಹೇಳಿದೆ. ಹೀಗಾಗಿ ಬೇರೆ ನಿಗಮಗಳಿಂದ ಅಕ್ಕಿ ದೊರೆಯಲಿದೆಯೇ ಎಂಬ ಬಗ್ಗೆ ಪ್ರಯತ್ನ ಮಾಡಲಾಗುತ್ತಿದೆ.
ಜತೆಗೆ ಇತರೆ ರಾಜ್ಯಗಳೊಂದಿಗೂ ಚರ್ಚೆ ನಡೆಸಲಾಗುತ್ತಿದೆ ಎಂದರು. ಸಚಿವ ಸಂಪುಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಕೆಜಿಗೆ 34 ರು. ಹಾಗೂ 2.60 ರು. ಸಾಗಣೆ ವೆಚ್ಚದಂತೆ ಆಹಾರ ನಿಗಮವು ಅಕ್ಕಿ ನೀಡಲು ಒಪ್ಪಿತ್ತು. ಇದೀಗ ಇದೇ ದರಕ್ಕೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವ ಮೂಲಕ ಹೆಚ್ಚುವರಿಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ನೆರೆಯ ತೆಲಂಗಾಣದಿಂದ ಅಕ್ಕಿ ಖರೀದಿಸಿದರೆ ಸಾಗಣೆ ವೆಚ್ಚ ಕಡಿಮೆ ಮಾಡಿಕೊಳ್ಳಬಹುದು. ಛತ್ತೀಸ್‌ಗಢದಿಂದ ಖರೀದಿಸಬೇಕಾದರೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಯಿದೆ. ಹೀಗಾಗಿ ಎಲ್ಲ ರೀತಿಯಲ್ಲೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರತಾಪ್ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್ ರಾಜಕಾರಣಿಗಳು: ಎನ್.ಚಲುವರಾಯಸ್ವಾಮಿ
ನುಡಿದಂತೆ ನಡೆದಿರುವ ಕಾಂಗ್ರೆಸ್ ಸರ್ಕಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏನು ಗ್ಯಾರಂಟಿಗಳ ಮೂಲಕ ವಾಗ್ದಾನ ಮಾಡಿದ್ದೆವೋ ಅದರಂತೆ ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಆಡಳಿತ ಹಾಗು ಚಿಕ್ಕಬಳ್ಳಾಪುರ ವಿಭಾಗ ರಾಜ್ಯ ರಸ್ತೆ ಸಾರಿಗೆ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿ ಮಾತನಾಡಿ, ಭಾರತ ಸ್ವಾತಂತ್ರ್ಯ ಗಳಿಸಬೇಕಾದರೆ ಮಹಿಳೆಯರ ಪಾತ್ರವೂ ಸಹ ಮುಖ್ಯವಾದದು.
ಮುಖ್ಯವಾಗಿ ಝಾನ್ಸಿ ರಾಣಿ ಲಕ್ಷ್ಮೇ ಬಾಯ್, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಹಲವಾರು ಮಹಿಳೆಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಮಹಿಳೆಯರಿಗೂ ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಮಾನ ಕಲ್ಪಿಸಬೇಕೆಂದು ರಾಜಕೀಯ ಮುಖಂಡರು ಕಂಕಣಬದ್ದವಾಗಿದ್ದಾರೆಂದು ಹೇಳಿದರು. ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಮಾನ ಅವಕಾಶ ಮಾಡಿಕೊಟ್ಟಿದ್ದಾರೆ. ತಾಯಿಯಾದವಳಿಗೆ ನಮ್ಮ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವಿದೆ. ಇಂತಹವರಿಗೆ ಸಮಾಜದಲ್ಲಿ ಸಮಾನತೆ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ನಾಡಿನ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಲು ತೀರ್ಮಾನಿಸಿ ಅದರಂತೆ ಇಂದು ಪ್ರಥಮ ಗ್ಯಾರಂಟಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ಉಳಿದ ನಾಲ್ಕು ಆಶ್ವಾಸನೆಗಳನ್ನು ಹಂತಹಂತವಾಗಿ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಮಣಿಪುರ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ
ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಪ್ರಥಮ ದಿನದಂದು ತೂಬಗೆರೆ, ವಿಜಯಪುರ, ಬೂದಿಗೆರೆ, ಬೆಂಗಳೂರು ಹಾಗು ಚಿಕ್ಕಬಳ್ಳಾಪುರಕ್ಕೆ ಮೊದಲ ಪ್ರಯಾಣ ಬೆಳೆಸಿದವು. ಜಿಲ್ಲಾಧಿಕಾರಿ ಆರ್.ಲತಾ, ಉಪ ವಿಭಾಗಾಧಿಕಾರಿ ತೇಜಸ್‌ಕುಮಾರ್, ತಹಸೀಲ್ದಾರ್ ಶಿವರಾಜ್, ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ತಕ್ಷ ಬಿ.ರಾಜಣ್ಣ, ಮಾಜಿ ಪುರಸಭಾಧ್ಯಕ್ಷ ಸಿ.ಜಗನ್ನಾಥ್, ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ರಂಗಪ್ಪ , ಶಾಂತಕುಮಾರ್, ಕೆ.ಸಿ.ಮಂಜುನಾಥ್, ಮಾಜಿ ಪುರಸಭಾಧ್ಯಕ್ಷ ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸವಿತಾ ವೆಂಕಟಸ್ವಾಮಿ, ಅನಂತಕುಮಾರಿ ಚಿನ್ನಪ್ಪ ಉಪಸ್ಥಿತರಿದ್ದರು. ಉಚಿತ ಪ್ರಯಾಣದ ಯೋಜನೆ ಬಗ್ಗೆ ಆವತಿಯ ರಾಧಾಮಣಿ ಹಾಗು ಮಾಣಿಕ್ಯಮ್ಮ ಮಾತನಾಡಿದರು. ಸಾರಿಗೆ ಇಲಾಖೆಯ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.