ಮೀನುಗಾರರಿಗೆ ವಿನಾ ಕಾರಣ ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಶಾಸಕ ಟಿ.ಡಿ.ರಾಜೇಗೌಡ ವಾರ್ನಿಂಗ್‌

By Kannadaprabha NewsFirst Published Jun 14, 2023, 11:02 PM IST
Highlights

ಮೀನುಗಾರರು ಕೇವಲ ಮೀನುಗಾರಿಕೆ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಅದನ್ನು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಅಂತಹ ಮೀನುಗಾರರಿಗೆ ವಿನಾಕಾರಣ ತೊಂದರೆ ನೀಡಿದರೆ ಸುಮ್ಮನಿರಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ವನ್ಯಜೀವಿ ಅಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. 

ನರಸಿಂಹರಾಜಪುರ (ಜೂ.14): ಮೀನುಗಾರರು ಕೇವಲ ಮೀನುಗಾರಿಕೆ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಅದನ್ನು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಅಂತಹ ಮೀನುಗಾರರಿಗೆ ವಿನಾಕಾರಣ ತೊಂದರೆ ನೀಡಿದರೆ ಸುಮ್ಮನಿರಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ವನ್ಯಜೀವಿ ಅಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಮೀನುಗಾರರ ಸಮಸ್ಯೆ ಬಗ್ಗೆ ಪ್ರವಾಸಿ ಮಂದಿರದಲ್ಲಿ ವನ್ಯಜೀವಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಮೀನುಗಾರರು ಕಡು ಬಡವರು. ಅವರು ಮೀನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ. 

ಭದ್ರಾ ಹಿನ್ನೀರಿನಲ್ಲಿ ಮೀನುಗಾರಿಕೆ ಮಾಡುವಾಗ ವಿನಾ ಕಾರಣ ವನ್ಯಜೀವಿ ವಿಭಾಗದವರು ತೊಂದರೆ ಕೊಡುತ್ತಿದ್ದಾರೆ. ಅವರು ಮೀನು ಶಿಕಾರಿಗೆ ಹಿನ್ನೀರಿನಲ್ಲಿ ಬಿಟ್ಟಬಲೆಗಳನ್ನು ಸುಟ್ಟು ಹಾಕಲಾಗುತ್ತಿದೆ ಎಂದು ದೂರಿದ್ದಾರೆ. ಮೀನುಗಾರಿಕೆಗೆ ಮಾತ್ರಅವರು ಭದ್ರಾ ಹಿನ್ನೀರಿಗೆ ಬರುತ್ತಾರೆಯೇ ಹೊರತು ಬೇರೆ ರೀತಿಯ ಯಾ ವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಲು ಬರುವುದಿಲ್ಲ. ಒಂದು ವೇಳೆ ಅವರು ಬೇರೆ ಚಟುವಟಿಕೆಗಳಿಗೆ ಬಂದರೆ ಕ್ರಮ ಕೈಗೊಳ್ಳಿ. ಆದರೆ, ಮೀನುಗಾರಿಕೆಗೆ ಯಾವುದೇ ರೀತಿ ಯಿಂದಲೂ ತೊಂದರೆ ನೀಡಬಾರದು ಎಂದು ಭದ್ರಾ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಮಂಜುನಾಥ್‌ ಅವರಿಗೆ ಸೂಚಿಸಿದರು.

ಸರ್ಕಾರ ಬಂದು 20 ದಿನ ಆಗಿಲ್ಲ, ಯಾವ ಕಮಿಷನ್‌ ತೆಗೆದುಕೊಳ್ಳುವುದು: ಎಚ್‌ಡಿಕೆ ವಿರುದ್ಧ ಸಚಿವ ವೆಂಕಟೇಶ್‌ ಕಿಡಿ

ಅರಣ್ಯ ಇಲಾಖೆ ಅಧಿಕಾರಿಗಳು ಮೀನುಗಾರರೊಂದಿಗೆ ವಿಶ್ವಾಸದಿಂದ, ಪ್ರೀತಿಯಿಂದ ನಡೆದುಕೊಳ್ಳಬೇಕು. ಕಾಡನ್ನು ರಕ್ಷಿಸಲು ಅವರ ಸಹಕಾರ ಪಡೆಯಬೇಕು. ಕಾನೂನು ಚೌಕಟ್ಟಿನೊಳಗೆ ಹಾಗೂ ಮನುಷ್ಯತ್ವದಿಂದ ಕರ್ತವ್ಯ ನಿರ್ವಹಿಸಬೇಕು. ನೀವು ಬರುವ ಮುಂಚೆಯೇ ಈ ಮೀನುಗಾರರು ಇದ್ದರು. ನೀವು ಬರುವ ಮುಂಚೆಯೇ ಕಾಡು ಪ್ರಾಣಿಗಳು ಬಂದಿದೆ. ಕೇವಲ ನಿಮ್ಮಿಂದ ಮಾತ್ರ ಕಾಡನ್ನು ಉಳಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಮೀನುಗಾರ ಅಮ್ಜದ್‌ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ನಾವು ಮೀನುಗಾರಿಕೆಗೆ ಹೋದಾಗ ನಮ್ಮನ್ನು ಬೆದರಿಸುತ್ತಾರೆ. ನಿಮ್ಮ ಮೇಲೆ ಬೇರೆ ಯಾವುದಾದರೂ ಕೇಸ್‌ ದಾಖಲಿಸಿ ಒಳಗೆ ಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂದು ದೂರಿದರು.

ಭದ್ರಾ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಮಂಜುನಾಥ್‌ ಮಾತನಾಡಿ, ನಾವು ಮೀನುಗಾರರಿಗೆ ಮೀನು ಹಿಡಿಯುವಾಗ ಯಾವುದೇ ರೀತಿಯಲ್ಲೂ ತೊಂದರೆ ನೀಡಿಲ್ಲ. ನಮ್ಮ ಗಡಿಯ ಲ್ಲಿ ಮೀನು ಶಿಕಾರಿ ಮಾಡುತ್ತಾರೆ. ಮೀನುಗಾರರಿಗೆ ಮೀನುಗಾರಿಕೆ ಇಲಾಖೆ ಪರವಾನಿಗೆ ನೀಡಿದೆ. ಆದರೆ, ಪರವಾನಗಿ ಇಲ್ಲದವರು, ಬೇರೆ ಊರಿನವರೂ ಕೂಡ ಮೀನುಗಾರಿಕೆಗೆ ಬರುತ್ತಾರೆ. ಆದ್ದರಿಂದ ಯಾವ, ಯಾವ ಮೀನುಗಾರರಿಗೆ ಪರವಾನಗಿ ನೀಡಲಾಗಿದೆ ಎಂಬ ಪಟ್ಟಿಯನ್ನು ನೀಡಿದರೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಸಭೆಯಲ್ಲಿದ್ದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್‌ ಅವರಿಗೆ ಮೀನುಗಾರಿಕೆಗೆ ನೀಡಿದ ಪರವಾನಗಿಯ ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ ಪರವಾನಗಿ ಪಡೆದ ಮೀನುಗಾರರಿಗೆ ಗುರುತಿನ ಚೀಟಿ ವಿತರಿಸಬೇಕು ಎಂದು ಸೂಚಿಸಿದರು. ಇನ್ನು ಮುಂದೆ ಅರಣ್ಯ ಇಲಾಖೆ ಅಧಿಕಾರಿಗಳು ಮೀನುಗಾರರಿಗೆ ಯಾವುದೇ ಅಡೆತಡೆ ಮಾಡದೆ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಿದರು.

ಚಾಮರಾಜನಗರ ಜಿಲ್ಲೆಗೆ ಅಗತ್ಯವಿರುವಷ್ಟು ನೆರವು ನೀಡಲು ನಮ್ಮ ಸರ್ಕಾರ ಬದ್ಧ: ಸಚಿವ ಮಹದೇವಪ್ಪ

ಸಭೆಯಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಸಂತೋಷ್‌ ಸಾಗರ್‌, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಸಚಿನ್‌, ನರಸಿಂಹರಾಜಪುರ ಕೆಪಿಸಿಸಿ ಸದಸ್ಯ ಪಿ.ಆರ್‌.ಸದಾಶಿವ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೇರ್‌ಬೈಲ್‌ನಟರಾಜ್‌, ನಗರ ಘಟಕದ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಪಪಂ ಸದಸ್ಯರಾದ ಪ್ರಶಾಂತ್‌.ಎಲ್‌.ಶೆಟ್ಟಿ, ಜುಬೇದಾ, ಸೈಯದ್‌ವಸೀಂ, ಮೆಣಸೂರು ಗ್ರಾಪಂ. ಸದಸ್ಯರಾದ ಯಾಸ್ಮೀನ್‌, ಶಿಲ್ಪಾ, ಬಿನುಜೋಸೆಫ್‌, ಉಮಾ, ಮುಖಂಡರಾದ ಸುನೀಲ್‌ಕುಮಾರ್‌, ಕೆ.ಎಂ.ಸುಂದರೇಶ್‌, ಎಚ್‌.ಎಂ.ಮನು, ಅಬೂಬೇಕರ್‌, ಹೊನಗಾರ್‌ ರಮೇಶ್‌, ಮಾಳೂರು ದಿಣ್ಣೆರಮೇಶ್‌, ದೇವಂತ್‌ರಾಜ್‌ಗೌಡ, ಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

click me!